ಕೊಡಗು: ‘ಇಂಥ ಜಲಸ್ಫೋಟ ಕಂಡಿಲ್ಲ, ಕೇಳಿಲ್ಲ..!’

By Kannadaprabha NewsFirst Published Aug 5, 2022, 6:00 AM IST
Highlights

10ಕ್ಕೂ ಹೆಚ್ಚು ಭೂಕಂಪನವಾದ ಕೊಡಗಿನ ದಬ್ಬಡ್ಕಕ್ಕೀಗ ಭೂಕುಸಿತ ಕಂಟಕ

ಮಡಿಕೇರಿ(ಆ.05): ‘ನಾವು ಇಲ್ಲಿ ಹುಟ್ಟಿ, ಬೆಳೆದು ಇಷ್ಟು ವರ್ಷವಾದರೂ ಇಂಥ ಅನುಭವ ಯಾವತ್ತೂ ಆಗಿಲ್ಲ. ಸ್ಫೋಟದ ಸದ್ದಿನೊಂದಿಗೆ ಪ್ರವಾಹದ ರೀತಿಯಲ್ಲಿ ಬೆಟ್ಟದಿಂದ ಕೆಸರು ನೀರು ಹರಿದು ಬರುವ ಇಂಥ ಕಂಡು ಕೇಳರಿಯದ ವಿದ್ಯಮಾನ ನಾವು ಈವರೆಗೆ ನೋಡೇ ಇಲ್ಲ. ವಿಚಿತ್ರವಾದ ಈ ಬೆಳವಣಿಗೆ ಕಾರಣ ಏನು? ಈ ರೀತಿ ನೀರು ಎಲ್ಲಿಂದ ಬರುತ್ತಿದೆ? ಆ ರೀತಿ ಸದ್ದು ಯಾಕಾಗುತ್ತಿದೆ ಎಂಬುದನ್ನು ವಿಜ್ಞಾನಿಗಳೇ ಹೇಳಬೇಕು’ - ಇದು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲೆಯ ಚೆಂಬು ಗ್ರಾಮದ ಸಮೀಪದ ದಬ್ಬಡ್ಕದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರಾಗಿರುವ ಬಾಲಕೃಷ್ಣ ಮತ್ತು ದೇವಕಿ ದಂಪತಿಯ ಅಳಲು.

ಜೂನ್‌ ಅಂತ್ಯದ ವೇಳೆ 10ಕ್ಕೂ ಹೆಚ್ಚು ಭೂಕಂಪಕ್ಕೆ ಸಾಕ್ಷಿಯಾದ ಚಂಬು ವ್ಯಾಪ್ತಿಯಲ್ಲೇ ಬರುವ ಈ ಪ್ರದೇಶದಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಇಡೀ ಊರಿಗೆ ಊರೇ ಬೆಚ್ಚಿದೆ. ಈ ಬಗ್ಗೆ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಬಾಲಕೃಷ್ಣ ಮತ್ತು ದೇವಕಿ ದಂಪತಿ, ‘ಈ ಬೆಳವಣಿಗೆ ಕುರಿತು ನಮ್ಮ ಊರಿನ ಹಿರಿಯರನ್ನು ವಿಚಾರಿಸಿದೆವು. ಅವರಿಗೂ ಇಂಥ ಅನುಭವ ಯಾವತ್ತೂ ಆಗಿಲ್ಲವಂತೆ’ ಎಂದರು.

Kodagu Floods: ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟೆಗೆ ಮರದ ದಿಮ್ಮಿಗಳು ಸಿಲುಕಿ ಪ್ರವಾಹ

‘ನಾವು ಬುಧವಾರ ರಾತ್ರಿ ಮನೆಯಲ್ಲಿ ಮಲಗಿದ್ದೆವು. ಮಧ್ಯರಾತ್ರಿ 12 ಗಂಟೆ ವೇಳೆಗೆ ಭಾರೀ ಮಳೆಯೊಂದಿಗೆ ಬೆಟ್ಟದ ಕಡೆಯಿಂದ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿಬಂತು. ಏನೋ ಅನಾಹುತ ಸಂಭವಿಸಬಹುದೆಂದು ಹೆದರಿ ಮನೆಯಿಂದ ಹೊರಗೋಡಿ ಬಂದೆವು. ನಮ್ಮ ಮನೆಯ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ಕುಳಿತುಕೊಂಡು ರಾತ್ರಿ ಕಳೆದೆವು.’ ಎಂದು ತಮ್ಮ ಅನುಭವ ಹಂಚಿಕೊಂಡರು.

