ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಗಿಫ್ಟ್: ಇಲ್ಲಿದೆ ಹೊಸ ಬಸ್‌ಗಳ ವೇಳಾಪಟ್ಟಿ

Published : Dec 23, 2025, 05:55 PM IST
Metro Feeder Bus

ಸಾರಾಂಶ

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ! ಜ್ಞಾನಭಾರತಿ, ಕೆ.ಆರ್. ಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳಿಂದ ಹೊಸ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ. ಮಾರ್ಗ, ಸಮಯ ತಿಳಿಯಲು ಕ್ಲಿಕ್ ಮಾಡಿ.

ಬೆಂಗಳೂರು (ಡಿ.2): ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ 'ಕೊನೆಯ ಮೈಲಿ ಸಂಪರ್ಕ' (Last Mile Connectivity) ಸುಗಮಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಹೆಜ್ಜೆ ಇಟ್ಟಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ವಿವಿಧ ಪ್ರದೇಶಗಳಿಗೆ ಹೊಸದಾಗಿ ಫೀಡರ್ ಬಸ್ ಸೇವೆಗಳನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ.

ಮೆಟ್ರೋ ನಿಲ್ದಾಣದಿಂದ ಮನೆ ಅಥವಾ ಕಚೇರಿ ತಲುಪಲು ಪಡುತ್ತಿದ್ದ ಹರಸಾಹಸಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಈ ಸಹಭಾಗಿತ್ವ ಏರ್ಪಟ್ಟಿದೆ. ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಬಿಎಂಟಿಸಿ ಹೊಸ ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ ಆರಂಭಿಸಿದೆ.

ಹೊಸ ಫೀಡರ್ ಬಸ್ ಮಾರ್ಗಗಳ ವಿವರ ಹೀಗಿದೆ:

1. ಜ್ಞಾನಭಾರತಿ ಮೆಟ್ರೋ ನಿಲ್ದಾಣ ಭಾರತ್‌ನಗರ 2ನೇ ಹಂತ: ಈ ಬಸ್ ಜ್ಞಾನಭಾರತಿ ನಿಲ್ದಾಣದಿಂದ ಹೊರಟು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಮುದ್ದೈಯನಪಾಳ್ಯ ಜಂಕ್ಷನ್, ಭಾರತ್‌ನಗರ 1ನೇ ಹಂತ ಹಾಗೂ ಬ್ಯಾಡರಹಳ್ಳಿ ಮೂಲಕ ಸಂಚರಿಸಲಿದೆ.

ಜ್ಞಾನಭಾರತಿಯಿಂದ ಸಮಯ: ಬೆಳಗ್ಗೆ 06.25 ರಿಂದ ರಾತ್ರಿ 20.55 ರವರೆಗೆ (ಒಟ್ಟು 10 ಟ್ರಿಪ್‌ಗಳು).

ಭಾರತ್‌ನಗರದಿಂದ ಸಮಯ: ಬೆಳಗ್ಗೆ 05.50 ರಿಂದ ರಾತ್ರಿ 20.15 ರವರೆಗೆ.

2. ಕೆ.ಆರ್. ಪುರ ಮೆಟ್ರೋ ನಿಲ್ದಾಣ – ಸರ್ಜಾಪುರ: ಮಹಾದೇವಪುರ ಜಂಕ್ಷನ್, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ ಸೇತುವೆ, ಕಾಡುಬೀಸನಹಳ್ಳಿ, ಕೊಡತಿ ಗೇಟ್ ಹಾಗೂ ದೊಮ್ಮಸಂದ್ರ ಮೂಲಕ ಈ ಬಸ್ ಸಂಚರಿಸಲಿದೆ. ಇದು ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ನೀಡಲಿದೆ.

ಕೆ.ಆರ್. ಪುರದಿಂದ ಸಮಯ: ಬೆಳಗ್ಗೆ 05.30 ರಿಂದ ರಾತ್ರಿ 20.40 ರವರೆಗೆ (ಒಟ್ಟು 16 ಟ್ರಿಪ್‌ಗಳು).

ಸರ್ಜಾಪುರದಿಂದ ಸಮಯ: ಬೆಳಗ್ಗೆ 05.30 ರಿಂದ ರಾತ್ರಿ 20.40 ರವರೆಗೆ.

3. ಬೆನ್ನಿಗಾನಹಳ್ಳಿ (ಟಿನ್ ಫ್ಯಾಕ್ಟರಿ) – ಬಿದರಹಳ್ಳಿ: ಟಿ.ಸಿ. ಪಾಳ್ಯ ಕ್ರಾಸ್, ಕಿತ್ತಗನೂರು ಮತ್ತು ಈಸ್ಟ್ ಪಾಯಿಂಟ್ ಕಾಲೇಜ್ ಮೂಲಕ ಈ ಬಸ್ ಸೇವೆ ಲಭ್ಯವಿರಲಿದೆ.

ಟಿನ್ ಫ್ಯಾಕ್ಟರಿಯಿಂದ ಸಮಯ: ಬೆಳಗ್ಗೆ 08.50 ರಿಂದ ಸಂಜೆ 17.35 ರವರೆಗೆ.

ಬಿದರಹಳ್ಳಿಯಿಂದ ಸಮಯ: ಬೆಳಗ್ಗೆ 08.00 ರಿಂದ ಸಂಜೆ 16.45 ರವರೆಗೆ.

ಸಾರ್ವಜನಿಕರು ಆಟೋ ಅಥವಾ ಖಾಸಗಿ ವಾಹನಗಳ ಅವಲಂಬನೆ ತಗ್ಗಿಸಿ, ಈ ಸುರಕ್ಷಿತ ಹಾಗೂ ಸಮಯಬದ್ಧ ಫೀಡರ್ ಬಸ್ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ವಿನಂತಿಸಿದೆ.

PREV
Read more Articles on
click me!

Recommended Stories

ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿ ಹಣ ವಸೂಲಿ!
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!