ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸಭೆಯಲ್ಲಿ ಎಚ್ಚರಿಕೆ| ಬಳ್ಳಾರಿಯಲ್ಲಿ ಎನ್‌ಜಿಒ ಪದಾಧಿಕಾರಿಗಳ ಸಭೆ|ಸಾಮಾಜಿಕ ಹೊಣೆಗಾರಿಕೆ ಮರೆತು ವರ್ತಿಸಿದರೆ ಕ್ರಮ ನಿಶ್ಚಿತ|
ಬಳ್ಳಾರಿ(ಮಾ.20): ಅನ್ಯಕಾರ್ಯ ನಿಮಿತ್ತ ಬಳ್ಳಾರಿ ಜಿಲ್ಲೆಯಿಂದ ಹೊರದೇಶಗಳಿಗೆ ಹೋಗಿ ಬಂದವರು ತಕ್ಷಣ ಮಾಹಿತಿ ನೀಡಬೇಕು ಅಥವಾ ಇಲ್ಲವೇ ಜಿಲ್ಲಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು 14 ದಿನ ಗೃಹಬಂಧನದ ನಿಗಾದಲ್ಲಿರಬೇಕು. ಈ ನಿಗಾದ ಸಂದರ್ಭದಲ್ಲಿಯೂ ಎಲ್ಲೆಂದರಲ್ಲಿ ತಿರುಗಾಡಿದ್ದು ಕಂಡು ಬಂದಲ್ಲಿ ಅಂಥವರನ್ನು ಬಂಧಿಸಿ, ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಎಚ್ಚರಿಕೆ ನೀಡಿದ್ದಾರೆ.
ನಡುಕ ಹುಟ್ಟಿಸಿರುವ ಕೊರೋನಾಗೆ ತಾಯತ ಮಾರಾಟ!
undefined
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋವೆಲ್ ಕೊರೋನಾಗೆ ಸಂಬಂಧಿಸಿದಂತೆ ಎನ್‌ಜಿಒಗಳೊಂದಿಗೆ ಗುರುವಾರ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯವರು ಹೊರದೇಶಗಳಿಗೆ ಹೋಗಿಬಂದಿದ್ದರೆ ತಕ್ಷಣ ಮಾಹಿತಿ ನೀಡಿ ಚಿಕಿತ್ಸೆ ಹಾಗೂ ತಪಾಸಣೆಗೆ ಸಹಕರಿಸುವ ಮೂಲಕ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕು. ನಡೆಯುತ್ತದೆ ಬಿಡಿ ಅಂತ ಬೇಜವಾಬ್ದಾರಿಯಿಂದ ನಡೆದುಕೊಂಡು ಎಲ್ಲೆಂದರಲ್ಲಿ ಸಂಚರಿಸಿದ್ದು ಕಂಡುಬಂದಲ್ಲಿ ಬೇರೆಯವರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ತಿಳಿದು ಸಾಮಾಜಿಕ ಹೊಣೆಗಾರಿಕೆ ಮರೆತು ಆ ರೀತಿ ವರ್ತಿಸಿದರೆ ಅಂಥವರ ಮೇಲೆ ಜಿಲ್ಲಾಡಳಿತ ಕ್ರಮಕೈಗೊಳ್ಳುವುದು ನಿಶ್ಚಿತ ಎಂದರು.
ಕೊರೋನಾ ವೈರಸ್‌ಗಳು ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಪಾಸಿಟಿವ್ ವರದಿಯಾಗಿಲ್ಲ. ಈ ಕೊರೋನಾ ಕುರಿತು ಭಯಬೇಡ; ಜಾಗೃತಿ ಮತ್ತು ಮುನ್ನೆಚ್ಚರಿಕೆ ಇರಬೇಕು. ಉಸಿರಾಟದ ಸಮಸ್ಯೆ ಇರುವವರಿಗೆ ಮತ್ತು 60 ವರ್ಷ ವಯಸ್ಸು ದಾಟಿದವರು ಹೈರಿಸ್ಕ್ ಇರುತ್ತದೆ ಎಂದು ಹೇಳಿದರು.
ಮದುವೆ, ಸಭೆ-ಸಮಾರಂಭಗಳು ಅತ್ಯಂತ ಕಡಿಮೆ ಜನರನ್ನು ಸೇರಿಸಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಕೊರೋನಾ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಈಗಾಗಲೇ ಕೈಗೊಂಡಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ವಿವಿಧ ಸ್ತರಗಳಲ್ಲಿ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ಎಲ್ಲ ಎನ್‌ಜಿಒಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಕೋರಿದರು.
