
ಮೌನೇಶ ವಿಶ್ವಕರ್ಮ
ಬಂಟ್ವಾಳ: ಮನೆಯೊಳಗೆ ಕಾಲಿಟ್ಟರೆ ಕೇಳಿಸುವುದು ಸಂಸ್ಕೃತದ ಮಾತು. ಬೆಳಗಿನ ಶುಭಾಶಯದಿಂದ ಹಿಡಿದು ಊಟದ ಸಮಯದ ಮಾತುಕತೆ, ಮಕ್ಕಳೊಂದಿಗೆ ಸಂಭಾಷಣೆ, ಮನೆಯ ನಿತ್ಯದ ವಿಚಾರಗಳು ಎಲ್ಲವೂ ಸಂಸ್ಕೃತದಲ್ಲೇ. ಕಳೆದ ಸುಮಾರು 37 ವರ್ಷಗಳಿಂದ ಸಂಸ್ಕೃತವನ್ನೇ ತಮ್ಮ ಮನೆಯ ಸಂಭಾಷಣೆಯ ಭಾಷೆಯನ್ನಾಗಿ ಮಾಡಿಕೊಂಡಿರುವ ಅಪರೂಪದ ಕುಟುಂಬವೊಂದು ಕಲ್ಲಡ್ಕ ಸಮೀಪದ ಮುಲಾರು ದ್ವಾರಕಾ ನಗರ ಎಂಬಲ್ಲಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಅವರ ಪತ್ನಿ ಸಾವಿತ್ರಿ ಅವರ ಮನೆಯೇ ಈ ವಿಶಿಷ್ಟ ಸಂಸ್ಕೃತ ಗೃಹಂನ ಶಕ್ತಿಗಳು.
ಇವರ ಸಂಸ್ಕೃತಮಯ ಬದುಕಿನ ಹಿಂದೆ ಒಂದು ವಿಶೇಷವಾದ ಕಥೆಯಿದೆ. ಕುಮಟಾ ನಿವಾಸಿಯಾಗಿರುವ ಸಾವಿತ್ರಿ ಕುಂದಾಪುರದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಕೃತ ಭಾರತಿ ಸೇವಾದ್ರತಿಯಾಗಿ ಸಂಸ್ಕೃತ ಸೇವೆಯಲ್ಲಿ ತೊಡಗಿಸಿಕೊಂಡವರು. ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಾ, ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಅವರಿಗೆ, ತಮ್ಮ ವೈವಾಹಿಕ ಜೀವನವೂ ಸಂಸ್ಕೃತದ ವಾತಾವರಣದಲ್ಲಿರಬೇಕು ಎಂಬ ಬಯಕೆಯಿತ್ತು.
ವಸಂತ ಮಾಧವ ವಧು ಪರೀಕ್ಷೆಗೆಂದು ನೋಡಲು ಬಂದ ಸಂದರ್ಭದಲ್ಲಿ ಸಾವಿತ್ರಿ ತಮ್ಮ ಮುಂದೆ ಒಂದು ಬೇಡಿಕೆ ಇಟ್ಟಿದ್ದರು. ಮನೆ ಸಂಸ್ಕೃತ ಗೃಹವಾಗಬೇಕು. ಮನೆಯಲ್ಲಿ ಸಂಸ್ಕೃತವನ್ನೇ ಮಾತನಾಡಬೇಕು. ಎಂಬುದು ಆ ಬೇಡಿಕೆ. ಸಾವಿತ್ರಿಯವರ ಈ ಅಪರೂಪದ ಬೇಡಿಕೆಗೆ ವಸಂತ ಮಾಧವರು ಒಪ್ಪಿಗೆ ಸೂಚಿಸಿದರು. ಆದರೆ ಅದಕ್ಕಾಗಿ ಅವರೂ ಸಂಸ್ಕೃತ ಕಲಿಯಬೇಕಿತ್ತು.
ಆಗ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗಣಿತ ಮತ್ತು ವಿಜ್ಞಾನ ಅಧ್ಯಾಪಕರಾಗಿದ್ದ ವಸಂತ ಮಾಧವ ಅವರು ಸಂಸ್ಕೃತ ಅಧ್ಯಯನಕ್ಕೆ ಮುಂದಾದರು. ಸಂಸ್ಕೃತ ಸಂಭಾಷಣಾ ಶಿಬಿರಗಳಲ್ಲಿ ಭಾಗವಹಿಸಿ, ಭಾಷೆಯನ್ನು ಕಲಿತು, ಪತ್ನಿಯೊಂದಿಗೆ ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುವ ಅಭ್ಯಾಸ ಬೆಳೆಸಿಕೊಂಡರು. ಹೀಗೆ ವಿವಾಹದ ಸಂದರ್ಭದ ಒಂದು ಬೇಡಿಕೆ, ಮುಂದೆ ಇಡೀ ಕುಟುಂಬದ ಜೀವನಶೈಲಿಯನ್ನೇ ಬದಲಿಸಿತು.
