ಕೊಡಗು: ಬಿದಿರಿನ ತಡಿಕೆ ಪ್ಲಾಸ್ಟಿಕ್ ಹೊದಿಕೆಯ ಜೋಡಿಯಲ್ಲಿ ನಡೆಯುತ್ತಿದೆ ಆದಿವಾಸಿ ಬುಡಕಟ್ಟು ಜನರ ಬದುಕು!

By Ravi Janekal  |  First Published Mar 10, 2024, 9:25 PM IST

ದೇಶ ಅಷ್ಟು ಪ್ರಗತಿಯೊಂದಿದೆ, ಇಷ್ಟು ಅಭಿವೃದ್ಧಿ ಸಾಧಿಸಿದೆ. ಪ್ರಪಂಚ ಸಾಕಷ್ಟು ಬದಲಾಗಿದೆ ಎಂದೆಲ್ಲಾ ಹೇಳುತ್ತೇವೆ ಅಲ್ವಾ? ಆದರೆ ಇದೊಂದು ಹಾಡಿಯಲ್ಲಿ ಕನಿಷ್ಟ ಕುಡಿಯುವುದಕ್ಕೂ ನೀರಿಲ್ಲ. ನೆಮ್ಮದಿಯಾಗಿ ಬಿಸಿಲು, ಚಳಿ, ಮಳೆಗಾಳಿಯಿಂದ ರಕ್ಷಣೆ ಪಡೆಯಲು ಒಂದು ಸೂರಿಲ್ಲ!


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

 ಕೊಡಗು (ಮಾ.10): ದೇಶ ಅಷ್ಟು ಪ್ರಗತಿಯೊಂದಿದೆ, ಇಷ್ಟು ಅಭಿವೃದ್ಧಿ ಸಾಧಿಸಿದೆ. ಪ್ರಪಂಚ ಸಾಕಷ್ಟು ಬದಲಾಗಿದೆ ಎಂದೆಲ್ಲಾ ಹೇಳುತ್ತೇವೆ ಅಲ್ವಾ? ಆದರೆ ಇದೊಂದು ಹಾಡಿಯಲ್ಲಿ ಕನಿಷ್ಟ ಕುಡಿಯುವುದಕ್ಕೂ ನೀರಿಲ್ಲ. ನೆಮ್ಮದಿಯಾಗಿ ಬಿಸಿಲು, ಚಳಿ, ಮಳೆಗಾಳಿಯಿಂದ ರಕ್ಷಣೆ ಪಡೆಯಲು ಒಂದು ಸೂರಿಲ್ಲ. ಹೌದು ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತರಾಗಿ ಇಂತಹ ದುಃಸ್ಥಿತಿಯ ಬದುಕು ದೂಡುತ್ತಿರುವುದು ಬೇರೆಲ್ಲೂ ಅಲ್ಲ, ಹೊರ ಪ್ರಪಂಚಕ್ಕೆ ದಕ್ಷಿಣದ ಕಾಶ್ಮೀರ, ಸ್ಕಾಟ್ಲ್ಯಾಂಡ್ ಆಫ್ ಕೂರ್ಗ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲೇ ಎಂದರೆ ನಂಬಲೇಬೇಕು.

