ಉತ್ತರ ಕರ್ನಾಟಕಕ್ಕೆ ಅನ್ಯಾಯ, ಪ್ರತ್ಯೇಕ ರಾಜ್ಯದ ಕೂಗು ಸರಿಯಾಗಿಯೇ ಇದೆ: ಹೊರಟ್ಟಿ

Kannadaprabha News   | Asianet News
Published : Oct 23, 2020, 02:19 PM ISTUpdated : Oct 23, 2020, 02:30 PM IST
ಉತ್ತರ ಕರ್ನಾಟಕಕ್ಕೆ ಅನ್ಯಾಯ, ಪ್ರತ್ಯೇಕ ರಾಜ್ಯದ ಕೂಗು ಸರಿಯಾಗಿಯೇ ಇದೆ: ಹೊರಟ್ಟಿ

ಸಾರಾಂಶ

ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ| ಉತ್ತರ ಕರ್ನಾಟಕದವರು ಸಿ.ಎಂ. ಆದರೆ ಸ್ವಾಗತ| ಎಲ್ಲಾ ಸರ್ಕಾರದಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ| ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಮನವಿ| ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರ ಕರ್ನಾಟಕಕ್ಕೆ ಏನು ಮಾಡಿಲ್ಲ| 

ಕೊಪ್ಪಳ(ಅ.23): ರಾಜ್ಯದಲ್ಲಿ ಇರುವುದು ಸಮ್ಮಿಶ್ರ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಅಲ್ಲ, ಅವರು ಬಿಟ್ಟು ಬಂದರೆ ಮತ್ತೆ ಸರ್ಕಾರ ಬೀಳುತ್ತದೆ. ಆದರೂ ನಾನು ಯಡಿಯೂರಪ್ಪ ಅವರ ಮೇಲಿನ ಅನುಕಂಪದಿಂದ ಸರ್ಕಾರ ಅವಧಿ ಪೂರ್ಣಗೊಳಿಸಲಿ ಎನ್ನುತ್ತೇನೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವುದು ಸಮ್ಮಿಶ್ರ ಸರ್ಕಾರ ಎಂದು ಸದನದಲ್ಲಿಯೇ ಹೇಳಿದ್ದೇನೆ ಎಂದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಹೀಗಾಗಿ ಯತ್ನಾಳ ಸೇರಿದಂತೆ ಉತ್ತರ ಕರ್ನಾಟಕದವರು ಯಾರೇ ಮುಖ್ಯಮಂತ್ರಿಯಾದರೂ ಉತ್ತರ ಕರ್ನಾಟಕದವನಾಗಿ ನಾನು ಸ್ವಾಗತ ಮಾಡುತ್ತೇನೆ. ಈ ಭಾಗದವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತೇನೆ. ಆದರೆ, ಈಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಸಾಫ್ಟ್‌ಕಾರ್ನರ್‌ ಇರುವುದು ಸತ್ಯ. ಹೋರಾಟ ಮಾಡಿಕೊಂಡು ಬಂದಿರುವ ಅವರು ಮುಖ್ಯಮಂತ್ರಿಯಾಗಿ ಪೂರ್ಣಅವಧಿ ಇರಬೇಕು ಎಂದು ಬಯಸುತ್ತೇನೆ. ಪದೇ ಪದೇ ಅವರ ಅಧಿಕಾರಕ್ಕೆ ಕುತ್ತು ಬಂದಿರುವುದನ್ನು ನೋಡಿರುವುದರಿಂದ ಅನುಕಂಪದಿಂದ ಅವರು ಮುಖ್ಯಮಂತ್ರಿಯಾಗಿರಲಿ ಎಂದು ಆಶಿಸುತ್ತೇನೆ ಎಂದರು.

'ಯತ್ನಾಳ್‌ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡೋಕೆ ಆಗೋದಿಲ್ಲ'

ನಾನು ಹಲವು ವರ್ಷಗಳಿಂದ ಸದನದಲ್ಲಿ ಇದ್ದೇನೆ. ಅವರ ಹೋರಾಟವನ್ನು ಕಂಡಿದ್ದೇನೆ. ಈ ಕಾರಣಕ್ಕಾಗಿಯೇ ಅನುಕಂಪವೇ ಹೊರತು ನಾನು ಬಿಜೆಪಿ ಸೇರುತ್ತೇನೆ ಎಂದಲ್ಲ ಎಂದರು. ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳು ಇದ್ದಾಗಲೂ ಅನ್ಯಾಯವಾಗಿದೆ. ಈಗಲೂ ಆಗುತ್ತಿದೆ. ಇದನ್ನು ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಆದರೆ, ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನುಕೂಲವಾಗಿತ್ತು. ಇದನ್ನು ನಾನು ಪುಸ್ತಕ ರೂಪದಲ್ಲಿಯೇ ಹೊರಗೆ ತಂದಿದ್ದೇನೆ ಎಂದರು.

ಹೀಗೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ನೋಡಿದರೆ ಪ್ರತ್ಯೇಕ ರಾಜ್ಯ ಕೂಗ ಸರಿಯಾಗಿದೆ ಎನಿಸುತ್ತದೆ. ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಏನು ಮಾಡಲಿಲ್ಲ ಎಂದು ಟೀಕಿಸಿದರು.
ಬಿಜೆಪಿ ಈ ಹಿಂದೆ ಆಟಕ್ಕುಂಟು ಲೆಕ್ಕಕ್ಕೇ ಇಲ್ಲದಂತೆ ಇತ್ತು. ಅದನ್ನು ಸಚಿವ ಸಿ.ಟಿ. ರವಿ ಅವರು ಮರೆತಂತೆ ಕಾಣುತ್ತದೆ. ಈಗ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕೇ ಇಲ್ಲ ಎಂದು ಹೇಳಿರುವ ಸಿ.ಟಿ. ರವಿ ಅವರಿಗೆ ನಾನು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ, ಚುನಾವಣೆಯಲ್ಲಿ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ, ಯಾರು ಆಟಕ್ಕುಂಟು ಎನ್ನುವುದು ಎಂದರು. ವಿಪ ಸದಸ್ಯ ಶ್ರೀಕಂಠೇಗೌಡ, ಅಮರೇಗೌಡ ಪಾಟೀಲ್‌, ವೀರೇಶ ಮಹಾಂತಯ್ಯನಮಠ, ಪ್ರದೀಪಗೌಡ ಮೊದಲಾದವರು ಇದ್ದರು.
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!