ಐ ಪ್ಯಾಡ್‌ ವಾಪಸ್‌ ನೀಡಲು ಬಿಬಿಎಂಪಿ ಮಾಜಿ ಸದಸ್ಯರ ಮೀನಮೇಷ

By Kannadaprabha NewsFirst Published Mar 3, 2021, 8:58 AM IST
Highlights

ಬಿಬಿಎಂಪಿ ನೋಟಿಸ್‌ ನೀಡಿದ್ದರೂ ನಿರ್ಲಕ್ಷ್ಯ| 122 ಐ ಪ್ಯಾಡ್‌ ಬಾಕಿ| ನೋಟಿಸ್‌ ಜಾರಿ ಬಳಿಕ 94 ಮಂದಿ ವಾಪಾಸ್‌| ಉದ್ದೇಶದಿಂದ 2018-19ರಲ್ಲಿ ತಲಾ 44 ಸಾವಿರ ಮೌಲ್ಯದ ಐ ಪ್ಯಾಡ್‌ ಖರೀದಿ| 

ಬೆಂಗಳೂರು(ಮಾ.03): ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡು ಆರು ತಿಂಗಳು ಕಳೆದರೂ ಪಾಲಿಕೆಯಿಂದ ನೀಡಲಾದ ಐ ಪ್ಯಾಡ್‌ಗಳನ್ನು ಹಿಂತಿರುಗಿಸಲು ನೂರಕ್ಕೂ ಹೆಚ್ಚು ಮಾಜಿ ಸದಸ್ಯರು ಮೀನಮೇಷ ಎಣಿಸುತ್ತಿದ್ದಾರೆ.

ಬಿಬಿಎಂಪಿಯ ಸುತ್ತೋಲೆಗಳು, ಕೌನ್ಸಿಲ್‌ ಸಭೆಯಲ್ಲಿ ಚರ್ಚೆಗೆ ಬರುವ ವಿಷಯಗಳು, ನಿರ್ಣಯ ಪ್ರತಿಗಳನ್ನು ಬಿಬಿಎಂಪಿ ಸದಸ್ಯರಿಗೆ ತಲುಪಿಸುವ ಉದ್ದೇಶದಿಂದ 2018-19ರಲ್ಲಿ ತಲಾ 44 ಸಾವಿರ ಮೌಲ್ಯದ ಐ ಪ್ಯಾಡ್‌ಗಳನ್ನು ಖರೀದಿಸಲಾಗಿತ್ತು. 197 ಪಾಲಿಕೆ ಸದಸ್ಯರು ಹಾಗೂ 19 ನಾಮ ನಿರ್ದೇಶಿತ ಸದಸ್ಯರಿಗೆ ಒಟ್ಟು 216 ಟ್ಯಾಬ್‌ಗಳನ್ನು ನೀಡಲಾಗಿತ್ತು. ಇದೀಗ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡರೂ ತಮಗೆ ನೀಡಲಾದ ಐ ಪ್ಯಾಡ್‌ಗಳನ್ನು ವಾಪಾಸ್‌ ಬಿಬಿಎಂಪಿಗೆ ನೀಡಿಲ್ಲ.

ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ

ನೋಟಿಸ್‌ ಜಾರಿ ಬಳಿಕ 94 ಮಂದಿ ವಾಪಾಸ್‌:

ಐ ಪ್ಯಾಡ್‌ ವಾಪಾಸ್‌ ಮಾಡದ ಹಿನ್ನೆಲೆಯಲ್ಲಿ ಮಾಜಿ ಸದಸ್ಯರಿಗೆ ಬಿಬಿಎಂಪಿ ಆಯುಕ್ತರು ನೋಟಿಸ್‌ ಜಾರಿಗೊಳಿಸಿದ ಬಳಿಕ 88 ಮಾಜಿ ಸದಸ್ಯರು ಹಾಗೂ 6 ಮಂದಿ ನಾಮ ನಿರ್ದೇಶಿತ ಸದಸ್ಯರು ಐ ಪ್ಯಾಡ್‌ ವಾಪಾಸ್‌ ಮಾಡಿದ್ದಾರೆ. ಇನ್ನೂ 109 ಮಾಜಿ ಸದಸ್ಯರು ಹಾಗೂ 13 ನಾಮ ನಿರ್ದೇಶಿತ ಸದಸ್ಯರು ಹಿಂತಿರುಗಿಸುವುದು ಬಾಕಿ ಇದೆ ಎಂದು ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ವಾಪಸ್‌ ನೀಡದ ನಾಯಕರು

ಮೇಯರ್‌ ಆಗಿದ್ದ ಬಿ.ಎನ್‌.ಮಂಜುನಾಥರೆಡ್ಡಿ, ಜಿ.ಪದ್ಮಾವತಿ, ಸಂಪತ್‌ರಾಜ್‌, ಪ್ರತಿಪಕ್ಷದ ನಾಯಕರಾಗಿದ್ದ ಮಹಮ್ಮದ್‌ ರಿಜ್ವಾನ್‌ ನವಾಬ್‌, ಅಬ್ದುಲ್‌ ವಾಜೀದ್‌, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮಂಜುನಾಥರಾಜು, ಇಮ್ರಾನ್‌ ಪಾಷಾ, ಡಿ.ಚಂದ್ರಪ್ಪ, ಈ ಹಿಂದೆ ಬಿಬಿಎಂಪಿ ಸದಸ್ಯರಾಗಿದ್ದ ಶಾಸಕಿ ಕೆ.ಪೂರ್ಣಿಮಾ ಹಾಗೂ ಸಂಸದ ಮುನಿಸ್ವಾಮಿ ಅವರು ಐ ಪ್ಯಾಡ್‌ ವಾಪಾಸ್‌ ನೀಡಿಲ್ಲ.
 

click me!