Bagalkot: ಮಗಳು ತಪ್ಪು ಮಾಡಿದ್ದಕ್ಕೆ ಅಪ್ಪನನ್ನು ಸಸ್ಪೆಂಡ್ ಮಾಡಿದ ಸರ್ಕಾರ; ಡಿಎಚ್‌ಒ ಡಾ. ರಾಜ್‌ಕುಮಾರ್ ಮನೆಗೆ!

Published : Sep 18, 2026, 04:02 PM IST
Bagalakote

ಸಾರಾಂಶ

ಬಾಗಲಕೋಟೆ ಡಿಎಚ್‌ಒ ಡಾ. ರಾಜಕುಮಾರ ಯರಗಲ್ ಅವರು ತಮ್ಮ ಮಗಳ ಕರ್ತವ್ಯ ಲೋಪವನ್ನು ಮುಚ್ಚಿಟ್ಟ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಡಾ. ಅಂಕಿತಾ ಅವರು ಕರ್ತವ್ಯಕ್ಕೆ ಗೈರಾಗಿ ಎಂಡಿ ವ್ಯಾಸಂಗ ಮಾಡುತ್ತಿದ್ದರೂ ಅಕ್ರಮವಾಗಿ ವೇತನ ಪಡೆಯುತ್ತಿದ್ದರು. ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಬಳಿಕ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಬಾಗಲಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ (DHO) ನಡೆದಿರುವ ಬೃಹತ್ ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಹೆಚ್‌ಓ ಡಾ. ರಾಜಕುಮಾರ ಯರಗಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ತಮ್ಮ ಸ್ವಂತ ಮಗಳೂ ಹಾಗೂ ಪ್ರಭಾವಿ ರಾಜಕಾರಣಿಯ ಸೊಸೆಯಾಗಿರುವ ವೈದ್ಯಾಧಿಕಾರಿಯೊಬ್ಬರ ಗಂಭೀರ ಕರ್ತವ್ಯ ಲೋಪವನ್ನು ಮುಚ್ಚಿಟ್ಟು, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಏನಿದು ಪ್ರಕರಣ? ಮಗಳ ಅಕ್ರಮಕ್ಕೆ ತಂದೆಯ ರಕ್ಷಣೆ!

ಅಮಾನತುಗೊಂಡ ಡಿಹೆಚ್‌ಓ ಡಾ. ರಾಜಕುಮಾರ ಯರಗಲ್ ಅವರ ಮಗಳು ಡಾ. ಅಂಕಿತಾ ಯರಗಲ್ ಬಾಗಲಕೋಟೆಯ ವಾಂಬೆ ಕಾಲೋನಿಯ 'ನಮ್ಮ ಕ್ಲಿನಿಕ್'ನಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಡಾ. ಅಂಕಿತಾ ಅವರು ತಮ್ಮ ಸರ್ಕಾರಿ ಹುದ್ದೆಯ ಕರ್ತವ್ಯಕ್ಕೆ ಹಾಜರಾಗದೇ, ಯಾವುದೇ ಪೂರ್ವಾನುಮತಿ ಅಥವಾ ರಜೆ ಪಡೆಯದೇ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂಡಿ (MD) ಪ್ಯಾಥಾಲಜಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಕರ್ತವ್ಯಕ್ಕೆ ಗೈರಾಗಿದ್ದರೂ ಕೂಡ ನಿರಂತರವಾಗಿ ಸರ್ಕಾರದಿಂದ ವೇತನ ಪಡೆದುಕೊಳ್ಳುತ್ತಿದ್ದುದ್ದು ತನಿಖೆಯಿಂದ ಬಯಲಾಗಿದೆ.

ಉಮೇಶ್‌ ಮೇಟಿ ಸೊಸೆ!

ಡಾ. ಅಂಕಿತಾ ಯರಗಲ್ ಅವರು ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರ ಸೊಸೆ ಹಾಗೂ ದಿವಂಗತ ಮಾಜಿ ಸಚಿವ, ಶಾಸಕ ಹೆಚ್.ವೈ. ಮೇಟಿ ಅವರ ಮೊಮ್ಮಗಳಾಗಿದ್ದಾರೆ. ಸ್ವಂತ ಮಗಳಷ್ಟೇ ಅಲ್ಲದೆ, ಪ್ರಭಾವಿ ರಾಜಕೀಯ ಕುಟುಂಬದ ಸೊಸೆಯೂ ಆಗಿದ್ದ ಕಾರಣಕ್ಕೆ ಡಿಹೆಚ್‌ಓ ರಾಜಕುಮಾರ ಯರಗಲ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಗಳ ದುರ್ನಡತೆ ಹಾಗೂ ಕರ್ತವ್ಯ ಲೋಪದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಕ್ಷಣೆ ನೀಡುತ್ತಾ ಬಂದಿದ್ದರು.

