2 ದಿನದಲ್ಲಿ 2ನೇ ಹಂತದ ಕೊರೋನಾ ಲಸಿಕೆ ಪಡೆವರ ಪಟ್ಟಿ ಸಿದ್ಧ

By Kannadaprabha News  |  First Published Jan 25, 2021, 7:08 AM IST

ಬೆಂಗಳೂರಿನಲ್ಲಿ ಎರಡನೇ ಹಂತದಲ್ಲಿ ಬಿಬಿಎಂಪಿಯ 18 ಸಾವಿರ ಪೌರ ಕಾರ್ಮಿಕರು ಸೇರಿದಂತೆ 30 ಸಾವಿರ ನೌಕರರು, ಕಂದಾಯ ಇಲಾಖೆಯ 10 ಸಾವಿರ ಅಧಿಕಾರಿ ಸಿಬ್ಬಂದಿ ಹಾಗೂ ಪೊಲೀಸರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಕೋವಿಡ್‌ ಲಸಿಕೆ ಪಡೆಯಲಿದ್ದಾರೆ: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌


ಬೆಂಗಳೂರು(ಜ.25): ಇನ್ನೆರಡು ದಿನದಲ್ಲಿ 2ನೇ ಹಂತದಲ್ಲಿ ಕೋವಿಡ್‌ ಲಸಿಕೆ ಪಡೆಯುವ ಬಿಬಿಎಂಪಿ, ಕಂದಾಯ, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಇತರೆ ಇಲಾಖೆಯ ಫಲಾನುಭವಿಗಳ ಪಟ್ಟಿಸಿದ್ಧವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಎರಡನೇ ಹಂತದಲ್ಲಿ ಬಿಬಿಎಂಪಿಯ 18 ಸಾವಿರ ಪೌರ ಕಾರ್ಮಿಕರು ಸೇರಿದಂತೆ 30 ಸಾವಿರ ನೌಕರರು, ಕಂದಾಯ ಇಲಾಖೆಯ 10 ಸಾವಿರ ಅಧಿಕಾರಿ ಸಿಬ್ಬಂದಿ ಹಾಗೂ ಪೊಲೀಸರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಕೋವಿಡ್‌ ಲಸಿಕೆ ಪಡೆಯಲಿದ್ದಾರೆ. ಈ ಪೈಕಿ ಈಗಾಗಲೇ ಬಿಬಿಎಂಪಿ 20 ಸಾವಿರ ಕೋವಿಡ್‌ ವಾರಿಯರ್ಸ್‌ ಹೆಸರುಗಳನ್ನು ಕೋವಿನ್‌ ಪೋರ್ಟ್‌ಲ್‌ನಲ್ಲಿ ನೋಂದಣಿ ಮಾಡಲಾಗಿದೆ. ಇನ್ನು ಬೆಂಗಳೂರು ನಗರ ಜಿಲ್ಲಾಡಳಿತ 17 ಸಾವಿರ ಕೋವಿಡ್‌ ವಾರಿಯರ್ಸ್‌ ಹೆಸರುಗಳನ್ನು ನೋಂದಣಿ ಮಾಡಿದೆ. ಎರಡು ದಿನದಲ್ಲಿ ಎಷ್ಟುಮಂದಿ ಎರಡನೇ ಹಂತದಲ್ಲಿ ಕೋವಿಡ್‌ ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂಬುದು ತಿಳಿಯಲಿದೆ ಎಂದರು.
ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ಬಿಬಿಎಂಪಿಗೆ 1.05 ಲಕ್ಷ ಕೋವಿಡ್‌ ಲಸಿಕೆ ಹಂಚಿಕೆ ಮಾಡಿದ್ದು, ಅದರಲ್ಲಿ 40 ಸಾವಿರ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಸರ್ಕಾರ ಎರಡನೇ ಕಂತಿನ ಲಸಿಕೆಯನ್ನು ಶೀಘ್ರದಲ್ಲಿ ಬಿಬಿಎಂಪಿಗೆ ವಿತರಣೆ ಮಾಡಲಿದೆ ಎಂದು ತಿಳಿಸಿದರು.

Latest Videos

undefined

ಲಸಿಕೆ ಬೇಡ ಎಂದು ಬರೆದುಕೊಟ್ಟಿಲ್ಲ

ದೇಶದಲ್ಲೇ ಅತಿ ಹೆಚ್ಚು ಮಂದಿ, ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ನಗರದಲ್ಲಿ ಭಾನುವಾರವೂ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನ ನಿಗಧಿತ ಸಂಖ್ಯೆಯಲ್ಲಿ ಶೇ.50ರಷ್ಟುಮಂದಿ ಲಸಿಕೆ ಪಡೆಯುತ್ತಿದ್ದಾರೆ. ಯಾರಿಗೂ ಒತ್ತಾಯ ಮಾಡುತ್ತಿಲ್ಲ. ಜತೆಗೆ ಈವರೆಗೆ ನಗರದಲ್ಲಿ ಯಾವೊಬ್ಬ ಆರೋಗ್ಯ ಸಿಬ್ಬಂದಿಯೂ ತಮಗೆ ಕೋವಿಡ್‌ ಲಸಿಕೆ ಬೇಡ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟಿಲ್ಲ ಎಂದು ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

ಸಾರ್ವಜನಿಕವಾಗಿ ಕೊರೋನಾಗೆ ವಾಮಾಚಾರ ಮದ್ದು ಎಂದಿದ್ದ ಆರೋಗ್ಯ ಸಚಿವೆಗೆ ಪಾಸಿಟೀವ್!

ಪರೀಕ್ಷೆ ಸಂಖ್ಯೆ ಕಡಿಮೆ ಮಾಡಿಲ್ಲ

ನಗರದಲ್ಲಿ ಕೋವಿಡ್‌ ಸೋಂಕು ಪತ್ತೆ ಪ್ರಮಾಣ ಕಡಿಮೆಯಾದರೂ ಪರೀಕ್ಷೆ ಪ್ರಮಾಣದಲ್ಲಿ ಇಳಿಕೆ ಮಾಡಿಲ್ಲ. ಪ್ರತಿ ದಿನ ಸುಮಾರು 35 ಸಾವಿರ ಮಂದಿಯನ್ನು ಕೋವಿಡ್‌ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

ನಿನ್ನೆ 29 ಕೇಂದ್ರಗಳಲ್ಲಿ 1080 ಮಂದಿಗೆ ಲಸಿಕೆ

ನಗರದಲ್ಲಿ ಭಾನುವಾರ ಒಟ್ಟು 3,049 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ 1,080 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ನಗರದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಒಂಭತ್ತನೆ ದಿನ ಪೂರೈಸಿದ್ದು, ಭಾನುವಾರ ನಗರದ ಬಿಬಿಎಂಪಿಯ ಎರಡು ಹಾಗೂ ಖಾಸಗಿ ಆಸ್ಪತ್ರೆಯ 31 ಕೋವಿಡ್‌ ಲಸಿಕಾ ಕೇಂದ್ರದಲ್ಲಿ 3,049 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಬಿಬಿಎಂಪಿಯ ಎರಡು ಹಾಗೂ ಖಾಸಗಿ ಆಸ್ಪತ್ರೆಯ 27 ಲಸಿಕಾ ಕೇಂದ್ರದಲ್ಲಿ 1,080 ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರ ಪೈಕಿ ಬಿಬಿಎಂಪಿಯ 102 ಹಾಗೂ ಖಾಸಗಿ ಆಸ್ಪತ್ರೆ 978 ಆರೋಗ್ಯ ಸಿಬ್ಬಂದಿಗಳಾಗಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
 

click me!