ಸಿಲ್ಕ್‌ಬೋರ್ಡ್ ಸರ್ವೀಸ್ ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ: ಬಿಬಿಎಂಪಿ ಮುಖ್ಯ ಆಯುಕ್ತ

Published : Jul 24, 2022, 06:07 PM IST
  ಸಿಲ್ಕ್‌ಬೋರ್ಡ್ ಸರ್ವೀಸ್  ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ: ಬಿಬಿಎಂಪಿ ಮುಖ್ಯ ಆಯುಕ್ತ

ಸಾರಾಂಶ

ಬೆಂಗಳೂರಿನ ಸಿಲ್ಕ್‌ಬೋರ್ಡ್ ಜಂಕ್ಷನ್‌ ಸೇರಿ ರಾತ್ರಿ ವಿವಿಧೆಡೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿವಿಧ ಬಿಬಿಎಂಪಿ  ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

 ಬೆಂಗಳೂರು (ಜು.24): ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‌ ಸಮೀಪದ ಬಸ್‌ ನಿಲ್ದಾಣದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗದಂತೆ ತಾತ್ಕಾಲಿಕ ಪಂಪ್‌ ಅಳವಡಿಸಿ ರಾಜಕಾಲುವೆಗೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ರಾತ್ರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಆರ್‌ಸಿಎಲ್‌ ವತಿಯಿಂದ ಮಾಡಲಾದ ಡಾಂಬರೀಕರಣ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಳೆ ನೀರು ರಸ್ತೆ ಮೇಲೆ ನಿಲ್ಲದಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಬಸ್‌ ನಿಲ್ದಾಣದಲ್ಲಿ ಡಾಂಬರೀಕರಣ, ದೀಪಗಳು ಹಾಗೂ ಶೌಚಾಲಯ ನಿರ್ಮಾಣ ಸೇರಿದಂತೆ ಬಾಕಿಯಿರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಸ್‌ ನಿಲ್ದಾಣವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವಂತೆ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಲಯ ಆಯುಕ್ತರಾದ ಡಾ. ಹರೀಶ್‌ಕುಮಾರ್‌, ಜಯರಾಮ  ರಾಯಪುರ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ ಶಿನ್ನಾಳ್ಕರ್‌, ಮುಖ್ಯ ಎಂಜಿನಿಯರ್‌ಗಳಾದ ನರಸಾರಾಮ್‌ ರಾವ್‌, ಪ್ರಹ್ಲಾದ್‌, ಶಶಿಕುಮಾರ್‌ ಬಸವರಾಜ್‌ ಕಬಾಡೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ರಸ್ತೆಯಲ್ಲಿ ಸ್ವಚ್ಛತೆ ಕಾಪಾಡುತ್ತೇವೆ’: ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಬೆಂಗಳೂರು ಜಲಮಂಡಳಿ, ಬಿಎಂಆರ್‌ಸಿಎಲ್‌ ಮತ್ತು ಬಿಬಿಎಂಪಿ ಕಾಮಗಾರಿಯಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಜಯದೇವ ಜಂಕ್ಷನ್‌ನಲ್ಲಿ ಇದ್ದ ಕಸವನ್ನು ಬಿಎಂಆರ್‌ಸಿಎಲ್‌ ತೆಗೆದು ಹಾಕಿದೆ. ಭಾನುವಾರ ಬಿಟಿಎಂ ಕಡೆಗೆ ಹೋಗುವ ಮಾರ್ಗದ ಜಂಕ್ಷನ್‌ಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಸಹ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ರಸ್ತೆಯಲ್ಲಿ ಸ್ವಚ್ಛತೆ ಕಾಪಾಡುತ್ತೇವೆ ಎಂದು ಹೇಳಿದರು.

ರಸ್ತೆ ಬದಿಯ ಮರಗಳಿಂದ ವಿದ್ಯುತ್‌ ಕಂಬಗಳಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಮರಗಳ ರೆಂಬೆ, ಕೊಂಬೆಗಳನ್ನು ತೆರವು ಮಾಡಲಾಗುವುದು. ನಗರ ಸಂಚಾರದ ಸಂದರ್ಭದಲ್ಲಿ ಯಾವ್ಯಾವ ಜಂಕ್ಷನ್‌ಗಳಿಗೆ ಭೇಟಿ ಕೊಟ್ಟು ಅಲ್ಪಾವಧಿಯಲ್ಲಿ ಆಗಬೇಕಾದ ಕಾರ್ಯಗಳನ್ನು ಸೂಚಿಸಿದ್ದೇವೋ ಅವುಗಳ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ತಿಳಿಸಿದ್ದೇವೆ ಎಂದು ತಿಳಿಸಿದರು.

ಎಲ್ಲ ಜಂಟಿ ಆಯುಕ್ತರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದೇವೆ. ಹಾಗೆಯೇ 27 ಸ್ವೀಪಿಂಗ್‌ ಮಷಿನ್‌ ಮೂಲಕ ಪ್ರಮುಖ ರಸ್ತೆಗಳಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ಬಿಎಂಆರ್‌ಸಿಎಲ್‌, ಬಿಬಿಎಂಪಿ ನಡೆಸುತ್ತಿರುವ ಕಾಮಗಾರಿಯ ಸ್ಥಳಗಳಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

 

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!