ಬಿಹಾರ, ಉತ್ತರ ಪ್ರದೇಶಕ್ಕೆ ಸ್ಪಂದಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕಿತ್ತು| ಕೇಂದ್ರದ ತಂಡ 38ಸಾವಿರ ಕೋಟಿ ಹಾನಿ ಎಂದು ನೆರೆ ಸರ್ವೇ ಮಾಡಿತ್ತು, ಮೊದಲ ಕಂತಾಗಿ 1200 ಕೋಟಿ ಕೊಟ್ಟಿದ್ದಾರೆ| ನೆರೆ ಸಂತ್ರಸ್ತರ ಸಮಗ್ರ ಅಭಿವೃದ್ಧಿಗೆ ಇನ್ನುಳಿದ ಅನುದಾನ ಬಿಡುಗಡೆಗೊಳಿಸಬೇಕು| ಸರ್ಕಾರ ಬೇಗನೆ ಸ್ಪಂದನೆ ಮಾಡಬೇಕು|
ಬಾಗಲಕೋಟೆ[ಜ.03]: ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದಕ್ಕೆ ರೈತರು, ಸಂತ್ರಸ್ತರಲ್ಲಿ ಬೇಸರವಿದೆ. ನಮ್ಮ ರಾಜ್ಯದ ನೆರೆ ಸಂತ್ರಸ್ತರ ಕಷ್ಟ ನಿವಾರಣೆ ಮಾಡಲಿಲ್ಲ. ಬಿಹಾರ, ಉತ್ತರ ಪ್ರದೇಶಕ್ಕೆ ಸ್ಪಂದಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕಿತ್ತು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಣ್ಣೀರಿಗೆ ಸ್ಪಂದಿಸಬೇಕಿತ್ತು ಎಂಬುದು ಎಲ್ಲರ ಆಶಯವಾಗಿತ್ತು. ಕೇಂದ್ರದ ತಂಡ 38ಸಾವಿರ ಕೋಟಿ ಹಾನಿ ಎಂದು ನೆರೆ ಸರ್ವೇ ಮಾಡಿತ್ತು, ಮೊದಲ ಕಂತಾಗಿ 1200 ಕೋಟಿ ಕೊಟ್ಟಿದ್ದಾರೆ. ನೆರೆ ಸಂತ್ರಸ್ತರ ಸಮಗ್ರ ಅಭಿವೃದ್ಧಿಗೆ ಇನ್ನುಳಿದ ಅನುದಾನ ಬಿಡುಗಡೆಗೊಳಿಸಬೇಕು ಎಂಬುದು ಸಂತ್ರಸ್ತರ ಕೂಗಾಗಿದೆ. ಕೇಂದ್ರ ಸರ್ಕಾರ ಬೇಗನೆ ಸ್ಪಂದನೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭಾಷಾವಾರು ಪ್ರಾಂತ್ಯಕ್ಕೆ ಮಹಾರಾಷ್ಟ್ರ ಕ್ಯಾತೆ ತೆಗೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾಜನ್ ವರದಿಗೆ ಭಾರತ ಸರ್ಕಾರ ನೇಮಕ ಮಾಡಿತ್ತು. ವರದಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿನ ಕನ್ನಡ ಭಾಷೆ ಮಾತನಾಡುವ ಸೊಲ್ಲಾಪುರ, ಜತ್ತ ,ಅಕ್ಕಲಕೋಟ ಕರ್ನಾಟಕಕ್ಕೆ ಸೇರಬೇಕಂತಿದೆ. ರಾಜ್ಯದಲ್ಲಿ ಮರಾಠಿಗರು, ಕನ್ನಡಿಗರು ಅನ್ಯೋನ್ಯವಾಗಿದ್ದಾರೆ. ವಿನಾಕಾರಣ ಕೆಲವು ಸಂಘಟನೆಗಳು ಗೊಂದಲದ ವಾತಾವರಣ ಸೃಷ್ಟಿಸಿ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ. ಮರಾಠಿಗರು, ಕನ್ನಡಿಗರ ಮಧ್ಯೆ ಭಿನ್ನತೆ ತರುವ ಪ್ರಯತ್ನ ಬೇಡ, ಅದು ಯಾರಿಗೂ ಬೇಕಾಗಿಲ್ಲ, ಗಡಿ ವಿವಾದ ವಿಚಾರವಾಗಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಹಾರಾಷ್ಟ್ರದಲ್ಲಿನ ಸಂಘಟನೆಗಳು ಮಾಡಬಾರದು. ಕೆಣಕಿದರೆ ಕನ್ನಡಿಗರು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಸಂಪುಟ ಪುನರ್ ರಚನೆಯಲ್ಲಿ 3 ಜನರಿಗಾದ್ರೂ ಸಚಿವ ಸ್ಥಾನ ನೀಡಬೇಕು. ನಿರಾಣಿ, ಯತ್ನಾಳ, ಸಿದ್ದು ಸವದಿ ರೇಸ್ ನಲ್ಲಿದ್ದಾರೆ. ನಮ್ಮ ಶಾಸಕರಿಗೆ ಅನುಗುಣವಾಗಿ ಎರಡು ಸಚಿವ ಸ್ಥಾನಗಳನ್ನಾದ್ರೂ ನೀಡಲಿ, ಈ ಬಗ್ಗೆ ಪಂಚಮಸಾಲಿ ಪೀಠದಿಂದ ಸಿಎಂಗೂ ಮನವಿ ಮಾಡಲಾಗಿದೆ. ಸಂಪುಟ ಪುನರ ರಚನೆಯಲ್ಲಿ ಸಮುದಾಯಕ್ಕೆ ಎರಡು ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂದೆ ಸಿಎಂ ಆಗ್ತೇನೆ ಎಂದಿರೋ ವಿಚಾರ ಬಗ್ಗೆ ಮಾತನಾಡಿದ ಅವರು, ಯಾರಿಗೆ ಆಗಲಿ ಉನ್ನತ ಹುದ್ದೆ ಬಗ್ಗೆ ಬಯಕೆ ಇರೋದು ಸಹಜ,ಯತ್ನಾಳ ಅವರು ಹೇಳಿದ್ದರಲ್ಲಿ ತಪ್ಪೇನಲ್ಲ, ಅವರು ಹೇಳಿಕೆಗೆ ಸ್ವಾತಂತ್ರ್ಯ ಇದೆ. ಉತ್ತರ ಕನಾ೯ಟಕದಲ್ಲಿ ಸಿಎಂ ಆಗುವ ಪ್ರತಿಭೆಗಳಿದ್ದಾರೆ. ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯದಲ್ಲೂ ಹಿರಿಯರಿದ್ದಾರೆ.ಅವಕಾಶ ಬೇಕು ಅನ್ನೋದು ಅವರ ಅಭಿಪ್ರಾಯವಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿವೆ ಸಿಎಂ ಆಗುವ ಅವಕಾಶ ಬೇಕು ಅನ್ನೋದು ನಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.