ಟಿಪ್ಪರ್ ಲಾರಿ ಹರಿದು ಒಂದೇ ಕುಟುಂಬದ ಐವರ ಸಾವು: ಬೆಳಗ್ಗೆ ಹೊಲಕ್ಕೆ ಹೋದವರು, ಸಂಜೆ ಶವವಾಗಿ ಮನೆಗೆ ಬಂದರು

By Sathish Kumar KH  |  First Published Apr 14, 2024, 9:54 PM IST

ಬೆಳಗ್ಗೆ ಜಮೀನಿನ ಕೆಲಸಕ್ಕೆಂದು ಹೋದ ಒಂದೇ ಕುಟುಂಬದ ಐದು ಜನರು ಸಂಜೆ ಮನೆಗೆ ವಾಪಸ್ ಬರುವಾಗ ಟಿಪ್ಪರ್ ಲಾರಿ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಬಾಗಲಕೋಟೆ (ಏ.14): ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಪಾದಾಚಾರಿಗಳ ಉರುಳಿ ಬಿದ್ದಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಈ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ನಡೆದಿದೆ. ಬೆಳಗ್ಗೆ ಕೃಷಿ ಕೆಲಸಕ್ಕೆ ಹೊಲಕ್ಕೆ ಹೋಗಿದ್ದ ಒಂದು ಕುಟುಂಬದ ಸದಸ್ಯರು ಸಂಜೆ ವೇಳೆ ಮನೆಗೆ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಮಣ್ಣಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯ ಟೈರ್ ಬ್ಲಾಸ್ಟ್‌ ಆಗಿದೆ. ಟೈರ್ ಸ್ಪೋಟದ ನಂತರ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳ ಮೇಲೆ ಬಿದ್ದಿದೆ. ಈ ವೇಳೆ ಪಾದಚಾರಿಗಳು ಎಚ್ಚೆತ್ತುಕೊಳ್ಳುವ ಮುನ್ನವೇ ಐವರ ಮೇಲೆ ಬಿದ್ದು, ಮಣ್ಣು ಹಾಗೂ ಲಾರಿಯ ಅಡಿಯಲ್ಲಿ ಸಿಲುಕಿದ್ದಾರೆ.

Latest Videos

undefined

ಜಮೀನು ವ್ಯಾಜ್ಯ: ಮಹಿಳೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ!

ಘಟನೆಯಲ್ಲಿ ಸಂಪೂರ್ಣವಾಗಿ ಲಾರಿಯ ಅಡಿಯಲ್ಲಿ ಸಿಲುಕಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ಕೂಡಲೇ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕುಟುಂಬದವರ ಎದುರಿಗೆ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಒಟ್ಟಾರೆ ಒಂದೇ ಕುಟುಂಬದ ಐವರು ಹೊಲಕ್ಕೆ ಹೋಗಿ ಇನ್ನೇನು ಕೆಲವು ನಿಮಿಷಗಳಲ್ಲಿ ಮನೆಗೆ ಸೇರುವವರು ಮಸಣ ಸೇರುವಂತಾಗಿದೆ.

ಹೊನ್ಯಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಘಟನೆ ಸಂಭವಿಸಿದ್ದು, ಲಾರಿಯ ಚಾಲಕ ಅಲ್ಲಿಂದ ಪರಾರಿ ಆಗಿದ್ದಾರೆ. ಘಟನೆಯ ಬೆನ್ನಲ್ಲಿಯೇ ಬೀಳಗಿ ಪೊಲೀಸರ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಮಣ್ಣಿನದಿ ಸಿಲುಕಿದ್ದ ಮೃತ ದೇಹಗಳನ್ನು ತೆರವುಗೊಳಿಸಿದ್ದಾರೆ. ಜೊತೆಗೆ, ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್‌ ಜಾಮ್ ತೆರವುಗೊಳಿಸಿ ಇತರೆ ವಾಹನಗಳಿಗೆ ಸಮಸ್ಯೆ ಆಗದಂತೆ ಕ್ರಮವಹಿಸಿದ್ದಾರೆ.

ರಾಯಚೂರಲ್ಲಿ ಸುರಿದ ಅಕಾಲಿಕ ಮಳೆ; ಸಿಡಿಲು ಬಡಿದು ಯುವಕ ಸಾವು

ಒಂದೇ ಕುಟುಂಬದ ಐವರ ದುರ್ಮರಣ: ಇನ್ನು ಮೃತರನ್ನು ಬಾದರದಿನ್ನಿ ಗ್ರಾಮದವರು ಎಂದು ಗುರುತಿಸಲಾಗಿದೆ. ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಂಕಪ್ಪನ ಪತ್ನಿ ಯಲ್ಲವ್ವ ತೋಳಮಟ್ಟಿ (60), ಯಂಕಪ್ಪನ ಮಗ ಪುಂಡಲೀಕ ತೋಳಮಟ್ಟಿ (35), ಯಂಕಪ್ಪನ ಮಗಳು ನಾಗವ್ವ ಅಶೋಕ ಬಮ್ಮಣ್ಣನವರ (45) ಹಾಗೂ ಯಂಕಪ್ಪನ ಮಗಳ ಗಂಡ ಅಶೋಕ ನಿಂಗಪ್ಪ ಬಮ್ಮಣ್ಣನವರ (50) ಮೃತರು ಎಂದು ಗುರುತಿಸಲಾಗಿದೆ. ಮಣ್ಣುನ ಅಡಿ ಸಿಲುಕಿದ್ದ ಮೃತ ದೇಹಗಳನ್ನು ತೆಗೆದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

click me!