Kalyana Karnataka Utsav 2023: ಕಲ್ಯಾಣ ಕರ್ನಾಟಕದ ಗತ ವೈಭವದ ವಾರಸುದಾರರಾಗಿ ಎಂದು ಸೇಡಂ ಕರೆ

By Gowthami K  |  First Published Feb 24, 2023, 9:26 PM IST

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೊಂದಲು ಸಕಾರಾತ್ಮಕ ಚಿಂತನೆಗಳು ಮೈಗೂಡಿಸಿಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.


ಕಲಬುರಗಿ (ಫೆ.24): ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೊಂದಲು ಸಕಾರಾತ್ಮಕ ಚಿಂತನೆಗಳು ಮೈಗೂಡಿಸಿಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು. ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ ಡಾ.ಮಹಾದೇವಪ್ಪ ರಾಂಪುರೆ ಬಯಲು ರಂಗಮಂದಿರದಲ್ಲಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಾನಪದ, ವಚನ ಹಾಗೂ ಸುಗಮ ಸಂಗೀತ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗ ಎಂದೆಂದಿಗೂ ಮುಂದುವರೆದ ಪ್ರದೇಶವಾಗಿದೆ. ಇದನ್ನು ಮುಂದುವರೆದ ಪ್ರದೇಶವಾಗಿಯೇ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದರಲ್ಲೂ ಸಂಗೀತ, ಸಾಹಿತ್ಯ, ಕಲಾವಿದರು, ಸಾಹಿತಿಗಳ ಮೇಲೆ ಹೆಚ್ಚಿನ ಜವಬ್ದಾರಿ ಇದೆ ಎಂದ ಅವರು ನಮ್ಮ ಭಾಗದವರು ನಕಾರಾತ್ಮಕತೆಯನ್ನು ಮೈಕೊಡವಿ ನಿಲ್ಲಬೇಕೆಂದು ಒತ್ತಿ ಹೇಳಿದರು.

ಇತ್ತೀಚೆಗಷ್ಟೇ ಒಂದು ಆಧುನಿಕ ಜನಪದ ಶೈಲಿಯ ಗಾಯನದಲ್ಲಿ ಬರಿ ನಕಾರಾತ್ಮಕ ವಿಚಾರಗಳೇ ತುಂಬಿ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅಕ್ಕತಂಗಿಯರು ಬೆಳೆದು ದ್ವೇಶಿಗಳು ಆಗುತ್ತಾರೆ ಎಂಬರ್ಥದಲ್ಲಿ ಮೂಡಿಬಂದಿದ್ದು ಸೋಜಿಗ ಉಂಟು ಮಾಡಿದೆ ಇದು ಸರಿಯಲ್ಲ ಎಂದು ಹೇಳಿದ ಅವರು, ಇದಕ್ಕೆ ಬದಲಿಗೆ ರಾಮಾಯಣದ ಸಾರ, ಮಹಾಭಾರತದ ಕಥೆಗಳು ಸಕಾರಾತ್ಮಕತೆ ಬಿತ್ತುವ ರಾಜಾ ಹರಿಶ್ಚಂದ್ರನಂತಹ ಕಾವ್ಯಗಳು ಸಾಹಿತ್ಯಗಳಿಗೆ ಒತ್ತು ಕೊಡಬೇಕು, ರಾಮಾಯಣ ದಂತಹ ಸಾಹಿತ್ಯ ರಚನೆ ಅಗತ್ಯತೆಯನ್ನು ಒತ್ತಿಹೇಳಿದ ಅವರು ಈ ನಿಟ್ಟಿನಲ್ಲಿ ಈ ಭಾಗದ ಸಾಹಿತಿ, ಚಿಂತಕರು ಚಿಂತನೆ ಮಾಡಬೇಕು, ಕಲಾವಿದರು ಇಂತಹ ತತ್ವಗಳನ್ನು ಪ್ರಚುರಪಡಿಸಬೇಕೆಂದು ಸಲಹೆ ನೀಡಿದರು.

