ಅಧಿಕಾರಾವಧಿ ಮುಗಿದರೂ ಟ್ಯಾಬ್‌ ಕೊಡದ ಬಿಬಿಎಂಪಿ ಸದಸ್ಯರು!

By Kannadaprabha NewsFirst Published Sep 30, 2020, 10:47 AM IST
Highlights

ಪ್ರತಿ ಟ್ಯಾಬ್‌ಗೆ 44 ಸಾವಿರ ವೆಚ್ಚ ಮಾಡಿದ್ದ ಬಿಬಿಎಂಪಿ| ಟ್ಯಾಬ್‌ ಹಿಂತಿರುಗಿಸುವಂತೆ ನೋಟಿಸ್‌ ನೀಡಲು ಸಿದ್ಧತೆ| ಟ್ಯಾಬ್‌ ಬಳಕೆ ಬಗ್ಗೆ ಮಾಹಿತಿ ಇಲ್ಲದ ಕೆಲವು ಸದಸ್ಯರು ತಮಗೆ ಪಾಲಿಕೆಯಿಂದ ನೀಡಲಾದ ಟ್ಯಾಬ್‌ಗಳನ್ನು ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಗೆ ಹಾಗೂ ಮಕ್ಕಳಿಗೆ ನೀಡಿದ್ದರು| 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.30): ಅಧಿಕಾರಾವಧಿ ಮುಗಿದಿದ್ದರೂ ಬಿಬಿಎಂಪಿ ನೀಡಿದ್ದ ಟ್ಯಾಬ್‌ಗಳನ್ನು ಹಿಂದಿರುಗಿಸದ ಪಾಲಿಕೆಯ 198 ವಾರ್ಡ್‌ಗಳ ಮಾಜಿ ಸದಸ್ಯರು ಮತ್ತು ನಾಮನಿರ್ದೇಶಿತ 20 ಮಾಜಿ ಸದಸ್ಯರಿಗೆ ನೋಟಿಸ್‌ ನೀಡಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿಯ ಸದಸ್ಯರ ಅಧಿಕಾರ ಅವಧಿ ಸೆ.10ಕ್ಕೆ ಮುಕ್ತಾಯಗೊಂಡು 20 ದಿನ ಕಳೆದಿದ್ದರೂ ಪಾಲಿಕೆ ನೀಡಿದ್ದ ದುಬಾರಿ ಮೌಲ್ಯದ ಟ್ಯಾಬ್‌ ಅನ್ನು ಮಾಜಿ ಸದಸ್ಯರು ವಾಪಸ್‌ ನೀಡಿಲ್ಲ. ಪಾಲಿಕೆಯ ಸುತ್ತೋಲೆ, ಮಾಸಿಕ ಸಭೆಯ ಚರ್ಚಾ ವಿಷಯ, ನಿರ್ಣಯ, ಸಭೆ ನಡೆಯುವ ಬಗ್ಗೆ ಮಾಹಿತಿ ಸೇರಿದಂತೆ ಪಾಲಿಕೆಯ ಇತರೆ ಮಾಹಿತಿಯನ್ನು ಪಾಲಿಕೆ ಸದಸ್ಯರಿಗೆ ತಲುಪಿಸುವ ಉದ್ದೇಶದಿಂದ 2018ರಲ್ಲಿ ಟ್ಯಾಬ್‌ ನೀಡಲಾಗಿತ್ತು.

ಒಟ್ಟು 225 ಟ್ಯಾಬ್‌ಗಳನ್ನು ಖರೀದಿ ಮಾಡಿ ನೀಡಲಾಗಿತ್ತು. ಪ್ರತಿ ಟ್ಯಾಬ್‌ಗೆ 38,600, ಟ್ಯಾಬ್‌ ಪೌಚ್‌ಗೆ 2 ಸಾವಿರ ಹಾಗೂ ಟ್ಯಾಬ್‌ಗೆ ತಂತ್ರಜ್ಞಾನ ಅಳವಡಿಕೆ, ಟ್ಯಾಬ್‌ ಬಳಕೆ ಮಾಡುವ ವಿಧಾನದ ಬಗ್ಗೆ ತರಬೇತಿ ನೀಡುವುದು ಸೇರಿದಂತೆ ತಲಾ 44 ಸಾವಿರ ವೆಚ್ಚ ಮಾಡಲಾಗಿತ್ತು. ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಹಾಗೂ ಪಾಲಿಕೆ ತಾಂತ್ರಿಕ ವಿಭಾಗ ಈಗ ಸದಸ್ಯರಿಂದ ಟ್ಯಾಬ್‌ ವಾಪಾಸ್‌ ಪಡೆಯುವ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಾಹಿತಿ ನೀಡಲು ಸೂಚನೆ

