ಉಕ್ಕಿ ಹರಿಯುತ್ತಿರುವ ಕಾವೇರಿ ನದಿ: ಮಂಡ್ಯದ ಪ್ರವಾಸಿ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧ

By Kannadaprabha News  |  First Published Jul 16, 2022, 2:11 PM IST

ಕಾವೇರಿ ಜಲಾಯನಯ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಜಲಾಶಯದತ್ತ ಹರಿದುಬರುತ್ತಿದೆ. ಪರಿಣಾಮ ಕೆಆರ್‌ಎಸ್‌ ಜಲಾಶಯದಿಂದ 86 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡಲಾಗಿದೆ. 


ಮಂಡ್ಯ/ಶ್ರೀರಂಗಪಟ್ಟಣ(ಜು.16): ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚು ಪ್ರಮಾಣದ ನೀರನ್ನು ನದಿಗೆ ಹರಿಯಬಿಟ್ಟಿರುವುದರಿಂದ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದು ಅಪಾಯ ಮಟ್ಟತಲುಪಿದೆ. ಜಲಧಾರೆಯನ್ನು ಮೇಳೈಸಿಕೊಂಡಿರುವ ಮಳವಳ್ಳಿಯ ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ. ಕಾವೇರಿ ಜಲಾಯನಯ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಜಲಾಶಯದತ್ತ ಹರಿದುಬರುತ್ತಿದೆ. ಪರಿಣಾಮ ಕೆಆರ್‌ಎಸ್‌ ಜಲಾಶಯದಿಂದ 86 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡಲಾಗಿದೆ. ಇದರ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದ್ದು ಮುಂಜಾಗ್ರತೆಯಾಗಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಾವೇರಿ ನದಿಯಲ್ಲಿ ನೀರಿನ ಮಟ್ಟಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದ ಪ್ರವಾಹ ಉಂಟಾಗುವ ಸಂಭವಗಳಿವೆ. ಹೇಮಾವತಿ ಜಲಾಶಯದಿಂದ ನದಿಗೆ 38 ಸಾವಿರ ಕ್ಯುಸೆಕ್‌ ನೀರನ್ನು ಹರಿಯಬಿಟ್ಟಿದ್ದರೆ, ಹಾರಂಗಿ ಜಲಾಶಯದಿಂದಲೂ 40 ಸಾವಿರ ಕ್ಯುಸೆಕ್‌ನಷ್ಟುನೀರನ್ನು ನದಿಗೆ ಹರಿಸಲಾಗುತ್ತಿದೆ. ಕಾವೇರಿ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ಅಧಿಕ ಪ್ರಮಾಣದ ನೀರು ಕೆಆರ್‌ಎಸ್‌ನತ್ತ ಹರಿದುಬರುತ್ತಿದೆ. ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ ಅಪಾಯ ಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

ಶ್ರೀರಂಗಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ:

ಈಗಾಗಲೇ ಶ್ರೀರಂಗಪಟ್ಟಣದ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಸ್ನಾನ ಘಟ್ಟಬಳಿಯ ಕಾವೇರಿ ನದಿ ತಟದಲ್ಲಿದ್ದ ಶ್ರೀ ನಿಮಿಷಾಂಬ ದೇವಾಲಯ, ಗೋಸಾಯಿಘಾಟ್‌ದೇವಸ್ಥಾನಗಳು, ಸಂಗಮ, ಪಶ್ಚಿಮವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಚೆಕ್‌ಪೋಸ್ಟ್‌ ಬಳಿಯ ಸಾಯಿಮಂದಿರ ಸೇರಿದಂತೆ ಇತರ ಧಾರ್ಮಿಕ ಕೇಂದ್ರಗಳು ಭಾಗಶಃ ಜಲಾವೃತಗೊಂಡಿವೆ. ಹೆಚ್ಚಿನ ಪ್ರಮಾಣ ದಾಟಿದರೆ ಬಹುತೇಕ ನದಿ ಪಾತ್ರದ ದೇವಾಲಯಗಳು, ನದಿ ಪಕ್ಕದ ಗ್ರಾಮಗಳಿಗೆ ಪ್ರವಾಹ ಭೀತಿ ಹೆಚ್ಚಿದ್ದು, ಆತಂಕ ಸೃಷ್ಠಿಯಾಗಿದೆ.