Latest Videos

undefined

ಹರಿಶ್ಚಂದ್ರ ಸಹನೆ ತಾಳ್ಮೆಯಿಂದ ಸತ್ಯ ಪ್ರತಿಪಾದಕನಾಗಿ ನಿಂತ ಕಾರಣಕ್ಕೆ ಇಂದಿಗೂ ಸ್ಮರಣೀಯರಾಗಿದ್ದಾರೆ. ಒಂದೇ ಸುಳ್ಳು ಹೇಳಿದ್ದರೂ ಅಪಾರ ಸುಖ ಸೌಖ್ಯಗಳು ಸಿಗುತ್ತಿದ್ದವು. ಆದರೆ ಆತ ಅದನ್ನು ಉಪೇಕ್ಷಿಸಿ ಸತ್ಯ ಪ್ರತಿಪಾದಿಸಿದ. ಅದೇ ರೀತಿ ನಾವು ನಡೆಯುವ ದಾರಿ, ಗುರಿ ತಲುಪಲು ನಿರಂತರ ಪ್ರಯತ್ನ ಮಾಡಬೇಕು ತಾಳ್ಮೆ ಕಳೆದುಕೊಳ್ಳದೇ ಶ್ರಮಿಸಬೇಕು ಅಂದಾಗ ಮಾತ್ರ ಗುರಿ ತಲುಪಿ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Assembly election: ಜನಾರ್ಧನರೆಡ್ಡಿ ಪ್ರಾಬಲ್ಯ ತಗ್ಗಿಸಲು ಅಮಿತ್‌ ಶಾ ಅಸ್ತ್ರ: ಬಿಜೆಪಿ ಕೋರ್‌ ಕಮಿಟಿ ಸಭೆ

ಕಲ್ಯಾಣ ಭಾಗದ 7 ಜಿಲ್ಲೆಗಳಲ್ಲಿಯೂ ಭವ್ಯ ಪರಂಪರೆ ವೈಭವದ ಹಿನ್ನೆಲೆ ಇದೆ. ಅವೆಲ್ಲವನ್ನು ಕಂಡು ನಾವು ಗತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ವಾರಸುದಾರರಾಗಬೇಕೆಂದು ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಉತ್ಸವ ಎಂದರೆ ಲಕ್ಷಾವಧಿ ಜನರು ಸೇರಿ ಸಂಭ್ರಮಿಸುವಂತಾಗಬೇಕು ಎಂದು ಹೇಳಿದ ಅವರು, ವರ್ಷದ ಕೊನೆಯ ಮೂರು ತಿಂಗಳುಗಳ ಕಾಲ ನಡೆಯಬೇಕು ಎಂದು ಅವರು ಸಲಹೆ ನೀಡಿದರು. ಆರಂಭದಲ್ಲಿ ವಿಜಯಲಕ್ಷ್ಮಿ ಪೂಜಾರಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.

Kalyana Karnataka Utsav: ಇಂದಿನಿಂದ ಅದ್ಧೂರಿಯಾಗಿ ಕಲ್ಯಾಣ ಕರ್ನಾಟಕ ಉತ್ಸವ

ಕ.ಕ.ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಸ್ವಾಗತಿಸಿದರು. ಮಂಡಳಿ ಅಪರ ಪ್ರಾದೇಶಿಕ ಆಯುಕ್ತೆ ಪ್ರಮೀಳಾ ವಂದಿಸಿದರು. ನಿರೂಪಣೆಯನ್ನು ಅಮರಯ್ಯ ಸ್ವಾಮಿ ಜಾಲಿಬೆಂಚಿ ಮತ್ತು ಮಧು ದೇಶಮುಖ ನೆರವೇರಿಸಿದರು. ನಂತರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸೇರಿದಂತೆ ಬಳ್ಳಾರಿಯ ಜಿ. ಚಂದ್ರಕಾಂತ ಕಲ್ಬುರ್ಗಿ ಜಿಲ್ಲೆಯ  ಶಿವರುದ್ರಯ್ಯ, ಸೂರ್ಯಕಾಂತ, ಸೈದಪ್ಪ, ಗಿರಿಜಾದೇವಿ, ಶಿವಶಂಕರ ಬಿರಾದಾರ, ಬಾಬುರಾವ ಕೋಬಾಳ, ಸಿಎಸ್‌ಮಾಲಿ ಪಾಟೀಲ್, ಶಿವಕುಮಾರ ಹಿರೇಮಠ, ಶ್ರೀಶೈಲ ವಿಶ್ವಕರ್ಮ, ಗುಂಡಣ್ಣ ಡಿಗ್ಗಿ, ತುಕಾರಾಮ ಸಿಂಗೆ, ಸಂದೀಪ ಸೂರ್ಯಕಾಂತ ಇನ್ನಿತರರ ಗಾಯನ ಮನಸೂರೆಗೊಂಡಿತು.