ಹಲವರ ಬಳಿ ಟ್ಯಾಬ್‌ಗಳೇ ಇಲ್ಲ:

ಟ್ಯಾಬ್‌ ಬಳಕೆ ಬಗ್ಗೆ ಮಾಹಿತಿ ಇಲ್ಲದ ಕೆಲವು ಸದಸ್ಯರು ತಮಗೆ ಪಾಲಿಕೆಯಿಂದ ನೀಡಲಾದ ಟ್ಯಾಬ್‌ಗಳನ್ನು ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಗೆ ಹಾಗೂ ಮಕ್ಕಳಿಗೆ ನೀಡಿದ್ದರು. ಇದರಿಂದ ಸದ್ಯ ಹಲವು ಮಾಜಿ ಸದಸ್ಯರ ಬಳಿ ಈಗ ಪಾಲಿಕೆಯಿಂದ ನೀಡಲಾದ ಟ್ಯಾಬ್‌ಗಳಿಲ್ಲ. ಹೀಗಾಗಿ, ಬಿಬಿಎಂಪಿಯಿಂದ ನೋಟಿಸ್‌ ನೀಡಿದರೂ ಪಾಲಿಕೆಯಿಂದ ನೀಡಲಾದ ಟ್ಯಾಬ್‌ಗಳು ವಾಪಾಸ್‌ ಬರುವುದು ಅನುಮಾನವಾಗಿದೆ.

ಬಳಕೆಯಾಗದ ಟ್ಯಾಬ್‌!

ಬಿಬಿಎಂಪಿಯಿಂದ ನೀಡಲಾದ ಟ್ಯಾಬ್‌ಗಳನ್ನು ಹಲವು ಪಾಲಿಕೆ ಸದಸ್ಯರು ಬಳಕೆಯೇ ಮಾಡಲಿಲ್ಲ. ಟ್ಯಾಬ್‌ಗಳನ್ನು ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಗೆ ತರಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ, ಬಹುತೇಕ ಸದಸ್ಯರು ತೆಗೆದುಕೊಂಡು ಬರಲಿಲ್ಲ. ಟ್ಯಾಬ್‌ ನೀಡಿದರೂ ಪಾಲಿಕೆ ಸದಸ್ಯರಿಗೆ ಕೌನ್ಸಿಲ್‌ ಸಭೆಯ ಚರ್ಚಾ ವಿಷಯಗಳು ಮತ್ತು ಸಭೆಯ ದಿನಾಂಕದ ನೋಟಿಸನ್ನು ಅಂಚೆ ಮೂಲಕ ಇಲ್ಲವೇ ಕೌನ್ಸಿಲ್‌ ಸಿಬ್ಬಂದಿ ಮನೆಗಳಿಗೆ ಅಥವಾ ವಾರ್ಡ್‌ ಕಚೇರಿಗೆ ತಲುಪಿಸುತ್ತಿದ್ದರು.

ಈ ಬಗ್ಗೆ ಮಾತನಾಡಿದ ಷಬಿಬಿಎಂಪಿ ಎನ್‌.ಮಂಜುನಾಥ ಪ್ರಸಾದ್‌ ಎನ್‌.ಮಂಜುನಾಥ ಪ್ರಸಾದ್‌ ಅವರು, ಅವಧಿ ಮುಕ್ತಾಯವಾದ ಮೇಲೆ ಪಾಲಿಕೆಯಿಂದ ನೀಡಲಾದ ಪ್ರತಿಯೊಂದು ವಸ್ತುವನ್ನು ಸದಸ್ಯರು ಪಾಲಿಕೆಗೆ ವಾಪಾಸ್‌ ನೀಡಬೇಕು. ಈ ನಿಟ್ಟಿನಲ್ಲಿ ಟ್ಯಾಬ್‌ ವಾಪಾಸ್‌ ಪಡೆಯುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 

click me!