ವರದಿ ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಮೇ.18): ಅಸನಿ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ಮಳೆ ಅಬ್ಬರಿಸುತ್ತಿದೆ. ಕಳೆದ ರಾತ್ರಿಯಿಂದ ಬೆಳಗ್ಗೆವರೆಗೂ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವೆಡೆ ಕೆರೆ ಕೋಡಿ ಬಿದ್ದಿದ್ದರೆ, ಮತ್ತೆ ಕೆಲವೆಡೆ ಮನೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಶಾಲಾ ಗೋಡೆ ಕುಸಿದು ಯುವಕ ಮೃತಪಟ್ಟಿದ್ದಾನೆ. ನಿರಂತರ ಮಳೆ ಹಿನ್ನೆಲೆ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
undefined
ಕೋಡಿ ಬಿದ್ದ ಹಲವು ಕೆರೆ: ಚನ್ನರಾಯಪಟ್ಟಣ ತಾಲೂಕಿನಾದ್ಯಂತ ಅಬ್ಬರಿಸಿದ್ದು, ಅನೇಕ ಕೆರೆಗಳು ಕೋಡಿ ಬಿದ್ದಿದ್ದು, ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಕೆಲವೆಡೆ ತೆಂಗಿನ ತೋಟಕ್ಕೂ ನೀರು ನುಗ್ಗಿದೆ. ಹಿರೀಸಾವೆಯಿಂದ ಸಂಪರ್ಕ ಕಲ್ಪಿಸುವ ಹಲವು ಗ್ರಾಮಗಳ ರಸ್ತೆ ಮೇಲೆಯೇ ಹರಿಯುತ್ತಿದೆ. ಈ ಭಾಗದ ಕೆರೆಗಳನ್ನು ಬೇಸಿಗೆಯಲ್ಲೇ ತುಂಬಿಸಿದ್ದರಿಂದ ಮಳೆನೀರು ಸಂಗ್ರಹಕ್ಕೆ ಸ್ಥಳಾವಕಾಶವೇ ಇಲ್ಲದಿರುವ ಕಾರಣ, ಜೋರು ಮಳೆಯ ನೀರು ಎಲ್ಲೆಂದರಲ್ಲಿ ಪ್ರವಹಿಸುತ್ತಿದೆ.
ಮೀನು ಹಿಡಿಯಲು ದೌಡು: ಕೋಡಿ ಬಿದ್ದ ಕೆರೆ ನೀರಲ್ಲಿ ಮೀನು ಹಿಡಿಯಲು ಗ್ರಾಮಸ್ಥರು ಮುಗಿಬಿದ್ದ ಘಟನೆಯೂ ನಡೆಯಿತು. ಹಿರೀಸಾವೆ ದೊಡ್ಡ ಕೆರೆಯಲ್ಲಿ ಜನರು ಕೋಡಿ ನೀರಲ್ಲಿ ತೇಲಿಬರೋ ಮೀನಿಗಾಗಿ ಬಲೆ ಹಿಡಿದು ಕಾಯುತ್ತಾ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೊಡ್ಡಕೆರೆ ಎರಡೂವರೆ ದಶಕದ ಬಳಿಕ ತುಂಬಿದ್ದು, ಕೆಲವರು ತುಂಬಿದ ಕೆರೆಯಲ್ಲಿ ನೀರಿನಾಟದಲ್ಲಿ ಮಗ್ನರಾಗಿದ್ದರು.
Heavy Rainfall ಹಾಸನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಕೆರೆ ಮೀನು ನೀರು ಪಾಲು: ಭಾರೀ ಮಳೆಯಿಂದ ಕೋಡಿಬಿದ್ದ ಪರಿಣಾಮ 15 ಲಕ್ಷ ಖರ್ಚು ಮಾಡಿ ಹಿರೀಸಾವೆ ಕೆರೆಗೆ ಬಿಟ್ಟಿದ್ದ ಮೀನು ಚೆಲ್ಲಾಪಿಲ್ಲಿಯಾಗಿವೆ. ಕೆರೆ ಕೋಡಿಯಲ್ಲಿ ಲಕ್ಷಾಂತರ ಮೌಲ್ಯದ ಮೀನು ಕೊಚ್ಚಿಹೋಗಿವೆ. ಗ್ರಾಪಂ ಸದಸ್ಯ ಚಂದ್ರು ಎಂಬುವರ, 27 ಲಕ್ಷಕ್ಕೆ ಟೆಂಡರ್ ಪಡೆದು 15 ಲಕ್ಷ ಮೌಲ್ಯದ ೮ ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ದಿಢೀರ್ ಮಳೆಯಿಂದ ಕೆರೆ ಕೋಡಿ ಬಿದ್ದಿದ್ದರಿಂದ, ಮೀನು ಮರಿ ಹೊರ ಹೋಗಿ ನಷ್ಟವಾಗಿದೆ, ಸರ್ಕಾರ ನೆರವು ನೀಡಬೇಕೆಂದು ಚಂದ್ರು ಮನವಿ ಮಾಡಿದ್ದಾರೆ.
