ಕೊರೋನಾ ಭೀತಿ: 'ವಿದೇಶಿ ಪ್ರವಾಸಿಗರ ಮಾಹಿತಿ ತತ್‌ಕ್ಷಣ ನೀಡಿ'

By Kannadaprabha News  |  First Published Mar 7, 2020, 8:24 AM IST

ಕೊರೋನಾ ಮುಂಜಾಗ್ರತೆ ಹಿನ್ನೆಲೆ; ಹೋಟೆಲ್‌ ಮಾಲೀಕರ ಸಭೆ| ವಿಶೇಷವಾಗಿ ಕೊರೋನಾ ಸೊಂಕು ಕಂಡುಬಂದ ದೇಶಗಳಿಂದ ಬಂದ ಪ್ರವಾಸಿಗರ ಮಾಹಿತಿ ತತ್‌ಕ್ಷಣ ನೀಡಲೇಬೇಕು| ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ: ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌| 


ಬಳ್ಳಾರಿ(ಮಾ.07): ಹೋಟೆಲ್‌ಗಳಿಗೆ ಆಗಮಿಸುವ ದೇಶ ಮತ್ತು ವಿದೇಶಗಳ ಪ್ರವಾಸಿಗರ ಮಾಹಿತಿಯನ್ನು ತತ್‌ಕ್ಷಣ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಹೋಟೆಲ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಹೋಟೆಲ್‌ ಮಾಲೀಕರೊಂದಿಗೆ ಸಭೆ ನಡೆಸಿದ ಅವರು ಮುಂಜಾಗ್ರತೆ ಕ್ರಮಕ್ಕಾಗಿ ಪ್ರವಾಸಿಗರ ವಿವರ ಒದಗಿಸಬೇಕು ಎಂದು ಹೇಳಿದರು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಮತ್ತು ಅದರಲ್ಲೂ ವಿಶೇಷವಾಗಿ ಕೊರೋನಾ ಸೊಂಕು ಕಂಡುಬಂದ ದೇಶಗಳಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ತತ್‌ಕ್ಷಣ ನೀಡಲೇಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನ ಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಈ ಕೇಂದ್ರದ ರೂಂ ಮೊ.ನಂ.: 8277888866 ಹಾಗೂ ದೂ.: 08392-277100ಗೆ ಕರೆ ಮಾಡಬಹುದು ಮತ್ತು ವಾಟ್‌ಆ್ಯಪ್‌ ಮಾಡಬಹುದು. 1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ. ನಿರಂತರವಾಗಿ 24 ಗಂಟೆಗಳ ಕಾಲ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು. ಕೊರೋನಾ ವೈರಸ್‌ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಜಿಲ್ಲಾಧಿಕಾರಿ ನಕುಲ್‌ ಅವರು, ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡುಬಂದಲ್ಲಿಯೂ ಮಾಹಿತಿ ನೀಡಿ; ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ; ಜಾಗೃತಿಯಿರಲಿ ಎಂದರು.
ಕೊರೋನಾ ವೈರಸ್‌ ಮತ್ತು ಅದರ ಲಕ್ಷಣಗಳ ಕುರಿತು ಕರಪತ್ರಗಳು ವಿತರಿಸಬೇಕು ಹಾಗೂ ಬೃಹತ್‌ ಫಲಕಗಳನ್ನು ಹೋಟೆಲ್‌ಗಳಲ್ಲಿ ಅಳವಡಿಸಬೇಕು. ಸಾರ್ವಜನಿಕರಲ್ಲಿ ವೈರಸ್‌ ಬಗ್ಗೆ ಭೀತಿ ಹುಟ್ಟದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೋಟೆಲ್‌ ಮಾಲೀಕರು ಸಹ ಕೈ ಜೋಡಿಸಬೇಕು ಎಂದು ಅವರು ಸೂಚಿಸಿದರು.

ಕೊರೋನಾ ವೈರಸ್‌ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದ್ದು, ಈ ವರೆಗೆ ಯಾವುದೇ ರೀತಿಯ ಪ್ರಕರಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ನಕುಲ್‌ ಅವರು ಸಭೆಗೆ ವಿವರಿಸಿದರು.

ಬಳ್ಳಾರಿ ಜಿಲ್ಲೆಯ ಜಿಲ್ಲಾಸ್ಪತ್ರೆ, ವಿಮ್ಸ್‌ ಮತ್ತು ಹೊಸಪೇಟೆಯ ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಕರೋನಂಟೈನ್‌ ವಾರ್ಡ್‌ಳನ್ನು ತೆರೆಯಲಾಗಿದೆ. 10 ಹಾಸಿಗೆಗಳ ವ್ಯವಸ್ಥೆ, ಕೊರೋನಾ ವೈರಸ್‌ ಪತ್ತೆ, ಚಿಕಿತ್ಸೆ, ಮಾಸ್ಕ್‌ ಮತ್ತು ಔಷಧಿಗಳು ಸೇರಿದಂತೆ ಕೊರೋನಾ ವೈರಸ್‌ ಸಂಬಂಧಿಸಿದ ಕಿಟ್‌ಗಳ ವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ನಮ್ಮಲ್ಲಿ ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌. ಜನಾರ್ದನ ಅವರು ಕರೋನಾ ವೈರಸ್‌ ಲಕ್ಷಣಗಳ ಬಗ್ಗೆ ಹಾಗೂ ಇದುವರೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್‌ ಲಮಾಣಿ, ಜಿಲ್ಲಾಸ್ಪತ್ರೆಯ ಸರ್ಜನ್‌ ಎನ್‌. ಬಸರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ರಾಜಶೇಖರ, ಡಾ. ವಿಜಯಲಕ್ಷ್ಮೀ, ಡಾ. ಇಂದ್ರಾಣಿ ಹಾಗೂ ಖಾಸಗಿ ಹೋಟೆಲ್‌ ಮಾಲೀಕರು ಇದ್ದರು.
 

click me!