
ಬೆಂಗಳೂರು (ಆ.25): ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಯಿಂದ ಕೈಗೊಂಡ ಬೀದಿ ನಾಯಿಗಳ ಗಣತಿ ಪೂರ್ಣಗೊಂಡಿದ್ದು, ಕಳೆದ 2019ಕ್ಕೆ ಹೋಲಿಕೆ ಮಾಡಿದರೆ ನಗರದಲ್ಲಿ ಶೇಕಡ 30ರಷ್ಟು ಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ಕಳೆದ ಜುಲೈನಲ್ಲಿ ನಗರದಲ್ಲಿ ಬೀದಿ ನಾಯಿಗಳ ಗಣತಿ ನಡೆಸಲಾಗಿತ್ತು. ಗಣತಿಯ ಮಾಹಿತಿಯನ್ನು ಕ್ರೂಢೀಕರಿಸಲಾಗುತ್ತಿದ್ದು, ಮೂಲಗಳ ಪ್ರಕಾರ ನಗರದಲ್ಲಿ ಶೇ.30ರಷ್ಟುಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.
2019ರಲ್ಲಿ ನಡೆಸಿದ ಬೀದಿ ನಾಯಿ ಗಣತಿಯಲ್ಲಿ ನಗರದಲ್ಲಿ 3.09 ಲಕ್ಷ ಬೀದಿ ನಾಯಿಗಳು ಇವೆ ಎಂದು ತಿಳಿದು ಬಂದಿತ್ತು. ಇದೀಗ ಸುಮಾರು 2.20 ಲಕ್ಷದಷ್ಟುಬೀದಿ ನಾಯಿಗಳು ಇವೆ ಎಂದು ಅಂದಾಜಿಸಲಾಗಿದೆ. ಬೀದಿ ನಾಯಿಗಳ ಸಂಖ್ಯೆಗೆ ಇಳಿಕೆಗೆ ಪೂರಕವಾಗಿ ನಗರದಲ್ಲಿ ನಾಯಿ ದಾಳಿ ಅಥವಾ ಕಡಿತ ಪ್ರಕರಣದಲ್ಲಿಯೂ ಇಳಿಕೆ ಆಗಿದೆ. 2019ರಲ್ಲಿ 42 ಸಾವಿರ ನಾಯಿ ಕಚ್ಚುವ ಪ್ರಕರಣ ದಾಖಲಾಗುತ್ತಿದ್ದವು. ಇದೀಗ 17 ಸಾವಿರಕ್ಕೆ ಇಳಿಕೆಯಾಗಿದೆ.
ಜಿಲ್ಲೆಗಳಲ್ಲೂ ‘ಆಪರೇಷನ್ ಹಸ್ತ’ಕ್ಕೆ ಡಿಕೆಶಿ ಹುಕುಂ: ಸಿದ್ಧಾಂತ ಒಪ್ಪಿ ಬರುವವರನ್ನೆಲ್ಲಾ ಸೇರಿಸಿಕೊಳ್ಳಿ
ಕಡಿಮೆಗೆ ಕಾರಣ ಏನು?: ಬಿಬಿಎಂಪಿ ಪಶುಪಾಲನೆ ವಿಭಾಗವು ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ನಾಯಿಗಳ ಸಂತಾನಹರಣ ಹಾಗೂ 1.50 ಲಕ್ಷ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡುವುದು ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಇಳಿಕೆ ಆಗಿದೆ. ಜತೆಗೆ, ಕೊರೋನಾ ಸೋಂಕಿನ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದ ಬೀದಿ ನಾಯಿಗಳಿಗೆ ಉಂಟಾದ ಆಹಾರದ ಕೊರತೆಯೂ ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಶೇ.80 ಸಂತಾನಹರಣ: ನಗರದಲ್ಲಿ ಶೇ.80ರಷ್ಟು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. ಇನ್ನು ಶೇ.20ರಷ್ಟುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಬಾಕಿ ಇದೆ. ನಾಯಿ ಗಣತಿ ಹಾಗೂ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಿದರೆ ಸಂತಾನ ಹರಣ ಚಿಕಿತ್ಸೆಗೆ ಇನ್ನಷ್ಟುಅನುಕೂಲವಾಗಲಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗ ಜಂಟಿ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.
ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ
ಇನ್ನೊಂದು ವಾರದಲ್ಲಿ ನಾಯಿ ಗಣತಿ ವರದಿ?: ನಾಲ್ಕು ವರ್ಷದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಗಣತಿ ನಡೆಸಲಾಗಿದೆ. ಗಣತಿಗಾಗಿ ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 50 ಸಿಬ್ಬಂದಿ ಮತ್ತು ಬಿಬಿಎಂಪಿಯ 50 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿಯನ್ನು ನಿಯೋಜಿಸಲಾಗಿತ್ತು. ಬೈಕ್‌ನಲ್ಲಿ ಬೀದಿ ಬೀದಿ ಸುತ್ತಿ ಗಣತಿ ನಡೆಸಿದ್ದಾರೆ. ಒಬ್ಬ ಸಿಬ್ಬಂದಿಯು ಬೈಕ್ ಚಾಲನೆ ಮಾಡಿದರೆ ಮತ್ತೊಬ್ಬರು ಮೊಬೈಲ್‌ನಲ್ಲಿ ಬೀದಿ ನಾಯಿ ಫೋಟೋ ತೆಗೆದು ಆ್ಯಪ್ ಮೂಲಕ ದಾಖಲಿಸಿ ಗಣತಿ ಕಾರ್ಯ ನಡೆಸಿದ್ದಾರೆ. ಗಣತಿಯ ಮಾಹಿತಿಯನ್ನು ಕ್ರೂಢೀಕರಣ ಮಾಡಲಾಗುತ್ತಿದೆ. ವಾರ್ಡ್‌ವಾರು ಎಷ್ಟುಗಂಡು, ಎಷ್ಟು ಹೆಣ್ಣು ನಾಯಿ, ಎಷ್ಟುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಆಗಿದೆ. ಇಷ್ಟುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಆಗಿಲ್ಲ ಎಂಬ ಮಾಹಿತಿಯನ್ನು ಒಳಗೊಂಡ ಸಂಪೂರ್ಣ ವರದಿ ಇನ್ನೊಂದು ವಾರದಲ್ಲಿ ಲಭ್ಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.