
ಬೆಂಗಳೂರು (ಮೇ.19): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಹೆಸರಲ್ಲಿ ಆರಂಭದಿಂದಲೇ ವಿದ್ಯುತ್ ದರ, ಸ್ಟ್ಯಾಂಪ್ ಡ್ಯೂಟಿ, ಪೆಟ್ರೊಲ್, ಡಿಸೇಲ್ ದರ, ನೀರಿನ ದರ ಹೆಚ್ಚಳ ಮಾಡಿಯೂ ರಾಜ್ಯದ ಸಾಲ ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಹೊಸ ಮನೆ ನೀಡಿಲ್ಲ, ಹೊಸ ರಸ್ತೆ ನಿರ್ಮಿಸಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ, ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಿಲ್ಲ. ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರು, ಶಾಲಾ ವಿದ್ಯಾರ್ಥಿನಿಯರು ಮನೆಯಿಂದ ಹೊರ ಹೋದರೆ ಸಂಜೆ ಮನೆಗೆ ಬರುತ್ತಾರೋ ಇಲ್ಲವೋ ಎನ್ನುವ ನಂಬಿಕೆ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಒಸಿ, ಮಟಕಾ ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಆರಂಭದಿಂದಲೂ ಕುರ್ಚಿ ಉಳಿಸಿಕೊಳ್ಳಲು ಮತ್ತು ಕಸಿದುಕೊಳ್ಳಲು ನಿರಂತರ ಪೈಪೋಟಿ ನಡೆಯುತ್ತಿದ್ದು, ಈ ಸಮಾವೇಶ ಕುರ್ಚಿ ಉಳಿಸಿಕೊಳ್ಳುವ ಶಕ್ತಿ ಪ್ರದರ್ಶನದ ಸಮಾವೇಶವಾ ಎನ್ನುವ ಅನುಮಾನ ರಾಜ್ಯದ ಜನರಲ್ಲಿ ಮೂಡಿದೆ. ಈ ಸರ್ಕಾರದ ನಾಯಕರ ಕುರ್ಚಿ ಕಚ್ಚಾಟ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಜನರು ಈ ಕೆಟ್ಟ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಕಾಯುತ್ತಿದ್ದಾರೆ. ಈ ಸರ್ಕಾರದ ಅಂತ್ಯ ಈ ಸಮಾವೇಶದಿಂದಲೇ ಆರಂಭವಾಗುವ ಸಾಧ್ಯತೆ ಕಾಣಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.