ವೆಲ್ಲೆಸ್ಲಿ ಸೇತುವೆ ಮುಳುಗಡೆ ಸಂಭವ

ಶ್ರೀರಂಗಪಟ್ಟಣ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ಯಾರು ಪ್ರಯಾಣ ಸಂಚರಿಸದಂತೆ ತಡೆಗೋಡೆಗಳ ನಿರ್ಮಿಸಲಾಗಿದೆ. 86 ಕ್ಯುಸೆಕ್‌ ನೀರನ್ನು ಬಿಟ್ಟಿರುವುದಕ್ಕೆ ಸೇತುವೆ ಕೆಳಭಾಗದ ಕಂಬಗಳೆಲ್ಲವೂ ನೀರಿನಲ್ಲಿಇ ಮುಚ್ಚಿ ಹೋಗಿವೆ. ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿರುವಂತೆ 1 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನೀರು ಹರಿಸಿದಲ್ಲಿ ಯಾವುದೇ ಸಮಯದಲ್ಲಾದರೂ ಸೇತುವೆ ಮುಳುಗಡೆಯಾಗುವ ಸಾಧ್ಯತೆಗಳಿವೆ. ಹಾಗಾಗಿ ಸೇತುವೆ ಬಳಿ ಜನರು ತೆರಳದಂತೆ ಪೊಲೀಸ್‌ ಭದ್ರತೆ ಹಾಕಲಾಗಿದೆ.

ಪ್ರವಾಹದಂತೆ ಆವರಿಸಿದ ನೀರು

ಪ್ರವಾಸಿ ತಾಣಗಳಾದ ರಂಗನತಿಟ್ಟು ಪಕ್ಷಿಧಾಮ, ಬಲಮುರಿ ಹಾಗೂ ಸೇರಿದಂತೆ ಇತರ ಪ್ರದೇಶದಲ್ಲಿ ಸುತ್ತಲೂ ಪ್ರವಾಹದಂತೆ ನೀರು ಆವರಿಸಿದೆ. ಗೋಸಾಯ್‌ಘಾಟ್‌ನ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯ, ಶ್ರೀ ಹರೆರಾಮ ಹರೆಕೃಷ್ಣ ಮಂದಿರ ಹಾಗೂ ಶ್ರದ್ದಾ ಕೇಂದ್ರಗಳಿಗೆ ಪ್ರವಾಹದ ನೀರು ನುಗ್ಗಿದ್ದು ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು ಮತ್ತು ಪ್ರವಾಸಿಗರು ತೆರಳದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಯಾವುದೇ ವಾಹನಗಳು ಸಂಚರಿದಂತೆ ಬ್ಯಾರಿಕೇಡ್‌ ನಿರ್ಮಿಸಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.

ಮಹಾತ್ಮ ಗಾಂಧೀಜಿ ಚಿತಾಭಸ್ಮ ಬಿಟ್ಟಸ್ಥಳ, ಶ್ರೀ ಕ್ಷೇತ್ರ ಪಶ್ಚಿಮವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈಗಾಗಲೇ ಸಂಪೂರ್ಣ ಮುಳುಗಡೆಗೊಂಡಿದ್ದು, ಶ್ರದ್ದಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಪೂಜೆಗಳನ್ನು ಎತ್ತರ ಸ್ಥಳಲ್ಲಿ ನೆರವೇರಿಸುತ್ತಿದ್ದು ಈ ಪ್ರದೇಶದಲ್ಲಿ ಯಾರು ಹೋಗದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ಧಾರೆ. ಚೆಕ್‌ಪೋಸ್ಟ್‌ ಬಳಿಯ ಸಾಯಿಮಂದಿರ ಸೇರಿದಂತೆ ಇತರ ಧಾರ್ಮಿಕ ಕೇಂದ್ರಗಳು ಭಾಗಶಃ ಜಲಾವೃತಗೊಂಡಿವೆ.

