ಬೆಂಗಳೂರು: 15 ದಿನದಲ್ಲಿ 100 ಕಡೆ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಗುರಿ

By Kannadaprabha NewsFirst Published Jun 16, 2023, 7:30 AM IST
Highlights

ಕೆ.ಆರ್‌.ಪುರ ಹಾಗೂ ಮಹದೇವಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣ ಒತ್ತುವರಿ ಆಗಿದೆ. ಹಾಗಾಗಿ, ಅವರಿಗೆ ಗುರಿ ನೀಡಲಾಗಿದೆ. ತೆರವು ಕಾರ್ಯಾಚರಣೆ ನಡೆಸುವುದಕ್ಕೆ ತಹಸೀಲ್ದಾರ್‌ ಅವರಿಂದ ವಿಚಾರಣೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ತೆರವು ಮಾಡುವುದಕ್ಕೆ ಸೂಚನೆ ನೀಡಲಾಗಿದೆ: ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಬೆಂಗಳೂರು(ಜೂ.16):  ಮುಂಗಾರು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಸುಮಾರು 100 ಒತ್ತುವರಿಗಳನ್ನು 15 ದಿನದಲ್ಲಿ ತೆರವುಗೊಳಿಸುವುದಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಒಟ್ಟು 571 ಸರ್ವೇ ಸಂಖ್ಯೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದು ಗುರುತಿಸಲಾಗಿದೆ. ಕೆಲವು ಸರ್ವೆ ಸಂಖ್ಯೆಯಲ್ಲಿ 25ಕ್ಕೂ ಅಧಿಕ ಒತ್ತುವರಿ ಮಾಡಿಕೊಳ್ಳಲಾಗಿದೆ. ಕಳೆದ 15 ದಿನದಲ್ಲಿ ಸುಮಾರು 25ರಿಂದ 30 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಮುಂದಿನ 15 ದಿನದಲ್ಲಿ 100 ಒತ್ತುವರಿ ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದು ವಿವರಿಸಿದರು.

ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

ಕೆ.ಆರ್‌.ಪುರ ಹಾಗೂ ಮಹದೇವಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣ ಒತ್ತುವರಿ ಆಗಿದೆ. ಹಾಗಾಗಿ, ಅವರಿಗೆ ಗುರಿ ನೀಡಲಾಗಿದೆ. ತೆರವು ಕಾರ್ಯಾಚರಣೆ ನಡೆಸುವುದಕ್ಕೆ ತಹಸೀಲ್ದಾರ್‌ ಅವರಿಂದ ವಿಚಾರಣೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ತೆರವು ಮಾಡುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಈಗಾಗಲೇ 110 ಕಡೆ ತೆರವು ಕಾರ್ಯಾಚರಣೆ ನಡೆಸಬಹುದು ಎಂದು ತಹಸೀಲ್ದಾರ್‌ ಅವರು ಆದೇಶಿಸಿದ್ದಾರೆ. ಈ ಪೈಕಿ 56 ಮಹದೇವಪುರ ವ್ಯಾಪ್ತಿಯಲ್ಲಿ ಇವೆ. ಉಳಿದ ಕಡೆ ತಹಸೀಲ್ದಾರ್‌ ಅವರಿಂದ ಆದೇಶ ಪಡೆದು ತೆರವು ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

Bengaluru: ಈಜಿಪುರ ಫ್ಲೈಓವರ್‌ ಕಾಮಗಾರಿ ಪೂರ್ಣಕ್ಕೆ ಒಂದೇ ಕಂಪನಿ ಆಸಕ್ತಿ!

ಪಾಲಿಕೆಯ ಎಂಟೂ ವಲಯಗಳಲ್ಲಿ ಬಾಕಿಯಿರುವ ಒತ್ತುವರಿಗಳನ್ನು ತೆರವು ಮಾಡಿ ಮಳೆ ನೀರುಗಾಲುವೆಗಳನ್ನು ನಿರ್ಮಾಣ ಮಾಡಿ ಎಲ್ಲಿಯೂ ಜಲಾವೃತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಲಯ ಆಯುಕ್ತರಾದ ಜಯರಾಮ್‌ ರಾಯಪುರ, ಡಾ. ತ್ರಿಲೋಕ್‌ ಚಂದ್ರ, ರವೀಂದ್ರ, ಡಾ. ಹರೀಶ್‌ ಕುಮಾರ್‌, ಡಾ. ದೀಪಕ್‌, ಪ್ರೀತಿ ಗೆಹ್ಲೋಟ್‌, ವಲಯ ಜಂಟಿ ಆಯುಕ್ತರು ಇದ್ದರು. 

ರಾಜಕಾಲುವೆ ಒತ್ತುವರಿ ತೆರವು ಬಾಕಿ ವಿವರ
ವಲಯ ತೆರವು ಬಾಕಿ
ಪೂರ್ವ 88
ಪಶ್ಚಿಮ 4
ದಕ್ಷಿಣ 0
ಕೋರಮಂಗಲ ಕಣಿವೆ 0
ಯಲಹಂಕ 79
ಮಹದೇವಪುರ 243
ಬೊಮ್ಮನಹಳ್ಳಿ 30
ಆರ್‌.ಆರ್‌.ನಗರ 36
ದಾಸರಹಳ್ಳಿ 124

click me!