ಬೈಕಲ್ಲಿ 430 ಕಿ.ಮೀ. ಹೋಗಿ ಕ್ಯಾನ್ಸರ್‌ ಔಷಧ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್‌..!

Kannadaprabha News   | Asianet News
Published : Apr 17, 2020, 07:42 AM IST
ಬೈಕಲ್ಲಿ 430 ಕಿ.ಮೀ. ಹೋಗಿ ಕ್ಯಾನ್ಸರ್‌ ಔಷಧ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್‌..!

ಸಾರಾಂಶ

ಆಯುಕ್ತರ ಕಚೇರಿ ಕಟ್ರೋಲ್‌ ರೂಂ ಮುಖ್ಯ ಪೇದೆ ಕಾಳಜಿ| ಸುದ್ದಿವಾಹಿನಿಯಲ್ಲಿ ಬಂದ ಸಮಸ್ಯೆ ಹೇಳಿಕೊಂಡಿದ್ದ ರೋಗಿ| ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಬೈಕ್‌ನಲ್ಲೇ ಧಾರವಾಡಕ್ಕೆ ತೆರಳಿ ಔಷಧ ತಲುಪಿಸಿ ಬೆಂಗಳೂರಿಗೆ ಮರಳಿದ ಪೇದೆ|

ಬೆಂಗಳೂರು(ಏ.17): ಲಾಕ್‌ಡೌನ್‌ ಸಂದರ್ಭದಲ್ಲಿ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ ಕ್ಯಾನ್ಸರ್‌ ರೋಗಿ ನೋವಿಗೆ ಸ್ಪಂದಿಸಿದ ಕಾನ್‌ಸ್ಟೇಬಲ್‌ವೊಬ್ಬರು, ತಾವೇ 430 ಕಿ.ಮೀ.ಬೈಕ್‌ನಲ್ಲಿ ತೆರಳಿ ಔಷಧ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು ಪೊಲೀಸ್‌ ಆಯುಕ್ತ ಕಚೇರಿಯ ನಿಯಂತ್ರಣ ಕೊಠಡಿ ಹೆಡ್‌ ಕಾನ್‌ಸ್ಟೇಬಲ್‌ ಎಸ್‌.ಕುಮಾರಸ್ವಾಮಿ ಅವರೇ ಸಾಮಾಜಿಕ ಕಾಳಜಿ ತೋರಿಸಿದ್ದು, ಅವರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರ ಹರಿದಿದೆ. ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರು ಕುಮಾರಸ್ವಾಮಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

 

ಎ.11ರಂದು ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಧಾರವಾಡದ ಕ್ಯಾನ್ಸರ್‌ ಪೀಡಿತ ಉಮೇಶ್‌, ನನಗೆ ಅಗತ್ಯವಿರುವ ಔಷಧವು ಬೆಂಗಳೂರಿನಲ್ಲಿ ಮಾತ್ರ ಸಿಗಲಿದೆ. ಈಗ ಲಾಕ್‌ಡೌನ್‌ನಿಂದಾಗಿ ಔಷಧ ತರಿಸಿಕೊಳ್ಳಲು ಕಷ್ಟವಾಗಿದೆ ಎಂದು ಅವರು ನೋವು ಹೇಳಿಕೊಂಡಿದ್ದರು. 

ಈ ಕಾರ್ಯಕ್ರಮದ ವೀಕ್ಷಿಸಿದ ಕುಮಾರಸ್ವಾಮಿ ಅವರ ಹೃದಯವು ಕ್ಯಾನ್ಸರ್‌ ವೇದನೆಗೆ ಮಿಡಿದಿದೆ. ಹೀಗಾಗಿ, ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಅವರು ಏ.12ರಂದು ಬೈಕ್‌ನಲ್ಲೇ ಧಾರವಾಡಕ್ಕೆ ತೆರಳಿ ಔಷಧ ತಲುಪಿಸಿ ಬೆಂಗಳೂರಿಗೆ ಮರಳಿದ್ದಾರೆ.