ಹಾಸನದಲ್ಲೂ ತೊಂದರೆ: ಹಾಸನ ನಗರದಲ್ಲೂ ಕಳೆದ ರಾತ್ರಿಯಿಂದಲೂ ಧೋ ಎಂದು ಮಳೆರಾಯ ಅಬ್ಬರಿಸಿದ್ದರಿಂದ ಹಾಸನ ನಗರದ ಬನಶಂಕರಿ ಬಡಾವಣೆಯ ಕೆಲವು ಮನೆಗಳು ಹಾಗೂ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದ್ರೆ ಅನುಭವಿಸಿದರು. ಕೆಲ ವಾಹನಗಳೂ ನೀರಿನಲ್ಲಿ ಸಿಲುಕ್ಕಿದ್ದರಿಂದ ಚಾಲಕರು ಮತ್ತು ಮಾಲೀಕರು ಪರದಾಡಿದರು. ಇದೇ ರೀತಿ ಜಿಲ್ಲೆಯ ವಿವಿಧೆಡೆ ವರುಣ ಅಕ್ಷರಶಃ ಅಬ್ಬರಿಸಿದ್ದಾನೆ. ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ನಿನ್ನೆ 420 ಕ್ಯೂಸೆಕ್ ಇದ್ದ ಒಳ ಹರಿವು, ಇಂದು 1266 ಕ್ಯೂಸೆಕ್‌ಗೆ ಏರಿದೆ.
ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು: ರಾತ್ರಿ ಮಾತ್ರವಲ್ಲದೆ ಬೆಳಗ್ಗೆಯಿಂದಲೂ ಎಡೆಬಿಡದೆ ಮಳೆ ಸುರಿದಿದ್ದರಿಂದ ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಇಂದು ರಜೆ ಘೋಷಿಸಿದೆ. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರ ಸೂಚನೆಯಂತೆ ಡಿಡಿಪಿಐ ಪ್ರಕಾಶ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಕ್ಕಳು ಹೊರ ಬರಲು ಸಾಧ್ಯವಾಗದ ಕಾರಣದಿಂದ ಈ ನಿರ್ಧಾರ ಮಾಡಲಾಗಿದ್ದು, ನಾಳಿನ ಪರಿಸ್ಥಿತಿ ನೋಡಿಕೊಂಡು ನಂತರ ತೀರ್ಮಾನಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ನಿರಂತರ ಮಳೆ ಸುರಿಯಿತು. ಇದರಿಂದ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಹೀಗಾಗಿ ಮಳೆ ಹೊರತಾಗಿ ಒಂದು ರೀತಿಯ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ೧೦ ಗಂಟೆಯಾದರೂ ಮೋಡ ಕವಿದ ವಾತಾವರಣ ತಿಳಿಯಾಗಿರಲಿಲ್ಲ.
Udupi Rain ಆರೆಂಜ್ ಅಲರ್ಟ್, ವ್ಯಾಪಕ ಮಳೆಹಾನಿ
ಇನ್ನೂ ನಾಲ್ಕು ದಿನ ಮಳೆ: ಹಾಸನ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗೋಡೆ ಕುಸಿದು ವ್ಯಕ್ತಿ ಸಾವು: ಕಳೆದರೆಡು ದಿನಗಳಿಂದ ಸುರಿದ ಭಾರೀ ಗಾಳಿ ಮಳೆಗೆ ಸರ್ಕಾರಿ ಶಾಲೆ ಗೋಡೆ ಕುಸಿದು ಯುವಕ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ.ಹೊಸೂರು ಗ್ರಾಮದ ಶಿವಕುಮಾರ್ (28) ಮೃತ. ಶಿವಕುಮಾರ್ ಶಾಲೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಶಿಥಿಲವಾಗಿದ್ದ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳ್ಳಿ ಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆ ಸಂಪರ್ಕ ಕಡಿತ: ಸಕಲೇಶಪುರ ತಾಲೂಕಿನಲ್ಲೂ ಮಳೆ ಆರ್ಭಟ ಜೋರಾಗಿದ್ದು, ಕಲ್ಲಾರೆಹಳ್ಳಿಯಲ್ಲಿ ಗ್ರಾಮದ ರಸ್ತೆ ಜಲಾವೃತವಾಗಿ ಕೆಸರು ಗದ್ದೆಯಾಗಿದೆ. ಇದರಿಂದ ಶಾಲೆಗೆ ಹೋಗಲು ಮಕ್ಕಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ. ಇಂದು ಶಾಲೆಗೆ ರಜೆ ಘೋಷಣೆ ಮಾಡಿರುವುದರಿಂದ ಸದ್ಯದ ಸಮಸ್ಯೆ ತಪ್ಪಿದೆ. ಆದರೆ ಮಳೆ ಹೀಗೆಯೇ ಮುಂದುವರಿದರೆ ನೀರು ಶಾಲೆ ಒಳಕ್ಕೇ ನುಗ್ಗುವ ಆತಂಕ ಎದುರಾಗಿದೆ.