ಮಕ್ಕಳ ಮನೋವಿಕಾಸಕ್ಕೆ ಸಾಹಿತ್ಯ ಅಗತ್ಯ
ಮಕ್ಕಳು ಕಥೆಗಳು ಬಹಳ ಇಷ್ಟ ಪಡುತ್ತಾರೆ. ಹಾಗಾಗಿ ಮಕ್ಕಳ ಮನೋವಿಕಾಸಕ್ಕೆ ಸಾಹಿತ್ಯ ಅತ್ಯಂತ ಅವಶ್ಯಕ ಎಂದು ಮಕ್ಕಳ ಸಾಹಿತಿ ಹಾ.ಮಾ.ಪೂಜಾರಿ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ಗುಲಬರ್ಗಾ ವಿ.ವಿ.ಯ ಮಹಾತ್ಮಗಾಂಧಿ ಸಭಾಂಗಣದಲ್ಲಿಂದು ಆಯೋಜಿಸಿದ್ದ "ಮಕ್ಕಳ ಕವಿಗಳ ಕವಿತಾ ದರ್ಶನ" ಗೋಷ್ಠಿಯಲ್ಲಿ ಅವರು ಆಶಯ ನುಡಿಯಲ್ಲಿ ಮಾತನಾಡಿದರು. ಮಕ್ಕಳ ಮನಸ್ಸಿನ ಅರಿಯಬೇಕಾದರೆ ಕಥೆಗಳಲ್ಲಿ, ಕವಿತೆಗಳಲ್ಲಿ ಆಸಕ್ತಿ ಮೂಡಿಸುವಂತಹ ಮೌಲ್ಯಾಧಾರಿತ ಕೃತಿಗಳನ್ನು ರಚಿಸಬೇಕು ಎಂದರು.

ಪ್ರತಿಯೊಂದು ಮಗು ಕವನಗಳನ್ನು ಇಷ್ಟ ಪಡುತ್ತೆ. ಆ ಕವನಗಳು ಕೇಳಿ ಅನುಸರಿಸಬೇಕು. ಗುಣಗುಟ್ಟುತ್ತಾ ಮೆಲಕು ಹಾಕಬೇಕು. ಕವನಗಳ ತಕ್ಕಂತೆ ಕುಣಿಯಬೇಕು. ಹೀಗೆ ಮಕ್ಕಳ ಕವನಗಳು ಮನೋವಿಕಾಸಗೊಳಿಸಬೇಕು. ಪಠ್ಯಪುಸ್ತಕಗಳಲ್ಲಿ ಚಂದಸ್ಸು, ಪ್ರಾಸಗಳನ್ನು ಒಳಗೊಂಡ ಪದದ ಕವಿತೆಗಳು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರವಿ ಹಿರೇಮಠ, ಶೋಭಾದೇವಿ ಚಕ್ಕಿ, ಶಿವಲೀಲಾ ಕಲಗುರ್ಕಿ, ಆರತಿ ಕಡಗಂಚಿ, ಗುರುಶಾಂತಯ್ಯ ಭಂಟನೂರ, ಪ್ರಭುಲಿಂಗ ಮೂಲಗೆ, ಅರುಣಾ ನರೇಂದ್ರ,ಶ್ರೀನಿವಾಸ ಜಾಲವಾದಿ, ಮಂಡಲಗಿರಿ ಪ್ರಸನ್ನ, ಜಯಶ್ರೀ ಚೌಧರಿ ಅವರು ಮಕ್ಕಳ ಕವಿತೆಗಳ ಕುರಿತು ವಾಚನ ಮಾಡಿದರು.

click me!