 ಪೊನ್ನಂಪೇಟೆ ತಾಲೂಕಿನ ಬೇಗೂರು ಸಮೀಪದ ಪಾರೆ ನಾಣಚ್ಚಿ ಗದ್ದೆ ಹಾಡಿಯ ನೈಜಸ್ಥಿತಿ ಇದು. ಇವರ ಮನೆಗಳನೊಮ್ಮೆ ನೋಡಿ. ಪ್ಲಾಸ್ಟಿಕ್ ಹೊದಿಸಿದ ಮೇಲ್ಚಾವಣಿ, ಗೋಡೆಗಳ ಬದಲಿಗೆ ಗುಡಿಸಲುಗಳಿಗೆ ಬಿದಿರಿನ ತಡಿಕೆಯ ಆಸರೆ. ಕಾಡುಪ್ರಾಣಿಗಳು ಯಾವಾಗ ಲಗ್ಗೆ ಇಡುತ್ತವೆಯೋ ಎಂಬ ಜೀವ ಭಯದಲ್ಲಿಯೇ ರಾತ್ರಿ ಕಳೆಯಬೇಕು. ಮನೆಯದ್ದು ಮಾತ್ರವೇ ಈ ಕಥೆಯಲ್ಲ, ರಸ್ತೆ, ಕುಡಿಯುವ ನೀರು, ವಿದ್ಯುತ್ ಹೀಗೆ ಯಾವುದೊಂದರ ಸೌಲಭ್ಯವಿಲ್ಲದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ದಯನೀಯ ಜೀವನ ಸಾಗಿಸುತ್ತಿರುವ ನಾಣಚ್ಚಿಗದ್ದೆ ಹಾಡಿಯ ಆದಿವಾಸಿ ಬುಡಕಟ್ಟು ಜನರ ದಯನೀಯ ಸ್ಥಿತಿ ಇದು.

Tap to resize

Latest Videos

undefined

 

ನನಗೆ ಟಿಕೆಟ್ ಸಿಗುವುದು ನಿಶ್ಚಿತ, ಪ್ರತಾಪ್ ಸಿಂಹ ಸೋಲು ಖಚಿತ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ 

ಈ ಹಾಡಿಯಲ್ಲಿ 70 ಕುಟುಂಬಗಳಿದ್ದು, 250 ಮಂದಿ ವಾಸಿಸುತ್ತಿದ್ದಾರೆ. ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಐದು ತೆರೆದ ಬಾವಿ ತೋಡಲಾಗಿದೆ. ಆದರೆ ಯಾವುದರಲ್ಲೂ ನೀರಿಲ್ಲ. ಇನ್ನು ಜಲಜೀವನ್ ಮಿಷನ್ ಯೋಜನೆಯಡಿ ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ನಾಲ್ಕು ವರ್ಷಗಳೇ ಕಳೆದಿವೆ. ಪ್ರತೀ ಜೋಪಡಿಯ ಬಳಿ ಒಂದು ನಲ್ಲಿಯನ್ನೂ ಹಾಕಲಾಗಿದೆ. ಆದರೆ ಇದುವರೆಗೆ ಒಂದು ಹನಿ ನೀರು ಬಂದಿಲ್ಲ. ಈ ಕುರಿತು ಹಾಡಿ ನಿವಾಸಿ ಜೆ.ಆರ್. ಕಾಳ ಮತ್ತು ಹಾಡಿ ನಿವಾಸಿ ಮಹಿಳೆಯನ್ನು ಕೇಳಿದರೆ ಜನಜೀವನ್ ಮಿಷನ್ ಯೋಜನೆಯಡಿ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆಂದು ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಆದರೆ ಅದರಲ್ಲಿ ನೀರೇ ಬರಲಿಲ್ಲ. ಹೀಗಾಗಿ ಇಂದಿಗೂ ಹಾಡಿ ನಿವಾಸಿಗಳು ದೂರದಿಂದ ನೀರನ್ನು ಹೊತ್ತುಕೊಂಡು ಬರಬೇಕಿದೆ. 

ಈ ಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಆದರೆ ಹಾಡಿಯಲ್ಲಿ ಮಾತ್ರ ಕತ್ತಲೆಯದ್ದೇ ಸಾಮ್ರಾಜ್ಯ. ಸೋಲಾರ್ ದೀಪ ಅಳವಡಿಸಿದ್ದರೂ ಒಂದು ದೀಪವೂ ಉರಿಯದೆ ವರ್ಷಗಳೆ ಕಳೆದಿವೆ. ರಾತ್ರಿಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದೇ ಕಾಡುಪ್ರಾಣಿಗಳ ಭಯದ ನಡುವೆ ಜೀವ ಕೈಯಲ್ಲಿಡಿದು ರಾತ್ರಿ ಕಳೆಯಬೇಕಿದೆ.

