ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿ ಹಣ ವಸೂಲಿ!

Published : Dec 23, 2025, 05:37 PM IST
hoskote kidnapping case

ಸಾರಾಂಶ

ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಸುಲಿಗೆ ಮಾಡಿದೆ. ವಿದ್ಯಾರ್ಥಿಗಳನ್ನು ಒಂದು ಗಂಟೆ ಕಾಲ ಒತ್ತೆಯಾಳಾಗಿರಿಸಿ, ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡು, ದೈಹಿಕ ಹಿಂಸೆ ನೀಡಿ ಪರಾರಿಯಾಗಿದ್ದಾರೆ. 

ಹೊಸಕೋಟೆ: ಬಿರಿಯಾನಿ ತಿನ್ನಲು ತೆರಳಿದ್ದ ಪ್ರತಿಷ್ಠಿತ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಸುಲಿಗೆ ನಡೆಸಿದ ಘಟನೆ ಹೊಸಕೋಟೆ ಸಮೀಪದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಸುಮಾರು ಒಂದು ಗಂಟೆ ಕಾಲ ಒತ್ತೆಯಾಳುಗಳಾಗಿ ಇರಿಸಿಕೊಂಡು ಹಣ, ಮೊಬೈಲ್‌ಗಳನ್ನು ಕಸಿದುಕೊಂಡು ಹಿಂಸೆ ನೀಡಿದ್ದಾರೆ. ಘಟನೆಯ ಸಂಬಂಧ ಸಂತ್ರಸ್ತ ವಿದ್ಯಾರ್ಥಿಗಳ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯ ಎಸಗಿದ ಕೆ.ಜಿ.ಹಳ್ಳಿ ನಿವಾಸಿ ಅರ್ಫಾತ್ ಅಹಮದ್ (24) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಬಿರಿಯಾನಿ ತಿಂದು ವಾಪಸ್ಸಾಗುವಾಗ ದಾಳಿ

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಾಗಲೂರು ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಭಾನುವಾರ ಮುಂಜಾನೆ ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದರು. ಬಿರಿಯಾನಿ ಸೇವಿಸಿ ವಾಪಸ್ಸಾಗುವ ವೇಳೆ, ಬೆಳಿಗ್ಗೆ ಸುಮಾರು ಆರು ಗಂಟೆ ಸುಮಾರಿಗೆ ಮೇಡಹಳ್ಳಿ ಬಳಿ ಈ ಘಟನೆ ನಡೆದಿದೆ. ಅಲ್ಲಿ ಆರೇಳು ಮಂದಿ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಅವರಿಬ್ಬರ ಬೈಕ್‌ಗಳನ್ನು ಕಸಿದುಕೊಂಡು, ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ. ಬಳಿಕ ಹಣಕ್ಕಾಗಿ ಬೆದರಿಸಿ ಸುಲಿಗೆ ನಡೆಸಿದ್ದಾರೆ.

ಯುಪಿಐ ಮೂಲಕ ಹಣ ವರ್ಗಾವಣೆ, ಹಿಂಸೆ

ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ಬಳಸಿಕೊಂಡು, ಯುಪಿಐ ಮುಖಾಂತರ ಸುಮಾರು 1,800 ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದಲೂ ತೃಪ್ತರಾಗದ ಆರೋಪಿಗಳು, ವಿದ್ಯಾರ್ಥಿಗಳನ್ನು ಸುಮಾರು ಒಂದು ಗಂಟೆ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಇದಕ್ಕೂ ಮುಂದೆ ಹೋಗಿದ ಕಿಡಿಗೇಡಿಗಳು, ವಿದ್ಯಾರ್ಥಿಗಳ ಮೊಬೈಲ್‌ಗಳಿಂದ ಅವರ ಸ್ನೇಹಿತರಿಗೆ ಕರೆ ಮಾಡಿಸಿ, ಹಣ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾರೆ.

ಪೊಲೀಸರಿಗೆ ಮಾಹಿತಿ, ಆರೋಪಿಗಳ ಪರಾರಿ

ವಿದ್ಯಾರ್ಥಿಗಳ ಸ್ನೇಹಿತರು ಘಟನೆ ಬಗ್ಗೆ ಬಾಗಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಆದರೆ ಪೊಲೀಸರು ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸಂತ್ರಸ್ತ ವಿದ್ಯಾರ್ಥಿಗಳು ಆವಲಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

PREV
Read more Articles on
click me!

Recommended Stories

ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!
8 ತಿಂಗಳಲ್ಲೇ ದೇವನಹಳ್ಳಿ ಪ್ಲ್ಯಾಂಟ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಿಸಿಕೊಂಡ ಫಾಕ್ಸ್‌ಕಾನ್‌!