ಸುಳ್ಳು ಸುದ್ದಿ ಹಬ್ಬಿಸಬೇಡಿ:
ಕೊರೋನಾ ವೈರಸ್‌ಗೆ ಔಷಧವಿದೆ ಎಂಬುದು ಸೇರಿದಂತೆ ನಾನಾ ಸುಳ್ಳು ಸುದ್ದಿಗಳನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹರಿಬಿಡಲಾಗುತ್ತಿದೆ. ದಯವಿಟ್ಟು ಅಂಥವುಗಳನ್ನು ಹಬ್ಬಿಸಬೇಡಿ; ಅಂಥವುಗಳು ಜಿಲ್ಲೆಯಲ್ಲಿ ಯಾರಾದರೂ ಹರಡಿದ್ದು ತಿಳಿಸಿದಲ್ಲಿ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಕೊರೋನಾ ಭೀತಿ : ದುಬೈನಿಂದ ಆಗಮಿಸುವರ ಪ್ರತ್ಯೇಕಕ್ಕೆ ವ್ಯವಸ್ಥೆ
ಕೊರೋನಾ ವೈರಸ್‌ಗೆ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್, ವಿಮ್ಸ್‌ನಲ್ಲಿ 10 ಬೆಡ್ ಮತ್ತು ಹೊಸಪೇಟೆಯಲ್ಲಿ 3 ಬೆಡ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳನ್ನು, ಮೊರಾರ್ಜಿ ವಸತಿ ಶಾಲೆಗಳನ್ನು ಗುರುತಿಸಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಎನ್‌ಜಿಒಗಳು ತಮ್ಮ ಸ್ವಯಂ ಸೇವಕರ ಪಟ್ಟಿಸಿದ್ಧಪಡಿಸಿಟ್ಟುಕೊಳ್ಳಬೇಕು; ಅಗತ್ಯಬಿದ್ದಾಗ ಸೇವೆಗೆ ಸಿದ್ಧರಿರಬೇಕು. ಕರಪತ್ರಗಳನ್ನು ಮುದ್ರಿಸಿ ವಿತರಿಸುವ ಕೆಲಸವನ್ನು ಮುಂದುವರಿಸಬೇಕು ಎಂದು ಸೂಚಿಸಿದರು.
ಕೊರೋನಾ ವೈರಸ್‌ನಿಂದ ಮೃತಪಟ್ಟಿರುವ ಹಾಗೂ ಎರಡು ಸೋಂಕಿತ ಪ್ರಕರಣಗಳು ಕಂಡುಬಂದಿರುವ ಕಲಬುರಗಿಗೆ ಬಳ್ಳಾರಿಯಿಂದ ಬಸ್ ಸೇವೆಯನ್ನು ರದ್ದುಮಾಡುವುದಕ್ಕೆ ಸಂಬಂಧಿಸಿದಂತೆ ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ನಿರ್ಧರಿಸಲಾಗುವುದು. ಬಳ್ಳಾರಿ ಜಿಲ್ಲಾಸ್ಪತ್ರೆ ಮತ್ತು ವಿಮ್ಸ್‌ನಲ್ಲಿ ಅವಶ್ಯಕ ಮತ್ತು ತುರ್ತುಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಒದಗಿಸಿಕೊಡುವುದನ್ನು ಮುಂದೂಡಿ ಸರ್ಕಾರ ಹೊರಡಿಸಿರುವ ಆದೇಶ ಕುರಿತು ಸಭೆಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿಗಳಲ್ಲೂ ಐಇಸಿ ಚಟುವಟಿಕೆ ಮುಖಾಂತರ ಕೊರೋನಾ ವೈರಸ್ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಕಡೆ ಟಾಸ್ಕ್‌ಫೋರ್ಸ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು ವೈರಸ್ ಬಗ್ಗೆ ಭಯಪಡಬೇಕಾಗಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ ಒಂದೇ ಒಂದು ಪಾಸಿಟಿವ್ ಬಂದಿಲ್ಲ. ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾತನಾಡಿದರು. ಜಿಪಂ ಸಿಇಒ ಕೆ. ನಿತೀಶ್ ಇದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀಧರ್ ಅವರು ಕೋವಿಡ್-19 ಕುರಿತು ಸಭೆಯಲ್ಲಿ ಪ್ರಸ್ತುತಪಡಿಸಿದರು.
ಡಿಎಚ್‌ಒ ಡಾ. ಜನಾರ್ದನ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎನ್‌ಜಿಒಗಳ ಪ್ರಮುಖರು, ಪ್ರತಿನಿಧಿಗಳು ಸಭೆಯಲ್ಲಿದ್ದರು.