ಪ್ರತೀ ಮಾತುಕತೆಯೂ ಸಂಸ್ಕೃತದಲ್ಲೇ ಸುಪ್ರಭಾತಮ್! ಕಥಮಸ್ತಿ ಭವತೀ? ಎಂದು ವಸಂತ ಮಾಧವರು ಕೇಳಿದರೆ, ಸುಪ್ರಭಾತಮ್. ಅಹಂ ಕುಶಲಾ ಅಸ್ಮಿ. ಭವಾನ್ ಕಥಮಸ್ತಿ? ಎಂಬ ಉತ್ತರ ಸಾವಿತ್ರಿಯವರಿಂದ ಬರುತ್ತದೆ. ಊಟದ ಸಂದರ್ಭದಲ್ಲೂ ಸಂಸ್ಕೃತದ ಮಾತುಗಳೇ. ಭೋಜನಂ ಸಿದ್ಧಮಸ್ತಿ ವಾ?, “ಆಮ್, ಭೋಜನಂ ಸಿದ್ಧಮಸ್ತಿ. ಆಗಚ್ಛತು, ಭೋಜನಂ ಕುರ್ಮಃ. ಅಂದರೆ, “ಊಟ ಸಿದ್ಧವಾಗಿದೆಯೇ?, “ಹೌದು, ಊಟ ಸಿದ್ಧವಾಗಿದೆ. ಬನ್ನಿ, ಊಟ ಮಾಡೋಣ” ಎಂಬ ಸಾಮಾನ್ಯ ಸಂಭಾಷಣೆಯೂ ಸಂಸ್ಕೃತದಲ್ಲೇ. ಉಳಿದಂತೆ ಆಗಚ್ಛಂತು (ಬನ್ನಿ), ಉಪವಿಶಂತು (ಕುಳಿತುಕೊಳ್ಳಿ), ಜಲಮ್ ಇಚ್ಛತಿ ವಾ? (ನೀರು ಬೇಕಾ?), ಜಲಮ್ ಇಚ್ಛಾಮಿ (ನೀರು ಬೇಕು), ಅಂತಃ ಆಗಚ್ಛಂತು ( ಒಳಗೆ ಬನ್ನಿ ) , ಗತ್ವಾ ಆಗಚ್ಛಂತು (ಹೋಗಿ ಬನ್ನಿ), ಭೋಜನಂ ಕೃತವಂತಃ ವಾ? (ಊಟ ಆಯಿತಾ?), ಏನು ಮಾಡುತ್ತಿದ್ದೀರಿ? (ಕಿಂ ಕರೋತಿ ಭವಾನ್?) ಮೊದಲಾದ ಸಂಭಾಷಣೆಯ ಸಾಲುಗಳು ಇಲ್ಲಿ ಕೇಳುತ್ತಲೇ ಇರುತ್ತದೆ.
ಈ ದಂಪತಿಯ ಪ್ರಥಮ ಪುತ್ರ ಶಿವಕುಮಾರ ಬಾಲ್ಯದಲ್ಲಿ ಮಾತು ಆರಂಭಿಸಿದ್ದೇ, ಸಂಸ್ಕೃತದಲ್ಲಿ. ಇದಕ್ಕಾಗಿ ಇಡೀ ಮನೆಯ ವಾತಾವರಣವನ್ನೂ ಸಂಸ್ಕೃತಮಯವನ್ನಾಗಿಸಿದ್ದರು. ಪರಿಣಾಮವಾಗಿ ಮಕ್ಕಳು ಕೂಡ ಸಂಸ್ಕೃತದಲ್ಲಿ ಮಾತನಾಡುವುದನ್ನು ಸಹಜವಾಗಿ ಕಲಿತರು. ಮಗ ಶಿವಕುಮಾರ ಹಾಗೂ ಮಗಳು ಚೈತ್ರಾ ಭಾಮತಿ ಸಂಸ್ಕೃತ ಸಂಭಾಷಣೆಯ ಪರಂಪರೆಯಲ್ಲಿ ಬೆಳೆದು ದೊಡ್ಡವರಾದವರು. ಮಗಳು ಚೈತ್ರಾ ವಿವಾಹವಾಗಿ ಹೋದ ಗುರುರಂಜನ್ ಮನೆಯಲ್ಲೂ ಸಂಸ್ಕೃತದ ವಾತಾವರಣ ಮುಂದುವರಿದಿದೆ. ಇತ್ತ ಮಗ, ಸೊಸೆ ನಾಗಶ್ರೀ ಹಾಗೂ ಇದೀಗ ಮೊಮ್ಮಗಳೂ ಶ್ರೀಹೃದ್ಯಾ ಕೂಡಾ ಸಂಸ್ಕೃತ ಕಲಿಯುತ್ತಾ ಬೆಳೆಯುತ್ತಿದ್ದಾರೆ.
ಮನೆಯ ಇಬ್ಬರು ಮಕ್ಕಳು ಚಿಕ್ಕವರಿದ್ದಾಗ ಸಂಸ್ಕೃತದಲ್ಲಿಯೇ ಜಗಳವಾಡುತ್ತಿದ್ದರು ಎಂಬುದು ಮತ್ತೊಂದು ವಿಶೇಷ