ಬೆಂಗಳೂರು: ಸ್ಕೂಟರ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿ: ಬಾಲಕಿ ದುರ್ಮರಣ

By Kannadaprabha NewsFirst Published Nov 23, 2022, 7:39 AM IST
Highlights

ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿ, ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ದುರ್ಘಟನೆ, ತಾಯಿ-ಮಗನಿಗೂ ಗಾಯ

ಬೆಂಗಳೂರು(ನ.23):  ತಾಯಿ ತನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಸ್ಕೂಟರ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟು, ತಾಯಿ-ಮಗನಿಗೆ ಗಾಯವಾಗಿರುವ ದಾರುಣ ಘಟನೆ ಕೆ.ಆರ್‌.ಪುರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಸಿಗೇಹಳ್ಳಿ ನಿವಾಸಿ ಲಯಶ್ರೀ (15) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತಳ ತಾಯಿ ಪ್ರಿಯದರ್ಶಿನಿ (45) ಹಾಗೂ ತಮ್ಮ ಯಶ್ವಿನ್‌(11) ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ತಮ್ಮ ಮನೆಯಿಂದ ನಾಗರವಾರಪಾಳ್ಯ ಸಮೀಪದ ಕೇಂದ್ರೀಯ ವಿದ್ಯಾಲಯ ಶಾಲೆಗೆ ಮಕ್ಕಳನ್ನು ಸ್ಕೂಟರ್‌ನಲ್ಲಿ ಪ್ರಿಯದರ್ಶಿನಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಬಿಎಂಟಿಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೆರವಣಿಗೆ ಸಾಗುತ್ತಿದ್ದವರ ಮೇಲೆ ಹರಿದ ಟ್ರಕ್ : ಮಕ್ಕಳು ಸೇರಿ 12 ಜನರ ದಾರುಣ ಸಾವು

ಎಚ್‌ಎಎಲ್‌ ಉದ್ಯೋಗಿ ವೆಂಕಟಾಚಲ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಸಿಗೇಹಳ್ಳಿಯಲ್ಲಿ ನೆಲೆಸಿದ್ದರು. ನಾಗರವಾರಪಾಳ್ಯ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಲಯಶ್ರೀ ಹಾಗೂ 6ನೇ ತರಗತಿಯಲ್ಲಿ ಯಶವಂತ್‌ ಓದುತ್ತಿದ್ದರು. ಪ್ರತಿ ದಿನ ಮಕ್ಕಳನ್ನು ಶಾಲೆಗೆ ಬಿಟ್ಟು ಮತ್ತೆ ಸಂಜೆ ಅವರ ತಾಯಿಯೇ ಸ್ಕೂಟರ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು.

ಘಟನೆ ಹೇಗಾಯ್ತು ?: 

ಎಂದಿನಂತೆ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಶಾಲೆಗೆ ಬಿಡಲು ಮಕ್ಕಳನ್ನು ಕರೆದುಕೊಂಡು ಪ್ರಿಯದರ್ಶಿನಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಹೊಸಕೋಟೆಗೆ ಬಿಎಂಟಿಸಿ ತೆರಳುತ್ತಿತ್ತು. ಮಾರ್ಗಮಧ್ಯೆ ಪ್ರಿಯದರ್ಶನಿ ಅವರಿಗೆ ಟಿ.ಸಿ.ಪಾಳ್ಯ ಹತ್ತಿರ ಹೊಸಕೋಟೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ ಎದುರಾಗಿದೆ. ಕೂಡಲೇ ಅವರು ಬ್ರೇಕ್‌ ಹಾಕಿದ್ದರಿಂದ ಸ್ಕೂಟರ್‌ಗೆ ಬಸ್‌ ಡಿಕ್ಕಿಯಾಗಿದೆ. ಈ ಹಂತದಲ್ಲಿ ಕೆಳಗೆ ಬಿದ್ದ ತಾಯಿ ಹಾಗೂ ಮಕ್ಕಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಲಯಶ್ರೀ ಕೊನೆಯುಸಿರೆಳೆದಿದ್ದಾಳೆ. ಗಾಯಾಳು ತಾಯಿ-ಮಗ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಕೆ.ಆರ್‌.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!