ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಶ್ರೀ

By Govindaraj SFirst Published Nov 7, 2022, 9:50 PM IST
Highlights

ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿಯನ್ನು ನೀಡುವವರೆಗೂ ಹೋರಾಟವನ್ನು ನಿರಂತರ ನಡೆಸಲಾಗುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. 

ಗಂಗಾವತಿ (ನ.07): ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿಯನ್ನು ನೀಡುವವರೆಗೂ ಹೋರಾಟವನ್ನು ನಿರಂತರ ನಡೆಸಲಾಗುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಶೈಕ್ಷಣಿಕವಾಗಿ, ಉದ್ಯೋಗಿಕವಾಗಿ ಸಾಕಷ್ಟುತೊಂದರೆ ಅನುಭವಿಸುತ್ತಿರುವ ಪಂಚಮಸಾಲಿ ಸಮಾಜವನ್ನು ಶೈಕ್ಷಣಿಕ ಕ್ಷೇತ್ರ, ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕಾದರೆ ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಅಂದಾಗ ಮಾತ್ರ ನಾವು ಬದಲಾಗಲು ಸಾಧ್ಯವಾಗುತ್ತದೆ ಎಂದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರ ಮಾತ್ರ ಆಸಕ್ತಿ ತೋರಿಸುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಮೀಸಲಾತಿ ನೀಡಲು ಅವಶ್ಯಕವಾಗಿರುವ ಆಯೋಗದ ವರದಿ ಪಡೆದುಕೊಳ್ಳಬೇಕು. 

ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು

ವರದಿಯ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಮೀಸಲಾತಿಗಾಗಿ ಡಿ. 12ರಂದು ಬೆಂಗಳೂರಿಗೆ ಹೋಗಬೇಕು. ರಾಜ್ಯದ ಪ್ರತಿಯೊಬ್ಬ ಪಂಚಮಸಾಲಿ ಸಮಾಜದವರು ಬೆಂಗಳೂರಿನ ಹೋರಾಟದಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಮುಂದಿನ ದಿನಮಾನಗಳಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕರು, ಸಚಿವರು ಧ್ವನಿ ಎತ್ತುವ ಮೂಲಕ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸಲು ಶ್ರಮ ವಹಿಸಬೇಕಾಗಿದೆ ಎಂದರು.

ಅಮಾನತು ಪರಿಹಾರವಲ್ಲ, ಕಾಮಗಾರಿ ಮುಗಿಸಿ: ಸಚಿವ ಆನಂದ್‌ ಸಿಂಗ್‌

ನಂತರ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಶಿವರಾಮೇಗೌಡ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗುರು, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಮುಖಂಡ, ಕಳಕನಗೌಡ, ತಿಪ್ಪೇರುದ್ರಸ್ವಾಮಿ, ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಪ್ರಮುಖರಾದ ದೊಡ್ಡಪ್ಪ ದೇಸಾಯಿ, ವೀರೇಶಪ್ಪ, ದೇವೇಂದ್ರಪ್ಪ, ಬಸಪ್ಪ, ಬಸಲಿಂಗಪ್ಪ, ಕರಿಯಪ್ಪ ಹಾಗೂ ಇತರರಿದ್ದರು.

click me!