
ಬೆಂಗಳೂರು (ಆ.28): ಒಂದೆಡೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಭಾನು ಮುಸ್ತಾಕ್ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ, ಸರ್ಕಾರ ಮಾತ್ರ ಇದು ನಾಡಹಬ್ಬ ಹಿಂದೂಗಳೇ ದಸರಾ ಉದ್ಘಾಟನೆ ಮಾಡಬೇಕು ಅನ್ನೋ ನಿಯಮವೇನಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಾಮುಂಡಿ ಬೆಟ್ಟ ಅನ್ನೋದು ಬರೀ ಹಿಂದುಗಳ ಆಸ್ತಿ ಅಲ್ಲ ಎಂದು ಬಿಟ್ಟಿದ್ದಾರೆ. ಮಾತು ಮಾತಿಗೆ ವಿವಾದದಿಂದ ಈ ಬಾರಿಯ ದಸರಾ ಕಾಂಟ್ರವರ್ಸಿಯ ಗೂಡಾಗಿ ಮಾರ್ಪಟ್ಟಿದೆ.
ಇದರ ನಡುವೆ ದಸರಾ ಉದ್ಘಾಟನೆಯ ಅವಕಾಶ ಪಡೆದಿರುವ ಭಾನು ಮುಸ್ತಾಕ್ ಹೇಳಿರುವ ಇನ್ನೊಂದು ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಭಾನು ಮುಸ್ತಾಕ್ ಅವರು ಬರೆದ ಹಾರ್ಟ್‌ಲ್ಯಾಂಪ್ ಕೃತಿಗೆ ಬೂಕರ್ ಪ್ರಶಸ್ತಿ ಬಂದಿದೆ. ಆದರೆ, ದಸರಾ ಉದ್ಘಾಟನೆಯ ವಿಚಾರವಾಗಿ ಟೀಕೆ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಆಗಲಿ, ವಿಜಯಪುರ ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಆಗಲಿ ನನಗೆ ಬೂಕರ್ ಪ್ರಶಸ್ತಿ ಬಂದಾಗ ಕನಿಷ್ಠ ಅಭಿನಂದನೆಯನ್ನೂ ಸಲ್ಲಿಸಿಲ್ಲ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ, ಪ್ರತಾಪ್ ಸಿಂಹ ತಾವು ಟ್ವಿಟರ್‌ನಲ್ಲಿ ಭಾನು ಮುಸ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾಡಿದ ಟ್ವೀಟ್‌ಅನ್ನು ಮತ್ತೊಮ್ಮೆ ನೆನಪಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡುವ ವೇಳೆ, 'ಯತ್ನಾಳ್ ಆಗಲಿ, ಪ್ರತಾಪ್ ಸಿಂಹ ಆಗಲಿ ಬೂಕರ್ ಕೊಟ್ಟಿದ್ದಾರಾ? ನನಗೆ ಬೂಕರ್ ಬಂದಾಗ ಇವರಿಗೆ ಕನಿಷ್ಠ ಅಭಿನಂದನೆ ಸಲ್ಲಿಸಬೇಕು ಎನ್ನುವಷ್ಟೂ ಸಂತೋಷವಿಲ್ಲ. ಮಾನಸಿಕ ದಾರಿದ್ರ್ಯದಿಂದ, ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿದ್ದಾರೆ. ಅವರು ಯಾಕೆ ನನಗೆ ಅಭಿನಂದನೆ ಸಲ್ಲಿಸಿಲ್ಲ' ಎಂದು ಭಾನು ಮುಸ್ತಾಕ್ ಹೇಳಿದ್ದರು.
ಅವರು ಹೇಳಿರುವ ಮಾತಿನ ವಿಡಿಯೋ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಆಗಸ್ಟ್ 21 ರಂದು ತಾವು ಮಾಡಿರುವ ಟ್ವೀಟ್ ಫೋಟೋವನ್ನು ಅದರಲ್ಲಿ ತೋರಿಸಿದ್ದಾರೆ. ಇದರಲ್ಲಿ 'ಸಾಹಿತಿ ಭಾನು ಮುಸ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ 2025ರ ಬೂಕರ್ ಪ್ರಶಸ್ತಿ ಗೆಲುವಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಅವರ ಬಗ್ಗೆ ಬಂದ ವರದಿಯ ಫೋಟೋವನ್ನೂ ಕೂಡ ಹಂಚಿಕೊಂಡಿದ್ದರು.
'ನನಗೆ ಬುಕರ್ ಬಂದಾಗ ಅಭಿನಂದನೆ ಸಲ್ಲಿಸಲಿಲ್ಲ ಎಂದ ಬುಕರ್ ಭಾನು. ಮೇ. 21 ರಂದೇ ಅಭಿನಂದನೆ ಸಲ್ಲಿಸಿದ್ದೇನೆ ಮೇಡಂ. ಈಗ ಹೇಳಿ, ಭೌದ್ಧಿಕ ದಾರಿದ್ರ್ಯದಿಂದ ನರುಳುತ್ತಿರುವವರು ಯಾರು? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಕೆಲವರು, 'ಗುರು.. ಅವರು ರಾಜಕಾರಣಿ ಅಲ್ಲಾ... ನಿಮ್ಮ ಆಕ್ರಮಣಶೀಲತೆಯನ್ನು ರಾಜಕೀಯ ಮಾಡೋಕೆ ಅಂತಾನೇ ಇರೋರ ಮೇಲೆ ತೋರಿಸಿ. ದಯವಿಟ್ಟು ಕೆಳಮಟ್ಟಕ್ಕೆ ಇಳಿಬೇಡಿ. ನಾವು ಮೊದಲ ನೋಡಿದ ಪ್ರತಾಪ್ ಸಿಂಹನೇ ಬೇರೆ ತರ ಇದ್ರೂ ಈಗ ನೋಡ್ತಿರೋ ಪ್ರತಾಪ್ ಸಿಂಹನೆ ಬೇರೆ. ಘನತೆ ಅನ್ನೋ ಪದದ ಅರ್ಥಾನೇ ಮರೆತಂತಿದೆ...' ಎಂದು ಬರೆದಿದ್ದಾರೆ.
'ನಾನು ಅದನ್ನು AI ವಿಡಿಯೋ ಅಂತ ಅಂದುಕೊಂಡೆ! ಬುಕರ್ ಮೇಡಂ ಎಂಥಾ ಭಾಷೆ ಇದು? ನೀವು ಒಬ್ಬ ಲೇಖಕಿಯಾ? ಈ ಮಹಿಳೆ ತನ್ನ ಕೆಟ್ಟ ಸಿದ್ಧಾಂತವನ್ನು ತನ್ನ ಉದಾರವಾದಿ ಚಿಂತನೆಯಿಂದ ಮರೆಮಾಡುತ್ತಿದ್ದಾಳೆ ಎಂದು ಅವಳ ಭಾಷೆ ಹೇಳುತ್ತದೆ! ಸಮುದಾಯ ವಿಶೇಷ ಜನರು ಎಂದಿಗೂ ಉದಾರವಾದಿಗಳಾಗಲು ಸಾಧ್ಯವಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.