ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ

By Govindaraj SFirst Published Nov 23, 2022, 7:50 AM IST
Highlights

ಕನ್ನಡ ಎಂದರೆ ಕೇವಲ ಅಕ್ಷರವಲ್ಲ, ಅದು ನಮ್ಮ ಸಂವೇದನೆ, ಚಿಂತನೆ, ಭಾವ, ಬದುಕು, ಸಂಸ್ಕೃತಿ ಎಲ್ಲವೂ ಆಗಿದೆ. ಅದನ್ನು ಬೆಳೆಸುವ, ಮೆರೆಸುವ ಕೆಲಸ ಆಗಬೇಕಿದೆ ಎಂದು ಹಿರಿಯ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಶಿರಾ (ನ.23): ಕನ್ನಡ ಎಂದರೆ ಕೇವಲ ಅಕ್ಷರವಲ್ಲ, ಅದು ನಮ್ಮ ಸಂವೇದನೆ, ಚಿಂತನೆ, ಭಾವ, ಬದುಕು, ಸಂಸ್ಕೃತಿ ಎಲ್ಲವೂ ಆಗಿದೆ. ಅದನ್ನು ಬೆಳೆಸುವ, ಮೆರೆಸುವ ಕೆಲಸ ಆಗಬೇಕಿದೆ ಎಂದು ಹಿರಿಯ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ತಾಲೂಕಿನ ಪಟ್ಟನಾಯಕನಹಳ್ಳಿ ಶಾಂತಿನಿಕೇತನ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಗೌರವ ಮತ್ತು ಅಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂಗ್ಲಿಷ್‌ ಆಕ್ರಮಣ ಮತ್ತು ಹಿಂದಿ ಹೇರಿಕೆ ನಡುವೆ ಕನ್ನಡ ನಲುಗುತ್ತಿದೆಯಾದರೂ, ಕನ್ನಡಿಗರು ಕನ್ನಡವನ್ನು ಮರೆತಿಲ್ಲ. 

ಸಂಸ್ಕೃತ ಕನ್ನಡದ ಮೇಲೆ ದಾಳಿ ಮಾಡಿದ್ದಾಗ್ಯೂ ಕನ್ನಡ ತನ್ನತನವನ್ನು ಉಳಿಸಿಕೊಂಡು ಬಂದಿದೆ. ಕನ್ನಡ ಇಂದು ಹೆಚ್ಚಾಗಿ ಬಳಕೆಯಾಗುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಂದ. ಕನ್ನಡಕ್ಕೆ ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಹಾಗಾಗಿಯೇ ಕನ್ನಡ ಸದೃಢವಾಗಿದೆ. ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು ಬಂದಿದ್ದಾರೆ. ಕನ್ನಡಿಗರನ್ನು ಉಳಿಸುವ ಕೆಲಸ ಆದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ. ಕನ್ನಡಿಗರ ಬದುಕನ್ನು ಹಸನು ಮಾಡುವ ಕೆಲಸ ಆದರೆ ಕನ್ನಡ ಗಟ್ಟಿಯಾಗಲಿದೆ ಎಂದರು.

