
ಬಳ್ಳಾರಿ (ಡಿ.23): ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನ ನಡೆಯಿಂದ ಮನನೊಂದು ಗೃಹಿಣಿಯೊಬ್ಬರು ಸೆಲ್ಫಿ ವಿಡಿಯೋ ಚಿತ್ರೀಕರಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶೋಭಾರಾಣಿ ಅವರು ಮಾಧ್ಯಮಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯನ್ನು ಮುನ್ನಿ (26) ಎಂದು ಗುರುತಿಸಲಾಗಿದೆ. ಕಳೆದ 6 ವರ್ಷಗಳ ಹಿಂದೆ ಈಕೆಗೆ ಮಬಾಷ ಎಂಬುವವರೊಂದಿಗೆ ಮದುವೆಯಾಗಿತ್ತು. ಆದರೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿ ಹಿರಿಯರ ಸಮ್ಮುಖದಲ್ಲಿ ಈ ದಂಪತಿ ಬೇರ್ಪಟ್ಟಿದ್ದರು. ನಂತರ ಮುನ್ನಿ ಅವರು ಸ್ವಾವಲಂಬಿಯಾಗಿ ಬದುಕಲು ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ದೂರದ ಸಂಬಂಧಿ ಶೇಕ್ಷಾವಲಿ ಎಂಬಾತನ ಪರಿಚಯವಾಗಿದೆ.
ಈತನ ಪರಿಚಯ ಪ್ರೇಮಕ್ಕೆ ತಿರುಗಿ ಶೇಕ್ಷಾವಲಿ, ಮುನ್ನಿ ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ಇಬ್ಬರ ನಡುವೆ ನಿಕಟ ಸಂಬಂಧವೂ ಇತ್ತು ಎನ್ನಲಾಗಿದೆ. ಆದರೆ, ಮದುವೆಯ ಪ್ರಸ್ತಾಪ ಬಂದಾಗ ಶೇಕ್ಷಾವಲಿ ಆಕೆಯನ್ನು ವಂಚಿಸಲು ಶುರು ಮಾಡಿದ್ದಾನೆ. ಈತನ ಮೋಸದಿಂದ ತೀವ್ರ ಮನನೊಂದ ಮುನ್ನಿ, ಮನೆಯಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ವಿಡಿಯೋ ಮಾಡಿಕೊಂಡಿರುವ ಅವರು, ತಮ್ಮ ಸಾವಿಗೆ ಶೇಕ್ಷಾವಲಿ ಮತ್ತು ಆತನ ಕುಟುಂಬದವರೇ ಕಾರಣ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು, 'ಮೃತ ಮಹಿಳೆ ಮುನ್ನಿ ಅವರ ಸಹೋದರ ನಿಜಾಂ ನೀಡಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮ*ಹತ್ಯೆಗೂ ಮುನ್ನ ಮೃತಳು ಮಾಡಿಕೊಂಡಿರುವ ಸೆಲ್ಫಿ ವಿಡಿಯೋ ಪ್ರಬಲ ಸಾಕ್ಷಿಯಾಗಿದೆ. ಈ ಆಧಾರದ ಮೇಲೆ ಎ-1 ಆರೋಪಿ ಶೇಕ್ಷಾವಲಿಯನ್ನು ಈಗಾಗಲೇ ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.
ದೂರಿನಲ್ಲಿ ಶೇಕ್ಷಾವಲಿಯ ತಾಯಿ ಮತ್ತು ಹೆಂಡತಿಯ ಹೆಸರೂ ಉಲ್ಲೇಖವಾಗಿದೆ. 'ಸದ್ಯಕ್ಕೆ ಇವರನ್ನು ಬಂಧಿಸಿಲ್ಲ. ಆದರೆ ತನಿಖೆ ಮುಂದುವರಿದಿದ್ದು, ಒಂದು ವೇಳೆ ಈ ಆತ್ಮಹತ್ಯೆ ಪ್ರೇರಣೆಯಲ್ಲಿ ಅವರ ಪಾತ್ರ ಇರುವುದು ಸಾಬೀತಾದರೆ ಖಂಡಿತವಾಗಿಯೂ ಅವರನ್ನೂ ಬಂಧಿಸಲಾಗುವುದು' ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಗಾಂಧಿನಗರ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಮುನ್ನಿ ಅವರ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.