ಅಮಾನತು ಆದೇಶದಲ್ಲಿ ಏನಿದೆ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರದ ಅಧಿಕಾರಿಯಾಗಿರುವ ಗುರುದತ್ ಹೆಗಡೆ ಅವರು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ. "ಡಾ. ಅಂಕಿತಾ ಯರಗಲ್ ನಿಮ್ಮ ಹತ್ತಿರದ ಸಂಬಂಧಿಯಾಗಿದ್ದು (ಮಗಳು), ಅವರು ತೀವ್ರ ಸ್ವರೂಪದ ಕರ್ತವ್ಯ ಲೋಪ ಎಸಗಿದ್ದರೂ ಸಹ ಜಿಲ್ಲಾ ಮುಖ್ಯಸ್ಥರಾಗಿ ನೀವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. ಅಧಿಕಾರ ದುರುಪಯೋಗ, ಕರ್ತವ್ಯ ನಿರ್ಲಕ್ಷ್ಯ ಹಾಗೂ ಶಿಸ್ತುಬದ್ಧ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ" ಎಂದು ಆದೇಶ ಪ್ರತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್!

ಸರ್ಕಾರಿ ಖಾತೆಯಿಂದ ಸಂಬಳ ಪಡೆಯುತ್ತಾ, ಕರ್ತವ್ಯಕ್ಕೆ ಚಕೋತಾ ಹೊಡೆದು ಮೆಡಿಕಲ್ ಕಾಲೇಜಿನಲ್ಲಿ ಪಿಜಿ ಓದುತ್ತಿದ್ದ ಡಾ. ಅಂಕಿತಾ ಯರಗಲ್ ಅವರ ಅಕ್ರಮದ ಕುರಿತು 'ಏಷ್ಯಾನೆಟ್ ಸುವರ್ಣನ್ಯೂಸ್' ಸೆಪ್ಟೆಂಬರ್ 12 ರಂದು ಸುದೀರ್ಘ ಹಾಗೂ ವಿಸ್ತೃತ ತನಿಖಾ ವರದಿಯನ್ನು ಪ್ರಸಾರ ಮಾಡಿತ್ತು. ಸಾರ್ವಜನಿಕ ಹಣದ ದುರ್ಬಳಕೆ ಮತ್ತು ರಾಜಕೀಯ ಪ್ರಭಾವ ಬಳಸಿ ಹುದ್ದೆಗೆ ಕಂಟಕ ಬಾರದಂತೆ ನಡೆದುಕೊಳ್ಳುತ್ತಿದ್ದ ಜಾಲವನ್ನು ಮಾಧ್ಯಮ ಬಯಲಿಗೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಸುದೀರ್ಘ ಪರಿಶೀಲನೆ ನಡೆಸಿ, ಇದೀಗ ಡಿಹೆಚ್‌ಓ ರಾಜಕುಮಾರ ಯರಗಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ವೈದ್ಯರ ನಿರ್ಲಕ್ಷ್ಯ!

ಈ ಪ್ರಕರಣವು ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಹಾಗೂ ಪ್ರಭಾವಿ ರಾಜಕಾರಣಿಗಳ ನೆರಳಿನಲ್ಲಿ ನಡೆಯುವ ಅಕ್ರಮಗಳಿಗೆ ಹಿಡಿದ ಕೈಗನ್ನಡಿಯಾಗಿದ್ದು, ಆರೋಗ್ಯ ಇಲಾಖೆಯ ಈ ಕ್ರಮ ಬಾಗಲಕೋಟೆ ಜಿಲ್ಲೆಯ ಆಡಳಿತ ಯಂತ್ರದಲ್ಲಿ ತೀವ್ರ ಸಂಚಲನ ಮೂಡಿಸಿದೆ.

PREV
Read more Articles on
click me!

Recommended Stories

ಹಸಿವು, ಅವಮಾನ, ಬಿರಿಯಾನಿ ಮತ್ತು ಲಕ್ಷಾಂತರ ಹಣ! – ಕನ್ನಡದ ಹಿರಿಯ ನಟನ ಕಂಪ್ಲೀಟ್ ಚೇಂಜ್-ಓವರ್ ಜರ್ನಿ!
KPSC ಹಗರಣ; ಸರ್ಕಾರದ 'ಇನ್ನೆರಡು ವಿಕೆಟ್' ಪತನ ಖಚಿತ? ವಿಪಕ್ಷ ನಾಯಕನ ಸ್ಫೋಟಕ ಹೇಳಿಕೆ! ಆ ಇಬ್ಬರು ಯಾರು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ!