Bagalakote: ತರಗತಿಯಲ್ಲೇ ಕುಸಿದುಬಿದ್ದ ಶಾಲಾ ಮೇಲ್ಛಾವಣಿ; ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಗಳು ಪಾರು!

Published : Sep 02, 2026, 08:26 PM IST
Bagalakote!

ಸಾರಾಂಶ

ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ, ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.

ಬಾಗಲಕೋಟೆ; ಅದು ದಿನಂಪ್ರತಿ ನಡೆಯುವಂತೆಯೇ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ ಸಮಯ. ಕೈಯಲ್ಲಿ ಪುಸ್ತಕ, ಮನದಲ್ಲಿ ಹೊಸ ಭವಿಷ್ಯದ ಕನಸುಗಳನ್ನು ಇಟ್ಟುಕೊಂಡು ಕುಳಿತಿದ್ದ ವಿದ್ಯಾರ್ಥಿಗಳಿಗೆ ಕಾದಿತ್ತು ಕರಾಳ ಆಘಾತ. ಶಿಕ್ಷಕರು ಪಾಠ ಮಾಡುತ್ತಿದ್ದಂತೆಯೇ, ಹಠಾತ್ತಾಗಿ ತರಗತಿಯ ಮೇಲ್ಛಾವಣಿಯ ಕಾಂಕ್ರೀಟ್ ಚಕ್ಕೆಗಳು ವಿದ್ಯಾರ್ಥಿಗಳ ಮೇಲೆ ಉದುರಿ ಬಿದ್ದ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದ್ದು, ನಾಲ್ಕು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ!

ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ವಾಡಿಕೆಯಂತೆ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ಬೆಂಚ್‌ಗಳ ಮೇಲೆ ಕುಳಿತು ಶಿಕ್ಷಕರ ಪಾಠ ಆಲಿಸುತ್ತಿದ್ದ ವೇಳೆ, ಜರ್ಜರಿತಗೊಂಡಿದ್ದ ಮೇಲ್ಛಾವಣಿಯ ಕಾಂಕ್ರೀಟ್ ಹಠಾತ್ತಾಗಿ ಕಚಿತ್ ಆಗಿ ಬೆಂಚ್ ಹಾಗೂ ವಿದ್ಯಾರ್ಥಿಗಳ ಮೇಲೆಯೇ ಬಿದ್ದಿದೆ. ಕಾಂಕ್ರೀಟ್ ಚೂರುಗಳು ತಾಗಿದ ಪರಿಣಾಮ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತರಗತಿಯಲ್ಲಿದ್ದ ಮಕ್ಕಳು ಮತ್ತು ಶಿಕ್ಷಕರು ಕ್ಷಣಕಾಲ ಬೆಚ್ಚಿಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಗಾಯಗೊಂಡ ಮಕ್ಕಳಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಿಥಿಲಾವಸ್ಥೆಯಲ್ಲಿ ಕಟ್ಟಡ; ಕಬ್ಬಿಣದ ಸರಳುಗಳ ದರ್ಶನ!

ಈ ಘಟನೆ ಶಾಲೆ ಯ ಕಟ್ಟಡದ ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ. ಶಾಲೆಯ ಕೊಠಡಿಗಳು ತೀವ್ರ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿಯ ಪ್ಲ್ಯಾಸ್ಟರಿಂಗ್ ಕಿತ್ತುಹೋಗಿ ಒಳಗಿನ ಕಬ್ಬಿಣದ ಸರಳುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಮಳೆಗಾಲದಲ್ಲಿ ನೀರು ಸೋರುವುದು, ಕಾಂಕ್ರೀಟ್ ಹಸುರಾಗಿ ಉದುರುವುದು ಇಲ್ಲಿ ನಿತ್ಯದ ಕಥೆಯಾಗಿತ್ತು. "ಇದು ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳಬಹುದು" ಎಂದು ತಿಳಿದಿದ್ದರೂ, ಬೇರೆ ದಾರಿಯಿಲ್ಲದೆ ಮಕ್ಕಳು ಇದೇ ಭಯಾನಕ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿತ್ತು.

ಅಧಿಕಾರಿಗಳ ನಿರ್ಲಕ್ಷ್ಯ; ಪೋಷಕರ ಆಕ್ರೋಶ!

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಲೆಯತ್ತ ಧಾವಿಸಿ ಬಂದ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಅಥವಾ ಹೊಸ ಕೊಠಡಿ ನಿರ್ಮಾಣಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಟಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. "ಇಂದು ನಮ್ಮ ಮಕ್ಕಳು ಅದೃಷ್ಟವಶಾತ್ ಬದುಕಿ ಬಂದಿದ್ದಾರೆ. ನಾಳೆ ಪ್ರಾಣಕ್ಕೇ ಕಂಟಕ ಬಂದರೆ ಯಾರು ಹೊಣೆ?" ಎಂದು ಆಕ್ರೋಶಗೊಂಡ ಪೋಷಕರು ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

ಹೆಂಡತಿ ಕಣ್ಣೆದುರೇ ನರಳಿ ನರಳಿ ಪ್ರಾಣಬಿಟ್ಟ ನವ ವಿವಾಹಿತ - ಬಿಎಂಟಿಸಿಗೆ ಮತ್ತೊಂದು ಬಲಿ
ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಹೃದಯಾಘಾತಕ್ಕೆ 9ನೇ ತರಗತಿ ಬಾಲಕ ಬಲಿ