 ಹಾಡಿ ನಿವಾಸಿ ಜೆ.ಕೆ.ಅಣ್ಣಯ್ಯ ಮಾತನಾಡಿ, ನೀರು, ಕರೆಂಟ್, ಸೋಲಾರ್ ವ್ಯವಸ್ಥೆ ಇಲ್ಲದೇ ಹಾಡಿ ನಿವಾಸಿಗಳು ಪರಿತಪಿಸುವಂತಾಗಿದೆ. ಚುನಾವಣೆಗಳ ಸಂದರ್ಭ ಬರುವ ರಾಜಕಾರಣಿಗಳು ಭರವಸೆ ನೀಡಿ ಹೋಗುತ್ತಾರೆ. ಮತ್ತೆ ತಿರುಗಿ ನೋಡುವುದಿಲ್ಲ ಎನ್ನುತ್ತಾರೆ. ಹಾಡಿಯ ಮಕ್ಕಳು ಕಾಡುಪ್ರಾಣಿಗಳ ಭಯದ ನಡುವೆ ಜೀವ ಕೈಯಲ್ಲಿಡಿದು ಒಂದು ಕಿಲೋಮೀಟರ್ ಕಾಡಿನ ರಸ್ತೆಯಲ್ಲಿ ನಡೆದು ಶಾಲೆಗಳಿಗೆ ತೆರಳಬೇಕಿದೆ. ಇದನ್ನು ಯಾರಿಗೆ ಹೇಳಿದರೂ ಕಿವಿಕೇಳದವರಂತೆ ಆಗಿದ್ದಾರೆ ಎಂದು ನಿವಾಸಿ ಅಣ್ಣಯ್ಯ ಆಕ್ರೋಶ ಹೊರಹಾಕಿದ್ದಾರೆ. 

ಕೊಡಗಿನ ನಿರ್ಗತಿಕರ ಮೇಲೆ ದರ್ಪ ತೋರಿಸಿದ್ರಾ ಕಂದಾಯ ಇಲಾಖೆ ಅಧಿಕಾರಿಗಳು, 18 ಶೆಡ್ಡುಗಳು ನೆಲಸಮ

ಇಲ್ಲಿನ ನಿವಾಸಿಗಳಿಗೆ ಸಮುದಾಯ ಭವನ ಹಾಗೂ ಪುಟಾಣಿ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇಲ್ಲದಿರುವುದರಿಂದ ಹಾಡಿಯ ಮಕ್ಕಳು ಅಕ್ಷರ ಕಲಿಕೆಯಿಂದ ದೂರವೇ ಉಳಿಯುವಂತಾಗಿದೆ. ಹಾಡಿಯಲ್ಲಿ ಕಚ್ಚಾರಸ್ತೆ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ತಿರುಗಾಡಲು ತೊಂದರೆ ಆಗುತ್ತದೆ. ಹೀಗಾಗಿ ಸಿಮೆಂಟ್ ರಸ್ತೆ ನಿರ್ಮಿಸಿಕೊಡಬೇಕೆಂದು ಹಾಡಿ ನಿವಾಸಿ ಅಜೇಯ ಒತ್ತಾಯಿಸಿದ್ದಾರೆ. 

ಹಾಡಿಯ ಸಮಸ್ಯೆಗಳ ಬಗ್ಗೆ ಅರಣ್ಯ ಹಕ್ಕು ಸಮಿತಿಯಿಂದ ಗ್ರಾಮ ಸಭೆ ನಡೆಸಿ, ಅಳಲನ್ನು ತೋಡಿಕೊಂಡರೂ, ಹಾಡಿ ನಿವಾಸಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ. ಮೂಲಸೌಲಭ್ಯ ನೀಡಿ ಎಂದು ಅಂಗಲಾಚುತ್ತಿರುವ ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿ ನಿವಾಸಿಗಳ ಕೂಗು ಇನ್ನಾದರೂ ಸಂಬಂಧಿಸಿದವರಿಗೆ ಕೇಳಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

click me!