ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಅ.2): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಕೆಲಸಕ್ಕೆ ಇಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲೆ ಹಾಗೂ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣದಲ್ಲಿ ಅರಣ್ಯ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರವಾಸಿಗರು, ಸ್ಥಳೀಯರು ಬೀದಿಗಿಳಿದ ಹೋರಾಟ ನಡೆಸಿದ್ದಾರೆ.
ಚುಮು-ಚುಮು ಚಳಿಯಲ್ಲಿ ಟ್ರಿಪ್: ಧರೆಗಿಳಿದ ಸ್ವರ್ಗದಂತಿವೆ ಈ ಸುಂದರ ತಾಣಗಳು!
ಮೂಡಿಗೆರೆ(Mudigere) ತಾಲೂಕಿನ ಬಲ್ಲಾಳರಾಯನದುರ್ಗ(Ballalarayanadurga)ದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯ ನೋಡೋ ಕಣ್ಣುಗಳಿಗೆ ಹೊಸದೊಂದು ಪ್ರಪಂಚವನ್ನೇ ಉಣಬಡಿಸುವಂತಿದೆ. ಕಣ್ಣಿನ ದೃಷ್ಟಿ ಹಾಯ್ದಷ್ಟು ಹಚ್ಚುಹಸಿರಿನ ಬೆಟ್ಟ-ಗುಡ್ಡಗಳ ಸಾಲಿಗೆ ಕೊನೆ ಇಲ್ಲ. ತಣ್ಣನೆಯ ಗಾಳಿ, ಚುಮುಚುಮು ಚಳಿ, ಪ್ರಕೃತಿ ಹಾಗೂ ಪ್ರವಾಸಿಗರ ಜೊತೆ ಮೋಡಗಳ ಕಣ್ಣಾಮುಚ್ಚಾಲೆ ಆಟ. ಇದೆಲ್ಲಾ ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸುತ್ತದೆ.
ವರ್ಷದ 365 ದಿನವೂ ಸಾವಿರಾರು ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನ ಸವಿಯಲು ದೂರದೂರಿನಿಂದ ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸೌಂದರ್ಯಕ್ಕೆ ಫಿದಾ ಆಗಿ ಹೋಗುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಿಂಚಿತ್ತು ಮೂಲಭೂತ ಸೌಕರ್ಯ ಇಲ್ಲ ಅನ್ನೋದು ನಂಬಲಾಗದ ಸತ್ಯ.
ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಈ ಸೌಂದರ್ಯ ರಾಶಿಯನ್ನ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಂದ ಕಳೆದ 4 ವರ್ಷಗಳಿಂದ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ(Depertment of Forestry and Tourism) ತಲಾ 305 ರೂಪಾಯಿ ಸಂಗ್ರಹ ಮಾಡುತ್ತಿದೆ. ಪ್ರತಿ ತಿಂಗಳು 2ರಿಂದ 3 ಲಕ್ಷ ರೂ. ಆದಾಯ. ಆದರೆ, ಒಂದು ಪ್ರವಾಸಿಗರಿಗೆ ಒಂದೂ ಶೌಚಾಲಯವಿಲ್ಲ. ವಿಶ್ರಾಂತಿ ಗೃಹವೂ ಇಲ್ಲ. ದಿನನಿತ್ಯ ನೂರಾರು ಗಾಡಿಗಳು ಓಡಾಡೋ ಹಳ್ಳಿಯಲ್ಲಿ ನಡೆದಾಡುವ ಸ್ಥಿತಿಯೂ ಇಲ್ಲ. ಹಾಗಾದರೆ, ಬಂದ ಹಣ ಎಲ್ಲಿ ಹೋಯಿತು ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ಈ ಬಗ್ಗೆ ಕಳೆದ ಎರಡು ವರ್ಷದಿಂದ ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಸುಲಿಗೆಗೆ ಇಳಿದಿದೆ ಎಂದು ಆರೋಪಿಸಿ ಸ್ಥಳೀಯರು ಇಲಾಖೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಯಾರೂ ಗುಡ್ಡಕ್ಕೆ ಹೋಗದಂತೆ ರಸ್ತೆಗೆ ಹಗ್ಗ ಕಟ್ಟಿ ಪ್ರತಿಭಟಿಸಿದ್ದಾರೆ.
ಗ್ರಾಮ ಅರಣ್ಯ ಸಮಿತಿಗೆ ಸ್ಥಳಿಯರ ಮನವಿ :
ಸರ್ಕಾರ ಕಳೆದ ಮೂರು ವರ್ಷಗಳಿಂದಲೂ Eco Tourism ಹೆಸರಲ್ಲಿ ಪ್ರವಾಸಿಗರಿಗೆ ಶುಲ್ಕ ವಿಧಿಸುತ್ತಿದೆ. ಆದರೆ, ಆ ಹಣ ಸರ್ಕಾರದ ಖಜಾನೆ ಸೇರುತ್ತಿದೆಯೋ ಅಥವಾ ಬೇರೆಲ್ಲಿಗೆ ಹೋಗುತ್ತಿದೆಯೋ ಗೊತ್ತಿಲ್ಲ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವಂತೂ ಸಿಗುತ್ತಿಲ್ಲ. ಗ್ರಾಮಸ್ಥರು ಕೂಡ ಕಳೆದ ಮೂರು ವರ್ಷಗಳಿಂದಲೂ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಯಡಿ ಗ್ರಾಮ ಅರಣ್ಯ ಸಮಿತಿಯ ಮೂಲಕ ಶುಲ್ಕ ವಿಧಿಸಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಬಲ್ಲಾಳರಾಯನ ದುರ್ಗದ ಕೆಳಭಾಗದಲ್ಲಿ ಸದ್ದು: ಅರಣ್ಯ ಇಲಾಖೆಯಿಂದ ಪರಿಶೀಲನೆ
ಅರಣ್ಯ ಇಲಾಖೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾರಣ ಸ್ಥಳಿಯರೇ ಸರ್ಕಾರದ ವಿರುದ್ಧ ಬೀದಿಗಿಳಿದು ಅಸಮಾಧಾನ ಹೊರಹಾಕಿದ್ದಾರೆ. ಹಣ ನೀಡಿ ಬರುವ ಪ್ರವಾಸಿಗರಿಗೆ ಕನಿಷ್ಟ ಮೂಲಭೂತ ವ್ಯವಸ್ಥೆಯನ್ನೂ ಮಾಡದಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳು ತಕ್ಷಣ ಹಣ ವಸೂಲಿ ಮಾಡುವುದನ್ನ ನಿಲ್ಲಿಸಬೇಕು. ಈವರೆಗೆ ಪಡೆದಿರೋ ಹಣದ ದಾಖಲೆ ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ. ಇನ್ನುಮುಂದೆ ಗ್ರಾಮ ಅರಣ್ಯ ಸಮಿತಿ ರಚಿಸಿ, ಸಮಿತಿಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಪ್ರವಾಸಿಗರಿಂದ 300 ರೂಪಾಯಿ ವಸೂಲಿ ಮಾಡುವಂತಿಲ್ಲ. 50 ರೂಪಾಯಿ ಟಿಕೆಟ್ ಮಾಡಿ ಅದಕ್ಕೆ ತಕ್ಕಂತೆ ಶೌಚಾಲಯ, ವಿಶ್ರಾಂತಿ ಗೃಹ.. ಮೂಲಭೂತ ಸೌಲಭ್ಯದ ಜೊತೆ ಪ್ರವಾಸಿಗರಿಗೆ ಗೈಡ್‍ಗಳನ್ನ ಕೊಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.