ಮಲೆನಾಡಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಅನೇಕ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲಾಗದಂತಹ ಸ್ಥಿತಿ ತಲುಪಿದೆ. ಪ್ರವಾಸಿಗರು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ: ರಾಜೇಗೌಡ
ಬಾಳೆಹೊನ್ನೂರು(ಜು.16): ಕಳೆದ ವರ್ಷ ಸುರಿದ ಬಾರಿ ಮಳೆಯಿಂದ ಕ್ಷೇತ್ರದಲ್ಲಿ ಉಂಟಾದ ಹಾನಿಯನ್ನು ಅಂದಿನ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರೊಂದಿಗೆ ನಾನೂ ಕೂಡ ಪರಿಶೀಲನೆ ನಡೆಸಿದ್ದೇನೆ. ಆದರೆ, ಮಳೆಯಿಂದ ಉಂಟಾದ ಹಾನಿಗೆ ಇದೂವರೆಗೂ ಪರಿಹಾರ ನೀಡಲು ಸರ್ಕಾರ ಒಂದು ರುಪಾಯಿ ಹಣ ಕೂಡ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಅನೇಕ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲಾಗದಂತಹ ಸ್ಥಿತಿ ತಲುಪಿದೆ. ಪ್ರವಾಸಿಗರು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಕೈ ಮುಗಿದು ಕಳಕಳಿಯ ಮನವಿ ಮಾಡುತ್ತೇನೆ ದಯವಿಟ್ಟು ಮಲೆನಾಡು ಭಾಗದ ಜನರ ನೆರವಿಗೆ ಬನ್ನಿ. ನೆರವಿಗೆ ಬಾರದಿದ್ದಲ್ಲಿ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ಅನಿವಾರ್ಯ ಎಂಬಂತಾಗಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಮಸ್ಯೆ, ಕಷ್ಟ ಹೇಳಿಕೊಳ್ಳುವುದಕ್ಕೆ ವೇದಿಕೆಯೇ ಇಲ್ಲದಂತಾಗಿದೆ ಎಂದರು.
ಇಳಿದ ಮಳೆ, ಇಳಿಯದ ನೆರೆ : ಮಳೆ ದುರಂತಕ್ಕೆ 4 ಬಲಿ ಮಲೆನಾಡಿನ ಹಲವೆಡೆ ಭೂ, ರಸ್ತೆ ಕುಸಿತ
ಶೃಂಗೇರಿ ಕ್ಷೇತ್ರ ಏಳು ಜೀವನದಿಗಳ ಉಗಮ ಸ್ಥಾನ ಹೊಂದಿದೆ. ಸರ್ಕಾರ ಇಲ್ಲಿ ಹೆಚ್ಚು ಒತ್ತು ನೀಡಬೇಕು. ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ಸ್ಥಳ ಪರಿಶೀಲನೆಗೆ ಕಂದಾಯ ಸಚಿವರನ್ನು ತಕ್ಷಣ ಕಳುಹಿಸಬೇಕು. ಅನುದಾನ ನೀಡುವಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಎಂಎಲ್‌ಎಗಳ ಕ್ಷೇತ್ರಕ್ಕೆ 50 ಕೋಟಿ ರು. ನೀಡಿದ್ದರೆ ನಮಗೆ 25 ಕೋಟಿ ನೀಡಿದೆ. ಕಳೆದ ಮೂರು ವರ್ಷದಿಂದ ಅಫೆಂಡಿಕ್ಸ್ ಅಡಿಯಲ್ಲೂ ಹಣ ಬಿಡುಗಡೆ ಮಾಡಿಲ್ಲ. ಹುತ್ತಿನಗದ್ದೆ, ಕೂತುಗೋಡುನಲ್ಲಿ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಕ್ಷೇತ್ರದಲ್ಲಿ 9 ಮನೆಗಳು ಸಂಪೂರ್ಣವಾಗಿ ನೆಲ ಕಚ್ಚಿದೆ. ಜಿಲ್ಲಾಡಳಿತ ಹಾನಿ ಪ್ರದೇಶದ ವೀಕ್ಷಣೆ ಮಾಡಿದೆ. ಆದರೆ, ಕಳೆದ ವರ್ಷ ನೀಡಿದ್ದ ವರದಿಗೆ ಸರ್ಕಾರ ಯಾವುದೇ ಮಾನ್ಯತೆ ನೀಡಿಲ್ಲ. ರೈತರು ಬೆಳೆದ ಕಾಫಿ, ಅಡಕೆ, ಕಾಳುಮೆಣಸು ಕೊಳೆಯಿಂದ ನೆಲಕ್ಕುದುರುತ್ತಿದೆ. ಭತ್ತದ ಗದ್ದೆಗಳು ಹಳ್ಳದ ನೀರಿನಲ್ಲಿ ಮುಚ್ಚಿಹೋಗಿದೆ. ನೀರಾವರಿ, ಲೋಕೋಪಯೋಗಿ, ತೋಟಗಾರಿಕೆ, ಕೃಷಿ, ಕಾಫಿ ಮಂಡಳಿ ನೀಡುವ ಬೆಳೆ ಹಾನಿ ವರದಿಯನ್ನು ಪರಿಗಣಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ, ಸದಸ್ಯ ಇಬ್ರಾಹಿಂ ಶಾಫಿ, ಎಂ.ಎಸ್.ಅರುಣೇಶ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಂತೋಷ್ ಕುಮಾರ್, ಬಿ.ಕೆ.ಮಧುಸೂಧನ್, ಜಾನ್ ವಿಲ್ರೆಡ್ ಡಿಸೋಜ ಇದ್ದರು.