16 ಜನರ ಪರೀಕ್ಷೆ, ಒಂದು ಗಂಟಲು ದ್ರವ ಪರೀಕ್ಷೆ
ಜಿಲ್ಲೆಯಲ್ಲಿ ಗುರುವಾರ ಒಟ್ಟು 16 ಕೊರೋನಾ ವೈರಸ್ ಶಂಕಿತರನ್ನು ಪರೀಕ್ಷೆ ಮಾಡಲಾಗಿದೆ. ಒಂದು ಪ್ರಕರಣದಲ್ಲಿ ಗಂಟಲು ದ್ರವ ಪರೀಕ್ಷೆಗೆ ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಈ ವರೆಗೆ ಒಟ್ಟು 399 ಜನರಿಗೆ ಪರೀಕ್ಷೆ ಮಾಡಲಾಗಿದೆ. ಈ ವರೆಗೆ 13 ಗಂಟಲು ದ್ರವ ಪರೀಕ್ಷೆಯನ್ನು ಮಾಡಿಸಲಾಗಿದೆ. ಈ ಪೈಕಿ 12ರಲ್ಲಿ ನೆಗೆಟಿವ್ ಬಂದಿದೆ. ಇನ್ನೊಂದು ವರದಿ ಬರಬೇಕಿದೆ. ಈ ವರೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿಲ್ಲ. 33 ಜನರನ್ನು ಮನೆಯಲ್ಲಿದ್ದು ಆರೋಗ್ಯ ನಿಗಾ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಐಸೊಲೇಷನ್ ವಾರ್ಡ್‌ನಲ್ಲಿ ಒಬ್ಬರಿದ್ದಾರೆ ಎಂದು ತಿಳಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಪದವೀಧರ ವೇದಿಕೆ ವತಿಯಿಂದ ನಗರದ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಕೆ. ಹಾಳ್ ಗೋವರ್ಧನ್ ಅವರು, ಕೊರೋನಾ ವೈರಸ್ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು. ರೋಗದ ಬಗ್ಗೆ ಮಾಹಿತಿ ಪಡೆದು, ಜಾಗೃತಿ ಇದ್ದರೆ ಸಾಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ನಿರಂತರ ಅಧ್ಯಯನದ ಮೂಲಕ ಉತ್ತಮ ಫಲಿತಾಂಶ ತರುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ನಿಲಯ ಪಾಲಕ ರುದ್ರಾಚಾರ್ಯ, ವೇದಿಕೆ ಜಿಲ್ಲಾಧ್ಯಕ್ಷ ಹಸನ್ ವಲೀ, ಉಪಾಧ್ಯಕ್ಷ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಮಧುರಾಜ್, ರಾಜಶೇಖರ್ ಮತ್ತಿತರರಿದ್ದರು.
ಪಡಿತರಕ್ಕೆ ಬಯೋಮೆಟ್ರಿಕ್ ಬೇಡ
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಜೀವಮಾಪನ (ಬಯೋಮೆಟ್ರಿಕ್) ಸಂಗ್ರಹಣೆ ಮೂಲಕ ಪಡಿತರ ವಿತರಿಸುವ ಬದಲು ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತಕ್ಷಣದಿಂದ ಪಡಿತರ ಚೀಟಿದಾರರಿಗೆ ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮುಖಾಂತರವೇ ಪಡಿತರ ನೀಡಬೇಕು. ಯಾವುದೇ ಕಾರಣಕ್ಕೂ ಮುಂದಿನ ಆದೇಶದವರೆಗೆ ಬಯೋಮೆಟ್ರಿಕ್ ಬಳಕೆ ಮಾಡಬಾರದು. ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿದಾರರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆ ಮೂಲಕ ಸೂಚನೆ ನೀಡಿದ್ದಾರೆ.
ಮುಖಗವಸು, ಕೈ ನಿರ್ಮಲೀಕಾರಕಗಳ (ಸ್ಯಾನಿಟೈಜರ್) ದಾಸ್ತಾನು ಹಾಗೂ ಸರಬರಾಜು ಕುರಿತಂತೆ ಆಹಾರ, ಔಷಧ, ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳ ಜಂಟಿ ಪರಿಶೀಲನಾ ತಂಡ ನಗರದ ವಿವಿಧೆಡೆ ಗುರುವಾರ ಪರಿಶೀಲನೆ ನಡೆಸಿತು. ಮಾಸ್ಕ್ ಹಾಗೂ ಸ್ಯಾನಿಟೈಜರ್ ಔಷಧ ಅಂಗಡಿಗಳಲ್ಲಿ ಸಿಗುತ್ತಿಲ್ಲ. ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಡಾ. ರಾಮೇಶ್ವರಪ್ಪ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಗಟು ವ್ಯಾಪಾರಿಗಳು ಎಂದಿನಂತೆ ಪೂರೈಕೆ ಮಾಡಬೇಕು. ಬೇಡಿಕೆ ಹೆಚ್ಚಾದಲ್ಲಿ ನಿಗದಿತ ಕಂಪನಿಗಳ ಜತೆ ಮಾತನಾಡಿ, ಅಗತ್ಯ ಬೇಡಿಕೆಯಷ್ಟು ತರಿಸಿಕೊಳ್ಳಬೇಕು. ಯಾವುದೇ ಕಾರಣಗಳನ್ನು ಹೇಳುವಂತಿಲ್ಲ ಎಂದು ಸಗಟು ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕೊರೋನಾ ವೈರಸ್ ನಿಯಂತ್ರಿಸುವ ಜವಾಬ್ದಾರಿಯಲ್ಲಿ ಔಷಧಿ ಅಂಗಡಿಗಳ ಪಾತ್ರವೂ ಇದೆ. ನೀವು ಸಹ ಕೈ ಜೋಡಿಸಬೇಕಾಗುತ್ತದೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ದುಬಾರಿ ಬೆಲೆಗೆ ಮಾರಾಟ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.