ಬಾಪೂಜಿ ನಗರದಲ್ಲಿ ಕ್ವಾರಂಟೈನ್‌ಗೆ ಸ್ಥಳೀಯರ ಆಕ್ಷೇಪ; ಲಘು ಲಾಠಿ ಪ್ರಹಾರ

Kannadaprabha News   | Asianet News
Published : May 21, 2020, 11:06 AM IST
ಬಾಪೂಜಿ ನಗರದಲ್ಲಿ ಕ್ವಾರಂಟೈನ್‌ಗೆ ಸ್ಥಳೀಯರ ಆಕ್ಷೇಪ; ಲಘು ಲಾಠಿ ಪ್ರಹಾರ

ಸಾರಾಂಶ

ಶಿವಮೊಗ್ಗದ ಬಾಪೂಜಿ ನಗರದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.21): ಕಳೆದ ಒಂದು ವಾರದಿಂದ ತೀವ್ರ ಆತಂಕದಲ್ಲಿ ಸಿಲುಕಿದ್ದ ಘಟ್ಟನಗರಿ ಶಿವಮೊಗ್ಗ ಮತ್ತು ಜಿಲ್ಲೆ ಬುಧವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಹೊಸದಾಗಿ ಯಾವುದೇ ಪ್ರಕರಣ ದಾಖಲಾಗಲಿಲ್ಲ. ಆದರೆ ಹೊರ ರಾಜ್ಯದಿಂದ ಬರುವವರ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. 

ಹೀಗೆ ಬಂದವರನ್ನು ಕ್ವಾರಂಟೈನ್‌ ಮಾಡುವ ಜವಾಬ್ದಾರಿ ಹೊತ್ತ ಜಿಲ್ಲಾಡಳಿತಕ್ಕೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಕ್ವಾರಂಟೈನ್‌ ಮಾಡುವ ಪ್ರದೇಶ ವ್ಯಾಪ್ತಿಯ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಬುಧವಾರ ಈ ಸಂಬಂಧ ಲಘು ಲಾಠೀ ಪ್ರಹಾರ ಕೂಡ ನಡೆಯಿತು. ಪ್ರತಿ ನಿತ್ಯ ನೂರಾರು ಜನ ಆಗಮಿಸುತ್ತಿದ್ದು, ಮುಂಬೈಯಿಂದಲೇ ಸುಮಾರು 20-30 ಜನ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪಾಸ್‌ ಮೂಲಕ ಪ್ರವೇಶ ಪಡೆಯುತ್ತಿರುವ ಇವರನ್ನು ಜಿಲ್ಲೆಯ ವಿವಿಧ ಕಡಗಳಲ್ಲಿ ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಗ್ರಾಮಗಳಲ್ಲಿ ನೀರಿನ ತೊಂದರೆಯಾದರೆ ಅಧಿಕಾರಿಗಳೇ ಹೊಣೆ

ಆದರೆ ಬುಧವಾರ ಸಂಜೆ ನಗರದ ಬಾಪೂಜಿ ನಗರದ ಹಾಸ್ಟೆಲ್‌ ಒಂದರಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಮುಂದಾದಾಗ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಯಾವುದೇ ಕಾರಣಕ್ಕೂ ಕ್ವಾರೆಂಟೈನ್‌ಗೆ ಅವಕಾಶ ಕೊಡುವುದಿಲ್ಲ ಎಂದು ಉಪ ಮೇಯರ್‌ ಸುರೇಖಾ ಮುರುಳೀಧರ್‌ ನೇತೃತ್ವದಲ್ಲಿನ ಸ್ಥಳೀಯರ ಗುಂಪು ಆಕ್ರೋಶ ವ್ಯಕ್ತಪಡಿಸಿತಲ್ಲದೆ, ಹಾಸ್ಟೆಲ್‌ ಒಳಗೆ ನುಗ್ಗಿ ದಾಂಧಲೆ ನಡೆಸಿದರು. ಅಲ್ಲದೆ ಹಾಸ್ಟೆಲ್‌ ಒಳಗಿದ್ದ ಸಿಸಿ ಕ್ಯಾಮೆರಾ, ಚೇರು, ಹೂವಿನ ಕುಂಡಗಳನ್ನು ಒಡೆದು ಹಾಕಿದರು. ಕೆಲವರು ಹಾಸ್ಟೆಲ್‌ನತ್ತ ಕಲ್ಲು ತೂರಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಉದ್ರಿಕ್ತ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಘಟನೆಗೆ ವಿವರ:

ಇಲ್ಲಿನ ಬಾಪೂಜಿನಗರದಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ (ಪ್ರೊ. ಬಿ. ಕೃಷ್ಣಪ್ಪ ಸ್ಮಾರಕ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ) ಜಿಲ್ಲಾಡಳಿತ ಹೊರ ಜಿಲ್ಲೆಯಿಂದ ಬಂದವರಿಗೆ ಕ್ವಾರೆಂಟೈನ್‌ಗೆ ವ್ಯವಸ್ಥೆ ಮಾಡಿತ್ತು. ಅದರಂತೆ ಬುಧವಾರ ವಿವಿಧೆಡೆಯಿಂದ ಜಿಲ್ಲೆಗೆ ಆಗಮಿಸಿದವರನ್ನು ಕ್ವಾರೆಂಟೈನ್‌ ಮಾಡಲು ಬಸ್ಸಿನಲ್ಲಿ ಕರೆ ತರಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಾಪೂಜಿನಗರ ಹಾಸ್ಟಲ್‌ನಲ್ಲಿ ಕ್ವಾರೆಂಟೈನ್‌ ಮಾಡುವುದು ಬೇಡ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಉದ್ರಿಕ್ತಗೊಂಡ ಕೆಲವರು ಹಾಸ್ಟೆಲ್‌ಗೆ ನುಗ್ಗಿ ಅಲ್ಲಿದ್ದ ಟೇಬಲ್‌, ಕುರ್ಚಿಗಳನ್ನು ಎಸೆದರು. ಸಿಸಿ ಕ್ಯಾಮರಾವನ್ನು ಪುಡಿಗೈದರು. ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿದರು. ಗುಂಪನ್ನು ಚದುರಿಸಿದರು.

ಸ್ಥಳಕ್ಕೆ ಆಗಮಿಸಿದ ಉಪಮೇಯರ್‌ ಸುರೇಖಾ ಮುರಳಿಧರ್‌ ಕೂಡ ಬಾಪೂಜಿನಗರ ಹಾಸ್ಟೆಲ್‌ ನಲ್ಲಿ ಕ್ವಾರೆಂಟೈನ್‌ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳು ಸಮಾಧಾನ ಪಡಿಸಲು ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅದೇ ಹಾಸ್ಟೆಲ್‌ನಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿದೆ.
 

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