ಕೆರೆ ಕಟ್ಟೆಒಡೆದು ಅನಾಹುತ ಆದಲ್ಲಿ ಮೊದಲು ಪಂಚಾಯತ್‌ರಾಜ್ ಇಲಾಖೆ ಎಂಜಿನಿಯರ್‌ಗಳಾದ ಮೋತಿಲಾಲ್ ಹಾಗೂ ಸುನೀಲ್ ನಿಮ್ಮನ್ನು ಜೈಲಿಗಟ್ಟುತ್ತೇನೆ. 22 ಎಕರೆ ವಿಸ್ತೀರ್ಣದ ಕೆರೆಯ ಮಧ್ಯಭಾಗದಲ್ಲಿ ಸಣ್ಣ ಪ್ರಮಾಣದ ತೂತು ಬಿದ್ದ ಪರಿಣಾಮ ಸಾಕಷ್ಟುನೀರು ಹೊರ ಹೋಗುತ್ತಿದೆ. ತಕ್ಷಣ ಕೆರೆ ನೀರು ಈ ರೀತಿ ಹರಿದು ದಂಡೆ ಕುಸಿತವಾದಲ್ಲಿ ಯಾರು ಹೊಣೆ? ತಕ್ಷಣ ಕೆರೆಯ ಏರಿ ದುರಸ್ತಿ ಕುರಿತು ವರದಿ ಸಿದ್ಧಪಡಿಸಿ ನೀಡಿ. ಕಾಮಗಾರಿಗೆ ಬೇಕಾದ ಹಣದ ಬಗ್ಗೆ ಇಲಾಖೆ ಸಚಿವರೊಂದಿಗೆ ಮಾತನಾಡುತ್ತೇನೆ ಅಂತ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.
‘ಶೃಂಗೇರಿ ಕ್ಷೇತ್ರ ಅತಿವೃಷ್ಠಿ ಪ್ರದೇಶವೆಂದು ಘೋಷಿಸಿ’
ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಖಾಂಡ್ಯ ಹೋಬಳಿಯೂ ಸೇರಿದಂತೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಹಾನಿ ಸಂಭವಿಸಿದೆ. ಈ ಪ್ರದೇಶವನ್ನು ಅತಿವೃಷ್ಠಿ ಪ್ರದೇಶ ಎಂದು ಘೋಷಿಸುವಂತೆ ಶಾಸಕ ಟಿ.ಡಿ.ರಾಜೇಗೌಡ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಶಾಸಕರ ಕಚೇರಿ ಸಮರ್ಪಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗಗಳಲ್ಲಿ ಎಡೆಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಈ ಬಾರಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ರೈತರಿಗೆ ಸಾಧ್ಯ ಆಗುತ್ತಿಲ್ಲ. ಅಡಕೆ, ಕಾಫಿ, ಏಲಕ್ಕಿ, ಕಾಳುಮೆಣಸು ಅತಿಯಾದ ಮಳೆಯಿಂದಾಗಿ ಕೊಳೆತುಹೋಗಿ ಉದುರತೊಡಗಿವೆ. ಮುಂದಿನ ಸಾಲಿನ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿ ರೈತರು ಇದ್ದಾರೆ. ಸರ್ಕಾರವು ರೈತರ ಸಹಾಯಕ್ಕೆ ಬರಬೇಕಿದೆ ಎಂದರು.
ಗುಡ್ಡ ಕುಸಿದು ಮನೆ ಸೇರಿದ ಭಾರಿ ಪ್ರಮಾಣದ ಮಣ್ಣು: ಮಳೆಗೆ ತತ್ತರಿಸಿದ ಮಲೆನಾಡು
ಉಪಕರಣಗಳ ವಿತರಣೆ:
ಸುದ್ದಿಗೋಷ್ಠಿಗೂ ಮೊದಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ .24 ಲಕ್ಷ ವೆಚ್ಚದಲ್ಲಿ 12 ಫಲಾನುಭವಿಗಳಿಗೆ ಬೋರ್‌ವೆಲ್, ಸಬ್ ಮರ್ಸಿಬಲ್ 5 ಎಚ್‌ಪಿ ಪಂಪ್ ಹಾಗೂ ಮೋಟಾರ್, ಪೈಪ್, ಜಂಕ್ಷನ್ ಬಾಕ್ಸ್ ಮುಂತಾದ ಉಪಕರಣಗಳನ್ನು ವಿತರಿಸಲಾಯಿತು.
ವಿಕಲಚೇತನ ಮತ್ತು ಹಿರಿಯ ನಾಗರೀಕ ಇಲಾಖೆ ಯೋಜನೆಯಡಿ 5 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು, ವಿಕಲಚೇತನರನ್ನು ವರಿಸಿದ ಸಾಮಾನ್ಯ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾಗುವ .50 ಸಾವಿರ ಮೊತ್ತದ 5 ವರ್ಷಗಳ ಅವಧಿಯ ಬಾಂಡ್ ಅನ್ನು ನವ್ಯ ಕರ್ಣಾಕರ್ ದಂಪತಿಗೆ ನೀಡಲಾಯಿತು.
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಕೇಶ್, ವಿಕಲಚೇತನ ಹಾಗೂ ಹಿರಿಯ ನಾಗರೀಕ ಇಲಾಖೆಯ ಅಧಿಕಾರಿ ಚರಣ್‌ರಾಜ್, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಇನೇಶ್, ಬಿಲ್ಲವ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಸತೀಶ್, ಹರಂದೂರು ಗ್ರಾಪಂ ಸದಸ್ಯ ಆನಂದ್, ಪ.ಪಂ ಸದಸ್ಯರಾದ ರಶೀದ್, ವಿಜಯ್‌ಕುಮಾರ್, ಸತೀಶ್ ನಾಯ್‌ಕ, ರಾಮಪ್ಪ ಇತರರಿದ್ದರು.