ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಹೃದಯಾಘಾತಕ್ಕೆ 9ನೇ ತರಗತಿ ಬಾಲಕ ಬಲಿ

Published : Sep 02, 2026, 07:13 PM IST
mandya heart attack

ಸಾರಾಂಶ

ಬಿಸಿಯೂಟ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ 9ನೇ ತರಗತಿ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಇಂದು ಸಂಭವಿಸಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯನ್ನೇ ಕಣ್ಣೀರಲ್ಲಿ ಮುಳುಗಿಸಿದೆ. ಆಟವಾಡಿ ಕಲಿಯಬೇಕಿದ್ದ 14 ವರ್ಷದ ಬಾಲಕನೊಬ್ಬ ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಬೆಳಿಗ್ಗೆ ನಗುನಗುತ್ತಾ ಶಾಲೆಗೆ ಹೋದ ಮಗ ಸಂಜೆಯ ವೇಳೆಗೆ ಶವವಾಗಿ ಮನೆಗೆ ಮರಳಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಿಸಿಯೂಟ ಮಾಡುವಾಗಲೇ ದುರಂತ

ಸೋಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವೀರಮಣಿ (14) ಮೃತಪಟ್ಟ ದುರ್ದೈವಿ. ಎಂದಿನಂತೆ ಶಾಲೆಗೆ ಹೋಗಿದ್ದ ವೀರಮಣಿ ಮಧ್ಯಾಹ್ನದ ವಿರಾಮದ ವೇಳೆ ಶಾಲೆಯಲ್ಲಿ ನೀಡುವ ಬಿಸಿಯೂಟವನ್ನು ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಹಠಾತ್ತನೆ ಆತನಿಗೆ ಮೂರ್ಛೆ ಬಂದಿದ್ದು, ಕುಳಿತಲ್ಲೇ ಕುಸಿದು ಬಿದ್ದಿದ್ದಾನೆ.

ತಕ್ಷಣವೇ ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಬಾಲಕನನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ರವಾನಿಸಲಾಯಿತು. ದುರಾದೃಷ್ಟವಶಾತ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ವೀರಮಣಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ವೈದ್ಯರು ಹೇಳಿದ್ದೇನು?

ಬಾಲಕನ ಸಾವಿನ ಬಗ್ಗೆ ಮಾಹಿತಿ ನೀಡಿರುವ ಮಿಮ್ಸ್ ವೈದ್ಯರು, ವೀರಮಣಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ದೃಢಪಡಿಸಿದ್ದಾರೆ. 14 ವರ್ಷದ ಈ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸಿರುವುದು ಇಡೀ ಗ್ರಾಮಸ್ಥರಿಗೆ ಅಚ್ಚರಿ ಮತ್ತು ನೋವನ್ನುಂಟು ಮಾಡಿದೆ. ಹತ್ತನೇ ತರಗತಿಗೆ ಕಾಲಿಡಬೇಕಿದ್ದ ಮಗ ಹೀಗೆ ಅಕಾಲಿಕ ಸಾವನ್ನಪ್ಪಿರುವುದು ಸೋಮನಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

PREV
Read more Articles on
click me!

Recommended Stories

41 ಲಕ್ಷ ಠೇವಣಿ ಇಟ್ಟರೂ ತೆರಿಗೆ ಸಲ್ಲಿಸದ ಬೆಂಗಳೂರು ವ್ಯಕ್ತಿ: ಕಾರಣ ಕೇಳಿ ಅಧಿಕಾರಿಗಳೇ ದಂಗು-ಮುಂದೇನಾಯ್ತು
Namma Metro Pink Line: ಮೆಟ್ರೊ ಗುಲಾಬಿ ಮಾರ್ಗಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​- ಎಲ್ಲೆಲ್ಲಿ ಸಂಪರ್ಕ