Janasevaka Yojana 'ಜನಸೇವಕ' ಉಪಕ್ರಮಕ್ಕೆ ಭಾರೀ ಜನಸ್ಪಂದನೆ, ಅಶ್ವತ್ಥ ನಾರಾಯಣ

Published : Dec 19, 2021, 06:25 PM IST
Janasevaka Yojana 'ಜನಸೇವಕ' ಉಪಕ್ರಮಕ್ಕೆ ಭಾರೀ ಜನಸ್ಪಂದನೆ, ಅಶ್ವತ್ಥ ನಾರಾಯಣ

ಸಾರಾಂಶ

 *'ಜನಸೇವಕ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶ್ವತ್ಥ ನಾರಾಯ * 'ಜನಸೇವಕ' ಉಪಕ್ರಮಕ್ಕೆ ಭಾರೀ ಜನಸ್ಪಂದನೆ ಎಂದ ಸಚಿವರು * ಮಲ್ಲೇಶ್ವರಂನಲ್ಲಿ ನ.1ರಿಂದಲೇ ಜನಸೇವಕ ಆರಂಭವಾಗಿತ್ತು

ಬೆಂಗಳೂರು, (ಡಿ.19): ಆಧಾರ್ ಕಾರ್ಡಿನಿಂದ ಹಿಡಿದು ಆಸ್ತಿ ಹಕ್ಕುಪತ್ರದವರಗೆ 9 ಇಲಾಖೆಯ 79 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ 'ಜನಸೇವಕ' ಕಾರ್ಯಕ್ರಮಕ್ಕೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಜನಸ್ಪಂದನ ವ್ಯಕ್ತವಾಗಿದೆ ಎಂದು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Dr CN Ashwath Narayan) ಹೇಳಿದ್ದಾರೆ. 

ಇಂದು(ಭಾನುವಾರ) ಅಶ್ವತ್ಥ್ ನಾರಾಯಣ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರದ ಅಟಲ್ ಉದ್ಯಾನ ಮತ್ತು ಕೋದಂಡರಾಮಪುರದ ಬಿಬಿಎಂಪಿ ಶಾಲೆ ಆವರಣದಲ್ಲಿ ಮುಂದುವರಿದ 'ಜನಸೇವಕ' ಯೋಜನೆ (Janasevaka yojana)ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

`ಜನಸೇವಕ’ ಯೋಜನೆಗೆ ಸಿಎಂ ಚಾಲನೆ: ನಿಮ್ ಮನೆ ಬಾಗಿಲಿಗೆ ಇವೆಲ್ಲಾ ಸೌಲಭ್ಯಗಳು ಬರ್ತವೆ!

ಮಲ್ಲೇಶ್ವರಂನಲ್ಲಿ ನ.1ರಿಂದಲೇ ಜನಸೇವಕ ಕಾರ್ಯಕ್ರಮವು ಚಾಲನೆ ಪಡೆದುಕೊಂಡಿದ್ದು, ಇತ್ತೀಚೆಗೆ ಕ್ಷೇತ್ರವ್ಯಾಪ್ತಿಯ ಎಲ್ಲ 7 ವಾರ್ಡುಗಳಿಗೂ ಇದನ್ನು ವಿಸ್ತರಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಮನೆ ಮನೆಗೂ ಜನಸೇವಕ ಮಾರ್ಗದರ್ಶನ ಕೈಪಿಡಿಯನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು. 

ಜನಸೇವಕ ಉಪಕ್ರಮದಡಿ ಜನರಿಗೆ ಅಗತ್ಯವಿರುವ ಸೇವೆಗಳು ಮನೆ ಬಾಗಿಲಿಗೇ ಬರುತ್ತಿವೆ. ನಿಗದಿತ ಸರಕಾರಿ ಶುಲ್ಕ ಮತ್ತು ಸೇವಾಶುಲ್ಕವನ್ನು ಡಿಜಿಟಲ್ ಪಾವತಿ ಮಾಡಿದರೆ ಸೇವೆಗಳು ನಿಗದಿತ ದಿನಗಳಲ್ಲಿ ನಿರಾಯಾಸವಾಗಿ ಸಿಗಲಿವೆ. ಇದು ಸಾರ್ವಜನಿಕರಿಗೆ ತುಂಬಾ ಸಂತಸ ತಂದಿದೆ ಎಂದರು.