Tumakuru: ಸತತ 110 ದಿನದಿಂದ ಹರಿಯುತ್ತಿರುವ ಜಯಮಂಗಲಿ ನದಿ: ರೈತರಲ್ಲಿ ಸಂತಸ

ಪತ್ರಿಕೋದ್ಯಮಿ ನಾಗಣ್ಣ ಮಾತನಾಡಿ, ವ್ಯವಸಾಯ ಇಂದು ಕೈಗಾರಿಕೆ ಆಗ್ತಿದೆ. ಕೈಗಾರಿಕೆ ನಡೆಸಲು ಸಾಲ ಪಡೆದಂತೆ ರೈತರು ಬೇಸಾಯಕ್ಕೂ ಸಾಲ ಮಾಡಬೇಕು. ಲಾಭ ಬರದೇ ಇದ್ದಲ್ಲಿ ಕೈಗಾರಿಕೆ ಸಾಯಲಿದೆ. ಬೇಸಾಯದಲ್ಲಿ ಲಾಭ ಇಲ್ಲ ಎನ್ನುವ ಕಾರಣಕ್ಕೆ ಯಾರೂ ವ್ಯವಸಾಯಕ್ಕೆ ಮುಂದೆ ಬರುತ್ತಿಲ್ಲ. ಇದರ ಪ್ರಭಾವ ಮುಂದಿನ ದಿನಗಳಲ್ಲಿ ಕಂಡುಬರಲಿದೆ. ಹಿಂದೆಲ್ಲಾ ನಡೆದು ಹೋಗುವುದು ಸಂಭ್ರಮವಾಗಿತ್ತು. ಇಂದು ಮನೆಗೆ ಸಣ್ಣ ಸಾಮಾನು ತರಲು ಸಹಾ ಮೋಟಾರ್‌ ಸೈಕಲ್‌ ಬೇಕಿದೆ. ಜನರು ಭೋಗದ ಕಡೆಗೆ ಸಾಗುತ್ತಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯ ಪಶುವೈದರ ಸಂಘದ ಅಧ್ಯಕ್ಷ ನಾಗಣ್ಣ ಮಾತನಾಡಿ, ವಿದ್ಯಾರ್ಥಿಗಳು ಇಂದು ಎಂಜಿನಿಯರ್‌, ಡಾಕ್ಟರ್‌ ಆಗಲು ಮಾತ್ರ ಬಯಸುತ್ತಾರೆ. ವ್ಯವಸಾಯದ ಕಡೆಗೆ ಗಮನ ಕಡಿಮೆಯಾಗುತ್ತಿದೆ. ಎಲ್ಲರಿಗೂ ಉದ್ಯೋಗ ಕಲ್ಪಿಸಿಕೊಡುವುದು ಸರ್ಕಾರಕ್ಕೆ ಅಸಾಧ್ಯವಾದದ್ದು. ಸ್ಥಳೀಯವಾಗಿ ನಾವು ವ್ಯವಸಾಯ ಮತ್ತು ಅದರ ಉಪ ಕಸುಬುಗಳ ಕಡೆ ಗಮನ ನೀಡಿದರೆ, ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದು ತಿಳಿಸಿದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ, ಅಪ್ಪು ಅವರು ಕನ್ನಡಿಗರ ಆರಾಧ್ಯ ದೈವವಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ದೈಹಿಕವಾಗಿ ನಮ್ಮನ್ನು ಬಿಟ್ಟು ಹೋಗಿರಬಹುದು ಆದರೆ ಮಾನಸಿಕವಾಗಿ ನಮ್ಮೊಟ್ಟಿಗೆ ಎಂದಿಗೂ ಇರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ.ನಾ.ಹಳ್ಳಿ ಹರೀಶ್‌ ಕುಮಾರ್‌, ಜಯರಾಮ ಕೃಷ್ಣ, ಗೋಪಿಕುಂಟೆ ಮಾರುತಿ, ಡಾ. ತಿಮ್ಮರಾಜು, ಪ್ರಭಾಕರ ಹಾಗೂ ವೈದ್ಯಕೀಯ ಸೇವೆಗಾಗಿ ಡಾ. ಶ್ರೀಕಾಂತ್‌, ಸಮಾಜ ಸೇವೆಗಾಗಿ ರೂಪೇಶ್‌ ಕೃಷ್ಣಯ್ಯ ಮತ್ತು ಆರ್‌. ಜಯರಾಮಯ್ಯ, ಶಿಕ್ಷಣ ಕ್ಷೇತ್ರದಿಂದ ಪಿ.ಎಂ.ಕಾಗಿನಕರ, ರಂಗಭೂಮಿ ಸೇವೆಗಾಗಿ ಡಾ. ರಾಮಕೃಷ್ಣ, ಜಾನಪದ ಕ್ಷೇತ್ರದಿಂದ ಪುಟ್ಟಮ್ಮ ಮತ್ತು ಪತ್ರಿಕಾ ಸೇವೆಗಾಗಿ ವಿಜಯಕುಮಾರ್‌ ತಾಡಿ ರನ್ನು ಗೌರವಿಸಲಾಯಿತು. ಖ್ಯಾತ ಗಾಯಕಿ ಶಮಿತ ಮಲ್ನಾಡ್‌ ನಡೆಸಿಕೊಟ್ಟಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ .ಎಸ್‌. ಸಿದ್ದಲಿಂಗಪ್ಪ, ಮಾಜಿ ಅಧ್ಯಕ್ಷ ಬಿ.ಗೋವಿಂದಪ್ಪ, ನಾದೂರು ಗ್ರಾಪಂ ಅಧ್ಯಕ್ಷೆ ಮೆಹೆರ್‌ ತಾಜ್‌ ಬಾಬು, ಸರ್ಕಾರಿ ಪಶು ವೈದ್ಯರ ಸಂಘದ ಅಧ್ಯಕ್ಷ ಡಾ. ನಾಗಣ್ಣ, ಪ್ರಾಂಶುಪಾಲ ಪರಮೇಶ್‌ ಗೌಡ, ಗಾಯಕಿ ಸವಿತಾ ಮಲ್ನಾಡ್‌ ಸೇರಿದಂತೆ ಹಲವಾರು ಹಾಜರಿದ್ದರು.

ರೀ, ನಿಮ್ಮ ಕಥೆ, ಚಿತ್ರಕಥೆ, ಸಂಭಾಷಣೆ ಬೇಡ: ಸಂಸದ ಪ್ರಜ್ವಲ್‌ಗೆ ಹೈಕೋರ್ಟ್‌ ಚಾಟಿ

ಜನಮಾನಸದಲ್ಲಿ ಅಪ್ಪು ಅಮರ: ಪುನೀತ್‌ ರಾಜ್‌ಕುಮಾರ್‌ ಮರಣ ಹೊಂದಿ ವರ್ಷವಾದರೂ ಜನ ಮನದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದರೆ, ಅದಕ್ಕೆ ಅವರ ನಡವಳಿಕೆಯೇ ಕಾರಣ. ನಾವು ಎಷ್ಟೇ ದೊಡ್ಡವರಾದರೂ, ಸೌಜನ್ಯವನ್ನು ಮರೆಯಬಾರದು. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ನೋಡುವಂತಹ ಸಿನಿಮಾ ಮಾಡಿದ್ದು ಪುನೀತ್‌. ಅವರು ಬರಿ ನಟರಷ್ಟೇ ಅಲ್ಲ. ಸೌಜನ್ಯದ ಮೂರ್ತಿ. ನಾವು ಗಳಿಸುವುದಷ್ಟೇ ಮುಖ್ಯವಲ್ಲ. ಸಮಾಜಕ್ಕೆ ಅಗತ್ಯವಿದ್ದಾಗ ಗಳಿಸಿದ್ದನ್ನು ದಾನ ನೀಡಬೇಕು. ಸತ್ತ ಮೇಲೂ ಹೇಗೆ ಬದುಕುಳಿಯಬಹುದು ಎನ್ನುವುದಕ್ಕೆ ಪುನೀತ್‌ ಮಾದರಿ. ಅದಕ್ಕೆ ಜನಮಾನಸದಲ್ಲಿ ಅಪ್ಪು ಅಮರ ಎಂದು ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

click me!