
ಗದಗ (ಜೂ.11): ಪ್ರಸ್ತುತ ಜಗತ್ತು ಎದುರಿಸುತ್ತಿರುವ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. 2047ರಲ್ಲಿ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಆಗಲು ನರೇಂದ್ರ ಮೋದಿಯವರ ಅವಶ್ಯಕತೆ ಬಹಳ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಗಳಾಗಿ 4399 ದಿನ ಪೂರೈಸಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶವೇ ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಪ್ರತಿಮ ನಾಯಕರು. ಪ್ರಧಾನಮಂತ್ರಿಯಾಗಿ 12 ವರ್ಷ ಪೂರೈಸಿದ್ದಾರೆ. ಅತಿ ಹೆಚ್ಚು ಅವಧಿಗೆ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಎನ್ನುವ ದಾಖಲೆ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಇಷ್ಟೊಂದು ಜನಜಾಗೃತಿಯಾಗಿರುವ ಸಂದರ್ಭದಲ್ಲಿ ಸುದೀರ್ಘವಾಗಿ ದೇಶವನ್ನು ಮುನ್ನಡೆಸುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.
ಜನರ ಹಿತಕ್ಕಾಗಿ ದಿನಕ್ಕೆ 18 ತಾಸು ಕೆಲಸ ಮಾಡಿದ್ದಾರೆ. ನಿರಂತರ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ಮಾಡಿರುವ ಹಲವಾರು ಯೋಜನೆಗಳು ಭಾರತವನ್ನು ವಿಶ್ವದಲ್ಲಿಯೇ ಮೂರನೇ ಆರ್ಥಿಕ ಶಕ್ತಿಯಾಗಿ ತೆಗೆದುಕೊಂಡು ಹೋಗಿದೆ. ಭಾರತದ ಅಭಿವೃದ್ಧಿಯಲ್ಲಿ ಅತ್ಯಂತ ಕೆಳವರ್ಗದವರೂ ಅದರ ಲಾಭ ಮುಟ್ಟುವಂತೆ ಮಾಡಿದ್ದಾರೆ ಎಂದರು.
ಬಡವರಿಗೆ ಮನೆಗಳನ್ನು ನೀಡುವ ಮುಖಾಂತರ ಆರೋಗ್ಯ ವಿಮೆ, ಶಿಕ್ಷಣ, ಉದ್ಯೋಗ ಕೊಡುವ ಮುಖಾಂತರ ಅವರು ಮೂರು ಕೆಲಸಗಳನ್ನು ಬಹಳ ಸ್ಪಷ್ಟವಾಗಿ ಮಾಡಿದ್ದಾರೆ. ಜನಸಾಮಾನ್ಯರು, ಬಡವರು, ದೀನದಲಿತರಿಗೆ, ಹೆಣ್ಣುಮಕ್ಕಳಿಗೆ ಮತ್ತು ಯುವಕರಿಗೆ, ಶಿಕ್ಷಣ, ಉದ್ಯೋಗ, ಸಬಲೀಕರಣ ನೀಡಿದ್ದಾರೆ ಎಂದರು.
ಆರ್ ಎಸ್ ಎಸ್ ಕುರಿತ ವಿರೋಧ ಪಕ್ಷದವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಗೆ ಸುದೀರ್ಘ ಇತಿಹಾಸ ಇದೆ. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಹೋರಾಟವನ್ನು ಪ್ರಾರಂಭ ಮಾಡಿದರು. ಅದು ಒಂದು ಚಳವಳಿಯಾಗಿ ರೂಪುಗೊಂಡಿತು. ಕಾಂಗ್ರೆಸ್ ವಿದೇಶಿಯರಿಂದ ಸ್ಥಾಪನೆಯಾಗಿದ್ದು, ಆರ್ ಎಸ್ ಎಸ್ ಸ್ವದೇಶಿಯರಿಂದ ಸ್ಥಾಪನೆಯಾಗಿದ್ದು, ಹೀಗಾಗಿ ಇದಕ್ಕೆ ಮನ್ನಣೆ ಪ್ರಶ್ನೆ ಬರುವುದಿಲ್ಲ ಎಂದರು.
ದೇಶದಲ್ಲಿ ಸಾಕಷ್ಟು ನೋಂದಾಯಿತ ಮತ್ತು ನೋಂದಣಿಯಾಗದ ಅನೇಕ ಸಂಸ್ಥೆಗಳಿವೆ. ದೇಶದಲ್ಲಿ ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆರ್ ಎಸ್ ಎಸ್ ಇಡಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಸ್ಥೆ ಮತ್ತು ಜನಸೇವೆಯಲ್ಲಿ ಶ್ರೇಷ್ಠವಾದ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಆಗಾಗ ಕೆಲವರು ಈ ರೀತಿಯ ಮಾತುಗಳನ್ನು ಆಡುತ್ತಾರೆ. ಆರ್ ಎಸ್ ಎಸ್ ಜನ ಸೇವೆಯಲ್ಲಿ ಮುಂದುವರಿಯುತ್ತದೆ ಎಂದರು.