ಕಾವೇರಿ ನದಿ ಮದ್ಯೆ ಇರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರು ನುಗ್ಗಿ ನದಿತೀರ ಪ್ರದೇಶಗಳನ್ನು ನೀರು ಸುತ್ತುವರಿದಿದೆ. ಅಧಿಕಾರಿಗಳು, ಸಿಬ್ಬಂದಿ ನೀರಿನೊಳಗೆ ಸಿಲುಕಿರುವ ದೋಣಿಗಳ ಹೊರತರಲು ಪ್ರಯತ್ನ ಮಾಡುತ್ತಿದ್ದಾರೆ.

ಪ್ರವಾಸಿಗರು, ಸಾರ್ವಜನಿಕರಿಗೆ ನಿಷೇಧ

ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚು ನೀರನ್ನು ನದಿಗೆ ಹರಿಸುತ್ತಿರುವುದರಿಂದ ಮಳವಳ್ಳಿ ತಾಲೂಕು ವ್ಯಾಪ್ತಿಯ ನದಿ ಪಾತ್ರಗಳು, ಪ್ರವಾಹ ಉಂಟಾಗಬಹುದಾದ ಸ್ಥಳಗಳು ಹಾಗೂ ಇತರೆ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಮಳವಳ್ಳಿ ತಾಲೂಕಿನ ಮುತ್ತತ್ತಿ, ಗಗನಚುಕ್ಕಿ ಜಲಪಾತ, ಚಿಕ್ಕಮುತ್ತತ್ತಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ನದಿ ಪಾತ್ರದ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದ್ದಾರೆ.

Balehonnur: ಮುಖ್ಯಮಂತ್ರಿಗಳೇ, ಮಲೆನಾಡು ಜನರ ನೆರವಿಗೆ ಬನ್ನಿ, ಶಾಸಕ ರಾಜೇಗೌಡ

ಗೌತಮ ಕ್ಷೇತ್ರದ ಸ್ವಾಮೀಜಿ ಬಗ್ಗೆ ಆತಂಕ

ಕಾವೇರಿ ನದಿ ಮಧ್ಯದ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದ ಶ್ರೀಮಠದ ಗಜಾನನ ಸ್ವಾಮೀಜಿಯವರು ಹಾಗೂ ಭಕ್ತರು ವಾಸವಿದ್ದು ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಹಿನ್ನೆಲೆಯಲ್ಲಿ ಗೌತಮಕ್ಷೇತ್ರದ ಸುತ್ತಲೂ ಪ್ರವಾಹದ ನೀರು ಆವರಿಸಿದ್ದು, ಸ್ವಾಮೀಜಿ ಹಾಗೂ ಇತರ ಭಕ್ತರು ಮಠದಲ್ಲೇ ಇರುವ ಸ್ವಾಮೀಜಿ ಬಗ್ಗೆ ತಹಸೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಅಲ್ಲಿನ ಯೋಗಕ್ಷೇಮವನ್ನು ವಿಚಾರಿಸಿದರು.

ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಕ್ಷೇತ್ರದ ಮಧ್ಯೆ ಹರಿಯುವ ಒಂದು ತಟದಲ್ಲಿ ನಿಂತು ದೂರವಾಣಿಗಳ ಮೂಲಕ ಸಂಪರ್ಕಿಸಿದರು. ನಡುಗಡ್ಡೆ ಕ್ಷೇತ್ರದಿಂದ ಹೊರ ಬರಲು ಎಲ್ಲಾ ಸಿದ್ದತೆಗಳ ಕುರಿತು ಮಾತನಾಡಿದ ಅವರಿಗೆ ಗಜಾನನ ಸ್ವಾಮೀಜಿಗಳು ದೂರವಾಣಿ ಸಂಪರ್ಕದಲ್ಲೇ ಮಾತನಾಡಿ ,ಇಲ್ಲಿ ಯಾವ ಭಯವಿಲ್ಲ. ಇನ್ನು ಒಂದು ಲಕ್ಷ ಕ್ಯುಸೆಕ್‌ ನೀರು ಕಾವೇರಿ ನದಿಯಲ್ಲಿ ಬಂದರೂ ಕ್ಷೇತ್ರ ಮುಳುಗಡೆಯಾಗಲ್ಲ ನೀವು ಯಾವುದೇ ಆತಂಕ ಪಡದಿರಿ ಎಂದು ತಹಸೀಲ್ದಾರ್‌ ಅವರಿಗೆ ತಿಳಿಸಿದ್ದಾರೆ.

click me!