ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು

By Govindaraj S  |  First Published Nov 7, 2022, 9:34 PM IST

ಮೀನುಗಾರಿಕೆಯನ್ನೇ ಜೀವನ‌ದ ಆಧಾರವನ್ನಾಗಿಸಿರುವ ಮೀನುಗಾರರು ಇದೀಗ ಭವಿಷ್ಯವೇನು? ಅನ್ನೋ ಚಿಂತೆಯಲ್ಲಿದ್ದಾರೆ. ಇದಕ್ಕೆ ಕಾರಣ ಸರಕಾರದಿಂದ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆ ಕೊರತೆ.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ನ.07): ಮೀನುಗಾರಿಕೆಯನ್ನೇ ಜೀವನ‌ದ ಆಧಾರವನ್ನಾಗಿಸಿರುವ ಮೀನುಗಾರರು ಇದೀಗ ಭವಿಷ್ಯವೇನು? ಅನ್ನೋ ಚಿಂತೆಯಲ್ಲಿದ್ದಾರೆ. ಇದಕ್ಕೆ ಕಾರಣ ಸರಕಾರದಿಂದ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆ ಕೊರತೆ. ಕಳೆದ ಮೂರು ತಿಂಗಳಿನಿಂದ ನಾಡದೋಣಿ ಚಲಾಯಿಸಲು ಸೀಮೆ ಎಣ್ಣೆಯಿಲ್ಲದೇ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.‌ ಹೀಗಾಗಿ ಸರ್ಕಾರ ವಿರುದ್ಧ ಕೆರಳಿರುವ ಸಾಂಪ್ರದಾಯಿಕ ಮೀನುಗಾರರು, ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಎಚ್ಚರಿಕೆ ಕೂಡಾ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

Tap to resize

Latest Videos

ಹೌದು! ರಾಜ್ಯದ ಕರಾವಳಿ ತೀರದಲ್ಲಿ ನೆಲೆಸಿರುವ ಮೀನುಗಾರ ಸಮುದಾಯದ ಹೆಚ್ಚಿನ ಜನರು ಇಂದಿಗೂ ಮೀನುಗಾರಿಕೆಯನ್ನೇ ತಮ್ಮ ಜೀವನದ ಆದಾಯವನ್ನಾಗಿಸಿಕೊಂಡಿದ್ದಾರೆ. ಟ್ರಾಲ್ ಬೋಟ್, ಪರ್ಸೀನ್ ಸೇರಿದಂತೆ ಸಾಂಪ್ರದಾಯಿಕ ನಾಡ ದೋಣಿಗಳನ್ನು ಬಳಸಿ ಪ್ರತಿ ನಿತ್ಯ ಸಾವಿರಾರು ಮೀನುಗಾರರು ಜೀವನ ಸಾಗಿಸುತ್ತಿದ್ದಾರೆ. ಟ್ರಾಲ್ ಬೋಟ್, ಪರ್ಸೀನ್ ಬೋಟ್‌ಗಳಿಗೆ ಡೀಸೆಲ್ ಬಳಸಿದರೆ ನಾಡ ದೋಣಿಗಳಿಗೆ ಸೀಮೆ ಎಣ್ಣೆ ಅಗತ್ಯ. ಆದರೆ, ಕಳೆದ ಮೂರು ತಿಂಗಳಿನಿಂದ ಸರ್ಕಾರದಿಂದ ನಾಡ ದೋಣಿ ಓಡಿಸಲು ಸೀಮೆಎಣ್ಣೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸಾಂಪ್ರದಾಯಿಕ ಮೀನುಗಾರರು ತಮ್ಮ ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. 

ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌

ಸಾಕಷ್ಟು ಸಮಯಗಳಿಂದ ಸೀಮೆಎಣ್ಣೆ ಪೂರೈಕೆ ಮಾಡಲು ಮೀನುಗಾರರು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯದ ಕಾರಣ ಕೆರಳಿದ ಮೀನುಗಾರರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಲ್ಲದೇ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದಿಂದ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ಮೀನುಗಾರಿಕೆಗೆ ಮಾಡಲಾಗದೆ ಕಡಲತೀರದಲ್ಲಿ ದೋಣಿಗಳನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನುಗಾರರಿಗೆ ಅಗತ್ಯವಾದ ಸೌಲಭ್ಯ ನೀಡದ ಘನ ಸರಕಾರ ಇದ್ದೂ ಸತ್ತಂತೆ. ಬೇಡಿಕೆ ಈಡೇರದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಮೀನುಗಾರ ಮುಖಂಡರು ಎಚ್ಚರಿಸಿದ್ದಾರೆ.

ಇನ್ನು ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ವ್ಯಾಪ್ತಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಇವುಗಳ ಚಲಾವಣೆಗೆ ಸೀಮೆಎಣ್ಣೆ ಅಗತ್ಯ. 2013ರ ಸರ್ಕಾರದ ಆದೇಶದಂತೆ ಪ್ರತಿ ನಾಡದೋಣಿಗೂ ಮಾಸಿಕ 300 ಲೀಟರ್ ಸೀಮೆಎಣ್ಣೆ ಪೂರೈಕೆ ಮಾಡಬೇಕು. ಆದರೆ, ಕಳೆದ ಅಗಸ್ಟ್ ತಿಂಗಳಿನಿಂದ ಸರ್ಕಾರ ಸೀಮೆಎಣ್ಣೆ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರು ನಿತ್ಯ ಕೆಲಸವಿಲ್ಲದೆ ಪರದಾಡುವ ಸ್ಥಿತಿಗೆ ಬಂದಿದ್ದಾರೆ‌‌. ಅಲ್ಲದೇ, ಇತರ ಆದಾಯದ ಮೂಲವಿಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ಆತ್ಮಹತ್ಯೆಯೇ ಮುಂದಿನ ದಾರಿ ಎನ್ನುತ್ತಿದ್ದಾರೆ. 

ಕಾರವಾರ ನಗರಸಭೆ ಅಂಗಡಿಗಳ ಹರಾಜಿನಲ್ಲಿ ಅವ್ಯವಹಾರ: ಆರೋಪ

ಸೀಮೆ ಎಣ್ಣೆ ಇಲ್ಲದೇ ನಾಡದೋಣಿಗಳನ್ನ ಕಡಲತೀರದಲ್ಲಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದಿದ್ದಲ್ಲಿ ಮುಂದಿನ ಚುನಾವಣೆ ವೇಳೆ‌ ನೋಡಿಕೊಳ್ಳುತ್ತೇವೆ ಎಂದು ಮೀನುಗಾರರು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ನಾಡದೋಣಿ ಮೀನುಗಾರಿಕೆಯನ್ನು ನಡೆಸುತ್ತಿವೆ. ಆದರೆ, ಸರಕಾರದಿಂದ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ನಾಡದೋಣಿ ನಡೆಸಲು ಸಾಧ್ಯವಾಗದೆ ಮೀನುಗಾರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೀಮೆ ಎಣ್ಣೆ ಪೂರೈಸುವ ಮೂಲಕ ಮೀನುಗಾರರ ಕಷ್ಟ ಬಗೆಹರಿಸಬೇಕಿದೆ.

click me!