ಸಾಕಷ್ಟು ನಷ್ಟವಾಗಿದೆ: ‘

ಪ್ರವಾಹದ ರೀತಿ ನೀರು ಬಂದಾಗ ಮಧ್ಯರಾತ್ರಿ ಆಗಿದ್ದ ಕಾರಣ ಕತ್ತಲೆಯಲ್ಲಿ ಏನಾಗಿದೆ ಎಂದು ಗೊತ್ತಾಗಲಿಲ್ಲ. ಬೆಳಗ್ಗೆ ಮನೆಗೆ ಹೋಗಿ ನೋಡುವಾಗ ಮನೆಯಲ್ಲಿದ್ದ ವಸ್ತು ನೀರಿನಿಂದ ಸಂಪೂರ್ಣ ಹಾಳಾಗಿತ್ತು. ಸೌದೆ ಕೊಟ್ಟಿಗೆ, ದನದ ಕೊಟ್ಟಿಗೆ ಚೆಲ್ಲಾಪಿಲ್ಲಿಯಾಗಿತ್ತು. ಭಾರೀ ಪ್ರಮಾಣದ ಕೆಸರು ಮಿಶ್ರಿತ ನೀರು ಗುಡ್ಡದಿಂದ ಹರಿದು ಬಂದಿದೆ. ನಮಗೆ ಸಾಕಷ್ಟುನಷ್ಟವಾಗಿದೆ. ಇದೀಗ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ’ ಎಂದು ಬಾಲಕೃಷ್ಣ ಹಾಗೂ ಅವರ ಪತ್ನಿ ದೇವಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗುಡ್ಡ ಕುಸಿತ ವೇಳೆ ಶಬ್ದ ಸಾಮಾನ್ಯ

2018ರಲ್ಲಿ ಸಂಭವಿಸಿದ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಈಗ ಮತ್ತೆ ಮಳೆಯಿಂದ ಹಾನಿಯಾಗುತ್ತಿದೆ. ಈ ಬಗ್ಗೆ ಜಿಯೋಲಾಜಿಕಲ… ಸರ್ವೇ ಆಫ್‌ ಇಂಡಿಯಾ ಅಂದೇ ತಿಳಿಸಿದೆ. ಬರೆ ಕುಸಿತ ಹಾಗೂ ಗುಡ್ಡ ಕುಸಿತ ಆದಾಗ ಜೋರಾಗಿ ಶಬ್ದ ಬರುವುದು ಸಾಮಾನ್ಯ. ಮದೆನಾಡು, ಚೆಂಬು, ಗಾಳಿಬೀಡು ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತ ಆಗುವುದು ಸಾಮಾನ್ಯ ಅಂತ  ಕೊಡಗು ಜಿಲ್ಲಾ ವಿಪತ್ತು ನಿಯಂತ್ರಣಾಧಿಕಾರಿ ಅನನ್ಯ ವಾಸುದೇವ್‌ ಹೇಳಿದ್ದಾರೆ. 

ಸಮಗ್ರ ಅಧ್ಯಯನ ಅಗತ್ಯ

ಕೊಡಗಿನ ಚೆಂಬು ಗ್ರಾಮದಲ್ಲಿ ಪದೇ ಪದೇ ಮಳೆಯಿಂದ ಅಪಾರ ಹಾನಿ ಸಂಭವಿಸುತ್ತಿದೆ. ಆದರೆ ಸರ್ಕಾರ ಅಧ್ಯಯನ ಮಾಡಬೇಕಿತ್ತು. ಆದರೆ ಸರ್ಕಾರ ಕೊಡಗನ್ನು ನಿರ್ಲಕ್ಷ್ಯ ಮಾಡಿದೆ. ಚೆಂಬು ಗ್ರಾಮದಲ್ಲಿ ಹಲವು ಬಾರಿ ಸಣ್ಣ ಪ್ರಮಾಣದಲ್ಲಿ ಭೂಕಂಪನವಾಗಿದೆ. ಈ ಭಾಗದಲ್ಲಿ ಮಳೆಯ ಪ್ರವಾಣವೂ ಹೆಚ್ಚಾಗಿದ್ದು, ಅಪಾರ ಹಾನಿಯಾಗಿದೆ. ಇಲ್ಲಿನ ನಿವಾಸಿಗಳು ಭಯದಿಂದಲೇ ದಿನ ದೂಡಬೇಕಿದೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ನಡೆಸಬೇಕು ಅಂತ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್‌ ಪೆಮ್ಮಯ್ಯ ತಿಳಿಸಿದ್ದಾರೆ. 

ಮಡಿಕೇರಿಯ ಬೆಟ್ಟದಲ್ಲಿ ಭಾರೀ ಒರತೆ: ಗುಡ್ಡ ಜರಿದು ಅನಾಹುತ

ಮುಂದುವರಿದ ಮಳೆ ಅಬ್ಬರ: ಮತ್ತೆ 6 ಬಲಿ

ಕಲ್ಯಾಣ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆ ಮುಂದುವರಿದಿದೆ. ತುಮಕೂರು ಜಿಲ್ಲೆಯ ನಾಲ್ವರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 6 ಮಂದಿ ಮಳೆ ಸಂಬಂಧಿ ದುರಂತಕ್ಕೆ ಬಲಿಯಾಗಿದ್ದಾರೆ. ಅನೇಕ ಕಡೆ ಮನೆಗಳು ಜಲಾವೃತವಾಗಿದ್ದು, ಕಲಬುರಗಿ ನಗರವೊಂದರಲ್ಲೇ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮನೆಹಾನಿ ಪರಿಹಾರಕ್ಕೆ 300 ಕೋಟಿ ಬಿಡುಗಡೆ

ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ರಾಜ್ಯ ಸರ್ಕಾರವು 300 ಕೋಟಿ ರು. ಬಿಡುಗಡೆ ಮಾಡಿದ್ದು, ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತ ಮೂಲಕ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ ಸೂಚನೆ ನೀಡಿದೆ.
 

click me!