ಬ್ಯಾಂಕುಗಳಿಂದ ಹೊಸ ವರಸೆ| ಸಾಲಕ್ಕೂ ಜಮೆ ಮಾಡಲ್ಲ, ಹಣ ಪಡೆಯಲು ಬಿಡುವುದಿಲ್ಲ| ಬೀಜ ಗೊಬ್ಬರಕ್ಕಾದರೂ ಆಗುತ್ತದೆ ಎನ್ನುತ್ತಿರುವ ರೈತರು| ಹೊಸ ವರಸೆ ತೆಗೆದ ಬ್ಯಾಂಕ್|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಆ.17): ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು ಸಾಲಕ್ಕೆ ಜಮೆ ಮಾಡಿಕೊಂಡು ಛೀಮಾರಿ ಹಾಕಿಸಿಕೊಂಡಿದ್ದ ಬ್ಯಾಂಕುಗಳು ಈಗ ಹೊಸ ವರಸೆ ಪ್ರಾರಂಭಿಸಿವೆ. ಕಿಸಾನ್ ಸಮ್ಮಾನ್ ಯೋಜನೆಯ ಪ್ರೋತ್ಸಾಹಧನ ಸಾಲಕ್ಕೂ ಜಮೆ ಮಾಡದೆ, ರೈತರಿಗೂ ನೀಡದೆ ಸತಾಯಿಸುತ್ತಿವೆ.
undefined
ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಪ್ರೋತ್ಸಾಹಧನದ ಉದ್ದೇಶವೇ ವಿಫಲವಾಗುತ್ತಿದೆ. ಬ್ಯಾಂಕುಗಳ ನಡೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಆಗಿದೆ.
ಕಿಸಾನ್ ಸಮ್ಮಾನ್ ಯೋಜನೆ ಮಾಡಿರುವುದೇ ಸಾಲದ ಕೂಪದಲ್ಲಿ ಕೊಳೆಯುತ್ತಿರುವ ರೈತ ತನ್ನ ಭೂಮಿಯ ಉಳುಮೆ, ಬಿತ್ತನೆ ಮತ್ತು ಗೊಬ್ಬರಕ್ಕೆ ಸಮಸ್ಯೆಯಾಗಬಾರದು ಎಂದು. ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗಬೇಕು ಮತ್ತು ರೈತರು ಯಾವಾಗಬೇಕಾದರೂ ಅದನ್ನು ಪಡೆಯಬಹುದು ಎಂದು ಯೋಜನೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಬಹುತೇಕ ಬ್ಯಾಂಕಿನಲ್ಲಿ ಈ ಪ್ರೋತ್ಸಾಹಧನ ಜಮೆಯಾಗಿದ್ದರೂ ರೈತರು ಪಡೆಯಲು ಅವಕಾಶವನ್ನೇ ನೀಡುತ್ತಿಲ್ಲ. ಸಾಲ ಪಾವತಿ ಮಾಡಿದರೆ ಮಾತ್ರ ನಿಮಗೆ ಹಣ ನೀಡಲಾಗುವುದು ಎಂದು ತಗಾದೆ ತೆಗೆದಿವೆ.
ಕೊಪ್ಪಳ: ಕೇವಲ 10 ದಿನಗಳಲ್ಲಿ ತುಂಬಿದ ತುಂಗಭದ್ರಾ ಜಲಾಶಯ
ಏನಿದು ಸಮಸ್ಯೆ?
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಮಹಿಳೆ ಕೆನರಾ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ದಾರೆ. ಸತತವಾಗಿ ಬರ ಮತ್ತಿತರ ಸಮಸ್ಯೆಯಿಂದ ಪಾವತಿಸಲು ಆಗಿಲ್ಲ. ಇವರ ಬ್ಯಾಂಕ್ ಖಾತೆಗೆ ಸರ್ಕಾರದ ವಿವಿಧ ಪ್ರೋತ್ಸಾಹಧನ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಪ್ರೋತ್ಸಾಹಧನ ಜಮೆಯಾಗಿದೆ. ಸುಮಾರು 12 ಸಾವಿರ ಬ್ಯಾಂಕಿನಲ್ಲಿ ಇದೆ.
ಈಗ ತಮ್ಮ ಬ್ಯಾಂಕ್ ಖಾತೆಯಲ್ಲಿರುವ 12 ಸಾವಿರದಲ್ಲಿ 10 ಸಾವಿರ ಪಡೆದು, ಅತ್ಯುತ್ತಮ ಮಳೆಯಾಗಿರುವುದರಿಂದ ಬೆಳೆಗೆ ಗೊಬ್ಬರವನ್ನಾದರೂ ಹಾಕೋಣ ಎಂದು ಮುಂದಾಗಿದ್ದಾರೆ. ಸ್ಲಿಪ್ ತುಂಬಿ, ಟೋಕನ್ ಸಹ ಪಡೆದಿದ್ದಾರೆ. ಆದರೆ, ಬ್ಯಾಂಕಿನ ಸಿಬ್ಬಂದಿ ಹಣ ನೀಡಲು ನಿರಾಕರಿಸಿದ್ದಾರೆ. ಸಾಲ ಇರುವುದರಿಂದ ಹಣ ನೀಡಲು ಬರುವುದಿಲ್ಲ ಎಂದು ಹೇಳಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕರನ್ನು ಭೇಟಿಯಾದರೆ ಸಾಲ ಇದ್ದವರ ಖಾತೆಯಿಂದ ಹಣ ಪಡೆಯಲು ಬರುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.
