KPSC ಹಗರಣ; ಸರ್ಕಾರದ 'ಇನ್ನೆರಡು ವಿಕೆಟ್' ಪತನ ಖಚಿತ? ವಿಪಕ್ಷ ನಾಯಕನ ಸ್ಫೋಟಕ ಹೇಳಿಕೆ! ಆ ಇಬ್ಬರು ಯಾರು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ!

Published : Sep 18, 2026, 03:43 PM IST
R Ashoka

ಸಾರಾಂಶ

ಕೆಪಿಎಸ್‌ಸಿ ಹಗರಣದಲ್ಲಿ ಸರ್ಕಾರದ ಇಬ್ಬರು ಸಚಿವರ ಆಪ್ತ ಸಹಾಯಕರು ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಶೀಘ್ರದಲ್ಲೇ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ಅವರು, ಸರ್ಕಾರದ ಇನ್ನೆರಡು ವಿಕೆಟ್ ಪತನವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಈಗಾಗಲೇ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ಅಕ್ರಮ ಮತ್ತು ಹಗರಣದ ಪ್ರಕರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಹೊಸ ಹೇಳಿಕೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಎದೆಬಡಿತ ಹೆಚ್ಚಿಸಿದೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಗರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳಲಿದ್ದು, ಸರ್ಕಾರದ ಪ್ರಭಾವಿ ನಾಯಕರ ಬಣ್ಣ ಬಯಲಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇವೆಯಾ ದೊಡ್ಡ-ದೊಡ್ಡ ತಿಮಿಂಗಲಗಳು?

"ಕೆಪಿಎಸ್‌ಸಿ ಹಗರಣದ ತನಿಖೆ ಕೇವಲ ಸಣ್ಣಪುಟ್ಟ ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಈ ಹಗರಣದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳೇ ಭಾಗಿಯಾಗಿದ್ದು, ಶೀಘ್ರದಲ್ಲೇ ಅವರೆಲ್ಲರೂ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಈ ಬೃಹತ್ ಅಕ್ರಮದ ತನಿಖೆಯ ಕಾವು ಏರುತ್ತಿದ್ದಂತೆ ಸರ್ಕಾರದ ಇನ್ನೆರಡು ಪ್ರಮುಖ ವಿಕೆಟ್‌ಗಳು ಬಿದ್ದರೂ ಆಶ್ಚರ್ಯವಿಲ್ಲ" ಎಂದು ಅಶೋಕ್ ಮಾರ್ಮಿಕವಾಗಿ ಎಚ್ಚರಿಸಿದ್ದಾರೆ.

ಜೈಲಿನಲ್ಲಿರುವ ಆರೋಪಿಗಳಿಗೆ ಸಚಿವರ ಪಿಎಗಳಿಂದ ಕಾಲ್!

ಅಶೋಕ್ ಅವರು ನೀಡಿರುವ ಅತ್ಯಂತ ಗಂಭೀರ ಆರೋಪವೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿಗಳೊಂದಿಗೆ ಸರ್ಕಾರದ ಇಬ್ಬರು ಸಚಿವರ ಆಪ್ತ ಸಹಾಯಕರು (PA) ಸಂಪರ್ಕದಲ್ಲಿದ್ದಾರೆ ಎಂಬುದು. "ಜೈಲಿನಲ್ಲಿರುವ ಆರೋಪಿಗಳಿಗೆ ಸಚಿವರ ಪಿಎ ಕಡೆಯಿಂದ ಫೋನ್ ಕಾಲ್‌ಗಳು ಹೋಗಿವೆ. ಇಬ್ಬರು ಸಚಿವರ ಪಿಎಗಳು ಜೈಲಿನಲ್ಲಿರುವವರ ಜೊತೆ ನಿರಂತರವಾಗಿ ಮಾತನಾಡಿರುವುದು ನನಗೆ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪಕ್ಕಾ ದಾಖಲೆಗಳನ್ನು ಸಂಗ್ರಹ ಮಾಡಲಾಗಿದ್ದು, ಶೀಘ್ರದಲ್ಲೇ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಮಾಧ್ಯಮಗಳ ಮತ್ತು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುತ್ತೇನೆ" ಎಂದು ಹೊಸ ಹೊಸ ಸಾಕ್ಷ್ಯಗಳ ಸುಳಿವು ನೀಡಿದರು.

"ಕುಮಾರಸ್ವಾಮಿಗೆ ಟೈಮ್ ಕೊಟ್ಟಿದ್ದೀರಿ, ನನಗೂ ಸ್ವಲ್ಪ ಸಮಯ ಕೊಡಿ"!