ಲಾಕ್‌ಡೌನ್‌: ಬದುಕು ಕಲಿಸಿದ ಹಸಿವು, ಪೇದೆಯಿಂದ ನಿರ್ಗತಿಕರಿಗೆ ಅನ್ನದಾನ..!

‘ನಮ್ಮ ಹತ್ತಿರದ ಬಂಧುಗಳು ಕ್ಯಾನ್ಸರ್‌ನಿಂದ ಹಿಂಸೆ ಅನುಭವಿಸಿದ್ದನ್ನು ಕಂಡಿದ್ದೆ. ಸುದ್ದಿವಾಹಿನಿಯಲ್ಲಿ ಧಾರವಾಡದ ಕ್ಯಾನ್ಸರ್‌ ರೋಗಿ, ತನಗೆ ಔಷಧ ದೊರೆಯುತ್ತಿಲ್ಲವೆಂದಾಗ ಮನಸ್ಸಿಗೆ ನೋವಾಯಿತು. ಆ ಸುದ್ದಿವಾಹಿನಿ ಕಚೇರಿಗೆ ಕೂಡಲೇ ತೆರಳಿ ರೋಗಿಯ ಮೊಬೈಲ್‌ ಸಂಖ್ಯೆ ಪಡೆದು ಮಾತನಾಡಿದೆ. ಅವರಿಗೆ ಖುಷಿಯಾಯಿತು. ಬಳಿಕ ಆನ್‌ಲೈನ್‌ನಲ್ಲಿ ಔಷಧ ಬುಕ್‌ ಮಾಡಿದ ಅವರು, ನನ್ನ ವಿಳಾಸ ಕೊಟ್ಟಿದ್ದರು. ಎರಡು ತಾಸು ತಡವಾಗಿದ್ದರೂ ಔಷಧ ಸಿಗುತ್ತಿರಲ್ಲಿಲ್ಲ’ ಎಂದು ಕುಮಾರಸ್ವಾಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಔಷಧ ಸ್ವೀಕರಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದೆ. ನಿಯಂತ್ರಣ ಕೊಠಡಿಯ ಎಸಿಪಿ ಅವರಿಗೆ ವಿಷಯ ತಿಳಿಸಿದೆ. ಕೂಡಲೇ ವಿಶೇಷ ಅನುಮತಿ ನೀಡಿದರು. ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರಿನಿಂದ ಬೈಕ್‌ನಲ್ಲಿ ಹೊರಟು ಮಧ್ಯಾಹ್ನ 2ಕ್ಕೆ ಧಾರವಾಡ ತಲುಪಿದೆ. ಅಲ್ಲಿನ ಮಣಿನಗರದಲ್ಲಿದ್ದ ರೋಗಿಗೆ ಔಷಧ ತಲುಪಿಸಿದೆ. ಮತ್ತೆ ಸಂಜೆ 4.30ಕ್ಕೆ ಮರು ಪ್ರಯಾಣ ಆರಂಭಿಸಿದೆ. ರಾತ್ರಿ 10.30ಕ್ಕೆ ಚಿತ್ರದುರ್ಗದ ಅಗ್ನಿಶಾಮಕ ದಳ ಠಾಣೆಯಲ್ಲಿ ಕೆಲ ಗಂಟೆ ವಿಶ್ರಾಂತಿ ಪಡೆದೆ. ಮತ್ತೆ ಬೆಳಗ್ಗೆ 4.30ಕ್ಕೆ ಬೈಕ್‌ ಓಡಿಸಿಕೊಂಡು ಬೆಳಗ್ಗೆ 10ಕ್ಕೆ ಬೆಂಗಳೂರಿಗೆ ಸೇರಿದೆ. ನಂತರ ಕಚೇರಿಗೆ ತೆರಳಿ ಎಸಿಪಿ ಅವರಿಗೆ ಕರ್ತವ್ಯಕ್ಕೆ ವರದಿ ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!