ಬ್ಯಾಂಕಿನವರ ಹೊಸ ವರಸೆ:
ಈ ಹಿಂದೆ ರೈತರ ಪ್ರೋತ್ಸಾಹಧನವನ್ನು ಸಾಲಕ್ಕೆ ಬ್ಯಾಂಕಿನವರು ಜಮೆ ಮಾಡುತ್ತಿದ್ದರು. ಅದು ಆಟೋಮ್ಯಾಟಿಕ್ ಎಂದು ಹೇಳುತ್ತಿದ್ದರು. ಈ ಕುರಿತು ಕನ್ನಡಪ್ರಭ ವಿಶೇಷ ವರದಿ ಮಾಡುತ್ತಿದ್ದಂತೆ ರೈತರನ್ನು ಕರೆಯಿಸಿ, ಅವರ ಪ್ರೋತ್ಸಾಹಧನವನ್ನು ನೀಡಿ ಕಳುಹಿಸಿದ್ದರು. ಈಗ ಹೊಸ ವರಸೆ ಪ್ರಾರಂಭಿಸಿದ್ದಾರೆ. ಸಾಲ ಇರುವ ರೈತರ ಖಾತೆಗೆ ಪ್ರೋತ್ಸಾಹಧನ ಜಮೆಯಾದರೆ ಅದನ್ನು ಸಾಲಕ್ಕೂ ಜಮೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರ ಎಸ್‌ಬಿ ಖಾತೆಯಲ್ಲಿಯೇ ಇರಿಸಲಾಗುತ್ತದೆ. ಆದರೆ, ಅದನ್ನು ಪಡೆಯಲು ಮಾತ್ರ ಅವಕಾಶ ನೀಡುವುದಿಲ್ಲ. ಈ ಮೂಲಕ ಬ್ಯಾಂಕುಗಳು ರಂಗೋಲಿ ಕೆಳಗೆ ನುಸಳಲು ಪ್ರಾರಂಭಿಸಿವೆ. ಪ್ರೋತ್ಸಾಹ ಧನ ಸೆಳೆಯಲು ಬರದಂತಾದರೆ ಯೋಜನೆಯ ಉದ್ದೇಶವೇ ವಿಫಲ ಮಾಡಿದಂತಾಗುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದೇ ರೈತರು ಜರಿಯುತ್ತಿದ್ದಾರೆ.
ಹಣೆ ಸಳೆಯಲು ತಿರಸ್ಕರಿಸಿರುವ ಮಾಹಿತಿ ಇಲ್ಲದೆ ನಾನು ಏನೂ ಹೇಳಲು ಆಗುವುದಿಲ್ಲ. ರೈತರು ಬಂದರೆ ಖಂಡಿತ ಅವರಿಗೆ ಮಾರ್ಗದರ್ಶನ ಮಾಡಲಾಗುವುದು. ಅವರ ಸಾಲ ಯಾವದಿದೆ? ಯಾಕೆ ಕೊಟ್ಟಿಲ್ಲ ಎನ್ನುವುದನ್ನು ನೋಡಿ ಹೇಳಬೇಕಾಗುತ್ತದೆ. ಅವರನ್ನು ಕಳುಹಿಸಿಕೊಡಿ ನಮ್ಮ ಬಳಿ ಎಂದು ಕೊಪ್ಪಳದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರೇವಣಸಿದ್ದಪ್ಪ ಅವರು ಹೇಳಿದ್ದಾರೆ.
ನನ್ನ ತಾಯಿಯ ಹೆಸರಿನಲ್ಲಿರುವ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಪ್ರೋತ್ಸಾಹಧನ ಜಮೆಯಾಗಿದೆ. ಅದನ್ನು ಸೆಳೆಯಲು ಹೋದರೆ ನಿಮ್ಮದು ಸಾಲ ಇರುವುದರಿಂದ ಸೆಳೆಯಲು ಬರುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಗೊಬ್ಬರವನ್ನಾದರೂ ಹಾಕೋಣ ಎಂದರೆ ಹಣ ನೀಡುತ್ತಿಲ್ಲ ಎಂದು ರೈತ ಯಂಕಣ್ಣ ಯಡ್ರಮ್ಮನಳ್ಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಬ್ಯಾಂಕಿನವರು ಸಾಲಕ್ಕೆ ಜಮೆ ಮಾಡಿಕೊಳ್ಳಲು ಬರುವುದಿಲ್ಲ ಮತ್ತು ಅದನ್ನು ಸೆಳೆಯುವುದಕ್ಕೆ ಅಡ್ಡಿ ಮಾಡಲು ಬರುವುದಿಲ್ಲ. ರೈತರಿಗೆ ಅನುಕೂಲವಾಗಲಿ ಎಂದು ನೀಡಿದ್ದನ್ನು ಅಡ್ಡಿಪಡಿಸಿದರೆ ಹೇಗೆ?ಎಂದು ರೈತರ ಸಂಘದ ಅಧ್ಯಕ್ಷ ಹನುಮಂತಪ್ಪ ಹೊಳೆಯಾಚೆ ಅವರು ತಿಳಿಸಿದ್ದಾರೆ.