ಜನಸೇವಕ ಕಾರ್ಯಕ್ರಮದಡಿ ಈಗ ಇರುವ ಸೇವೆಗಳ ಜತೆಗೆ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವರು ನುಡಿದರು. 

ಈ ಸಂದರ್ಭದಲ್ಲಿ ಅವರು ನೂರಾರು ಜನರಿಗೆ ಹಲವು ಸೇವೆಗಳನ್ನು ವಿತರಿಸಿ, ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು

ಕನ್ನಡ ರಾಜ್ಯೋತ್ಸವ (kannada Rajyotsava 2021)ದಂದು ವಿಧಾನಸೌಧದಲ್ಲಿ ಜನಸೇವಕ ಯೋಜನೆಗೆ (Janasevaka Scheme) ಸಿಎಂ ಬಸವರಾಜ ಬೊಮ್ಮಾಯಿ( Basavaraj Bommai) ಚಾಲನೆ ನೀಡಿದ್ದರು.

ಜನ ಸ್ಪಂದನ ವೆಬ್​ ಪೋರ್ಟಲ್​ (Janaspandana Web Portal) ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಾಗಿದೆ.

ಆಧಾರ್ ಕಾರ್ಡ್, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ `ಜನ ಸೇವಕ’ ಕಾರ್ಯಕ್ರಮ ಇದಾಗಿದ್ದು, ನಗರದ ಪ್ಯಾಲೇಸ್ ಗುಟ್ಟಹಳ್ಳಿಯ 4 ಮತ್ತು 5ನೇ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಜತೆ ತೆರಳಿದ ಮುಖ್ಯಮಂತ್ರಿಯವರು ವಿವಿಧ ಸೇವೆಗಳನ್ನು ಸಂಬಂಧಪಟ್ಟವರ ಮನೆಯೊಳಗೇ ಹೋಗಿ ತಲುಪಿಸಿದ್ದರು.

ಈ ಯೋಜನೆಯನ್ನು ಇಡೀ ಬೆಂಗಳೂರಿನಲ್ಲಿ ಜಾರಿ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮಲ್ಲೇಶ್ವರದಲ್ಲಿ ಆಗಿದೆ. ಜನವರಿ 26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದರು.

ಯಾವ್ಯಾವ ಸೇವೆಗಳು ಸಿಗಲಿವೆ?
`ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ- ಆರೋಗ್ಯ, ಕರ್ನಾಟಕ ಐಡಿ ಕಾರ್ಡ್ (ಹೆಲ್ತ್ ಕಾರ್ಡ್), ಮತದಾರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ಕ್ಷಿಪ್ರ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್ ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ. 

ದಣಿವಿನ ಉಸಾಬರಿ ಇಲ್ಲ, ಸುಲಭ ಶುಲ್ಕ
`ಜನಸೇವಕ’ ಯೋಜನೆಯಡಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬಹುದು. ಅಂದರೆ, ಆಗಬೇಕಾದ ಕೆಲಸಗಳಿಗಾಗಿ ಹತ್ತಾರು ಸಲ ಸುತ್ತುವುದು, ಟ್ರಾಫಿಕ್ ಜಾಮ್ ನ ಕಿರಿಕಿರಿ, ವ್ಯರ್ಥ ಕಾಲಹರಣ ಏನೂ ಇಲ್ಲ. ಸರಕಾರವು ಇದರಡಿಯಲ್ಲಿ ಕೇವಲ 115 ರೂ.ಶುಲ್ಕ ನಿಗದಿಪಡಿಸಿದ್ದು, ಇದರ ಮೇಲೊಂದಿಷ್ಟು ಸೇವಾಶುಲ್ಕ ಸೇರಿಸಲಾಗಿದೆ ಅಷ್ಟೆ. 

PREV
Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