ಹೆಚ್.ಡಿ. ಕುಮಾರಸ್ವಾಮಿ ಅವರ ಬಾಂಬ್ ಹೇಳಿಕೆಗಳ ಉಲ್ಲೇಖಿಸಿದ ವಿಪಕ್ಷ ನಾಯಕರು, "ಕುಮಾರಸ್ವಾಮಿ ಅವರಿಗೆ ದಾಖಲೆ ತರಲು 10 ದಿನ ಸಮಯ ಕೊಟ್ಟಿದ್ದೀರಿ. ನನಗೂ ಸ್ವಲ್ಪ ಸಮಯ ಕೊಡಿ, ಸಂಪೂರ್ಣ ಸತ್ಯಾಸತ್ಯತೆಯನ್ನು ಹೊರತರುತ್ತೇನೆ. ನಾನ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುವುದಿಲ್ಲ. ಆದರೆ, ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಈಗಾಗಲೇ ಈ ಹಗರಣದ ಕಾಕತಾಳೀಯ ರಾಜಕೀಯ ಬೆಳವಣಿಗೆಯಲ್ಲಿ ಒಂದು ವಿಕೆಟ್ ಬಿದ್ದಿದೆ. ಸದ್ಯದಲ್ಲೇ ಮತ್ತೆರಡು ವಿಕೆಟ್ ಬೀಳುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ" ಎಂದರು.

ಸಿದ್ದರಾಮಯ್ಯ ಎಸ್ಕೇಪ್, ಇಲ್ಲದಿದ್ದರೆ ಅವರ ವಿಕೆಟ್‌ ಕೂಡ ಬೀಳುತ್ತಿತ್ತು!

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳನ್ನು ನೇರವಾಗಿ ಗುರಿಯಾಗಿಸಿದ ಆರ್. ಅಶೋಕ್, "ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಜಾಣತನದಿಂದ ಎಸ್ಕೇಪ್ ಆಗಿದ್ದಾರೆ. ಇಲ್ಲದೇ ಹೋಗಿದ್ದರೆ ಅವರ ವಿಕೆಟ್ ಕೂಡ ಇದೇ ಹಗರಣದಲ್ಲಿ ಬೀಳುವ ಸಂದರ್ಭವಿತ್ತು. ನಾವು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ; ಪಕ್ಕಾ 'ಪಿಚ್ ರೆಡಿ' ಇಟ್ಟುಕೊಂಡು ಕಾಯುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಚೆಂಡು ಬೌಂಡರಿ ದಾಟಲಿದೆ" ಎಂದು ಕ್ರಿಕೆಟ್ ಶೈಲಿಯಲ್ಲೇ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

SIT, CID ನಿಮ್ಮ ಹತ್ತಿರವೇ ಇದೆಯಲ್ಲ, ತನಿಖೆ ಮಾಡಿಸಿ!

ಬಿಜೆಪಿ ನಾಯಕರ ಪಾತ್ರದ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, "ಒಂದು ವೇಳೆ ಈ ಹಗರಣದಲ್ಲಿ ಬಿಜೆಪಿ ನಾಯಕರ ಹಸ್ತಕ್ಷೇಪ ಅಥವಾ ಭಾಗಿಯಾಗುವಿಕೆ ಇದ್ದರೆ, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆಯಲ್ಲವೇ? ನಿಮ್ಮ ಕೈಯಲ್ಲೇ ಎಸ್‌ಐಟಿ (SIT) ಮತ್ತು ಸಿಐಡಿ (CID) ಮುಂತಾದ ತನಿಖಾ ಸಂಸ್ಥೆಗಳಿವೆ. ತಕ್ಷಣವೇ ತನಿಖೆ ಮಾಡಿಸಿ, ತಪ್ಪಿತಸ್ಥರನ್ನು ಬಂಧಿಸಿ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಈ ಬೃಹತ್ ಕೆಪಿಎಸ್‌ಸಿ ಹಗರಣದ ಪಾಪದ ಚೀಲದಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಮಾಗಡಿಯಲ್ಲಿ ಕಡಾಖಂಡಿತವಾಗಿ ಸವಾಲೆಸೆದರು. ಆರ್. ಅಶೋಕ್ ಅವರ ಈ ಹೊಸ ದಾಳಿಯು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 'ದಾಖಲೆಗಳು' ಆ ಇಬ್ಬರ ಕುರಿತು ಯಾರು ಎನ್ನುವುದನ್ನು ಬಹಿರಂಗ ಪಡಿಸಲಿವೆ.

PREV
Read more Articles on
click me!

Recommended Stories

ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಮಸ್ತ ಚಟುವಟಿಕೆಗಳೂ ರಾಜ್ಯದಲ್ಲೇ ನಡೆಯಬೇಕು, ಎಂ ಬಿ ಪಾಟೀಲ
ಐಫೋನ್ 18 ಪ್ರೊಗಾಗಿ ಮುಗಿಬಿದ್ದ ಜನ: ಬೆಂಗಳೂರು ಮಾಲ್ ಆಫ್ ಏಷ್ಯಾ ಸೇರಿ ದೇಶದಾದ್ಯಂತ ಬೆಳಗ್ಗೆ 5 ಗಂಟೆಯಿಂದಲೇ ಕ್ಯೂ!