ಲಾಕ್‌ಡೌನ್‌ ಮಧ್ಯೆ ಮಾಂಸಾಹಾರ ಪ್ರಿಯರಿಗೊಂದು ಸಂತಸದ ಸುದ್ದಿ..!

By Kannadaprabha NewsFirst Published Apr 17, 2020, 7:55 AM IST
Highlights

ಮಾಂಸವನ್ನ ಹೆಚ್ಚಿನ ದರಕ್ಕೆ ಮಾಂಸ ಮಾರುವಂತಿಲ್ಲ| ಮಾಂಸಕ್ಕೆ ದರ ನಿಗದಿ ಪಡಿಸಿದ ಬಿಬಿಎಂಪಿ| ಕೋಳಿ 125ರಿಂದ 180, ಕುರಿ 700 ರು.| ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಹಾಗೂ ತ್ಯಾಜ್ಯ ಎಸೆದರೆ ದಂಡ|

ಬೆಂಗಳೂರು(ಏ.17): ಬಿಬಿಎಂಪಿ ಸೂಚಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಗುರುವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಆಯುಕ್ತರು, ಮಾ.23ರಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ಕುರಿ, ಮೇಕೆ, ಕೋಳಿ ಮಾಂಸ ಮಾರಾಟದ ಮಳಿಗೆಗಳಲ್ಲಿ ದುಬಾರಿ ದರದಲ್ಲಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿರುತ್ತವೆ. ಹೀಗಾಗಿ ಬಬಿಎಂಪಿ ದರ ನಿಗದಿ ಮಾಡಿ ಗುರುವಾರ ಆದೇಶಿಸಿದ್ದು, ಕುರಿ, ಮೇಕೆ ಮಾಂಸ ಪ್ರತಿ ಕೆ.ಜಿ.ಗೆ 700 ರು, ಕೋಳಿ ಮಾಂಸ ಪ್ರತಿ ಕೆ.ಜಿಗೆ 125ರಿಂದ 180 ರು. ದರ ನಿಗದಿಪಡಿಸಲಾಗಿದೆ.

ನಾನ್‌ವೆಜ್‌ಗಾಗಿ ಶಿಸ್ತಿನ ಸಿಪಾಯಿಗಳಾದ ಜನ: ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಮಂದಿ!

ಅಗತ್ಯ ಆಹಾರ ವಸ್ತುವಾದ ಮಾಂಸವನ್ನು ಏಕಾಏಕಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆ ಉಂಟಾಗಲಿದೆ. ಹಾಗಾಗಿ, ಬಿಬಿಎಂಪಿ ನಿಗದಿ ಪಡಿಸಿರುವ ದರದಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಬಿಬಿಎಂಪಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಕರ್ನಾಟಕ ಮುನ್ಸಿಪಲ್‌ ಕಾಯ್ದೆ 1976ರಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಉಗುಳಿದರೆ ದಂಡ

ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಹಾಗೂ ತ್ಯಾಜ್ಯ ಎಸೆಯುವುದನ್ನು ಮಾಡಿದರೆ ಮೊದಲ ಬಾರಿಗೆ 1 ಸಾವಿರ ರು. ಎರಡನೇ ಬಾರಿಗೆ 2 ಸಾವಿರ ರು ದಂಡ ವಿಧಿಸುವುದಾಗಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್‌ ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಟ್ವಿಟರ್‌ ಮೂಲಕ ಎಚ್ಚರಿಕೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ಅವರು, ಸಾರ್ವಜನಿಕ ಸ್ಥಳ ಕಲುಷಿತಗೊಳಿಸುವುದಕ್ಕೆ ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ನಿಯಮದ ಪ್ರಕಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವಾರ್ಡ್‌ ಮಾರ್ಷಲ್‌ ಹಾಗೂ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 

click me!