ರಾಜೀನಾಮೆಗೆ ಒತ್ತಾಯಿಸಿದ್ರೆ ಕೇಸ್‌ : ಬಿಜೆಪಿಗೆ ವಾರ್ನಿಂಗ್ ಕೊಟ್ಟ ಮುಖಂಡ

By Kannadaprabha News  |  First Published Oct 23, 2020, 2:26 PM IST

ರಾಜೀನಾಮೆಗೆ ಒತ್ತಾಯ ಮಾಡಿದ್ರೆ ಕೇಸ್ ಹಾಕಲಾಗುತ್ತದೆ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ 


ಚಿಕ್ಕಮಗಳೂರು (ಅ.23):  ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದರೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಸೇರಿ ಆಡಳಿತ ಪಕ್ಷದ ಸದಸ್ಯರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಖಿಲ ಭಾರತ ಬಬ್ಬುಸ್ವಾಮಿ ಮುಂಡಾಲ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಹ್ನವ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾಗಿ ಸುಜಾತ ಕೃಷ್ಣಪ್ಪ ಅವರು ಯಾವುದೇ ಅವ್ಯವಹಾರ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಆಡಳಿತ ನಡೆಸಿದ್ದಾರೆ. ವಿರೋಧ ಪಕ್ಷಗಳೂ ಉತ್ತಮ ಸಹಕಾರ ನೀಡಿದ್ದಾರೆ. ಹೀಗಿದ್ದರೂ, ಯಾವುದೇ ಕಾರಣ ನೀಡದೆ ಅಧ್ಯಕ್ಷರನ್ನು ಕೆಳಗಿಳಿಸುವ ಪ್ರಯತ್ನ ಸರಿಯಲ್ಲ ಎಂದು ಎಚ್ಚರಿಸಿದರು.

Tap to resize

Latest Videos

ರಾಜೀನಾಮೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲುವಾದಿ ನಾರಾಯಣಸ್ವಾಮಿ ಅವರಿಗೂ ಪತ್ರ ಬರೆದು ಅಧ್ಯಕ್ಷರನ್ನು ಪದಚ್ಯುತಿಗೊಳಿಸಬಾರದು ಎಂದು ಮನವಿ ಮಾಡಿದ್ದೇವೆ ಎಂದರು.

ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ: ಸರಿಸಮಾನರ ಜೊತೆ ಯುದ್ಧ ಎಂದ ಡಿಕೆಶಿ ..

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಅವರನ್ನು ಖುದ್ದು ಭೇಟಿ ಮಾಡಿ ಸುಜಾತ ಕೃಷ್ಣಪ್ಪ ಅವರು ದಲಿತ ವರ್ಗದಿಂದ ಬಂದವರಾಗಿದ್ದಾರೆ. ಸಂವಿಧಾನಬದ್ಧವಾಗಿ ಅವರಿಗೆ ಸಿಕ್ಕಿರುವ ಅಧಿಕಾರವನ್ನು ಮೊಟಕುಗೊಳಿಸಬಾರದು ಎಂದು ಮನವಿ ಮಾಡಿದರೂ, ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಗಮನಕ್ಕೆ ತಂದಾಗ ಪಕ್ಷದಲ್ಲಿ ಹಿಂದೆ ಒಪ್ಪಂದ ಆಗಿದ್ದರೆ ಜಿಪಂ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಂಡು ಡಿಸೆಂಬರ್‌ 20ರ ವೇಳೆಗೆ ರಾಜೀನಾಮೆ ನೀಡಲಿ ಎಂದಿದ್ದರು. ಆದರೆ ಪಕ್ಷದ ಅಧ್ಯಕ್ಷರು, ಇತರೆ ಸದಸ್ಯರು ಸೇರಿ ಕೋರ್‌ ಕಮಿಟಿ ಸಭೆ ತೀರ್ಮಾನವನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿ ಅದಕ್ಕೂ ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ಈ ವಿಚಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಹಾಲಿ ಉಪಾಧ್ಯಕ್ಷರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಪ್ರಯತ್ನ ನಡೆದಿದೆ. ಉಪಾಧ್ಯಕ್ಷರು ಸಹ ಈಗಾಗಲೇ ಹಲವು ಅಧಿಕಾರಿಗಳ ಬಳಿ ಈ ವಿಚಾರ ಹೇಳಿಕೊಂಡು ಬರುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದರು.

ಇದು ಪಕ್ಷಕ್ಕೆ ಮಾಡಿದ ದ್ರೋಹವಲ್ಲ ಬದಲಾಗಿ ಪರಿಶಿಷ್ಟರಿಗೆ ಮಾಡಿದ ದ್ರೋಹ. ನಾವೂ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಬಿಜೆಪಿ ನಮ್ಮ ಸಮಾಜಕ್ಕೆ ಸಾಕಷ್ಟುಅನುಕೂಲ ಮಾಡಿಕೊಟ್ಟಿದೆ. ಆದರೆ, ಜಿಪಂ ಅಧ್ಯಕ್ಷರ ವಿಚಾರದಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದರು.

'ಅಪ್ಪ, ತಾತನ ಹೆಸರು ಹೇಳಿಕೊಂಡಿದ್ದವರು ಮೋದಿ ಬಂದ ಮೇಲೆ ನಿರುದ್ಯೋಗಿಗಳಾಗಿದ್ದಾರೆ' ..

ಸುಜಾತ ಕೃಷ್ಣಪ್ಪ ಅವರು ಸಂವಿಧಾನಬದ್ಧ ಹಕ್ಕಾಗಿರುವ ಮೀಸಲಾತಿ ಲಾಭದಿಂದ ಆಯ್ಕೆಯಾಗಿ ಅಧ್ಯಕ್ಷರಾಗಿದ್ದಾರೆ. ಆದ್ದರಿಂದ ಯಾವುದೇ ಸರ್ಕಾರವಾಗಲಿ, ಪಕ್ಷವಾಗಲಿ ಸಂವಿಧಾನ ವಿರುದ್ಧವಾಗಿ ಯಾವುದೇ ಉಚ್ಛಾಟನೆ ಅಥವಾ ಕಿರುಕುಳ ನೀಡುವಂತಿಲ್ಲ ಎಂದು ಕಾನೂನಿನಲ್ಲಿ ಹೇಳಲಾಗಿದೆ ಎಂದರು.

ಇಷ್ಟಾದರೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪಕ್ಷದ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿರುವುದು ವಿಷಾದನೀಯ. ಒಂದೊಂಮ್ಮೆ ಅಧ್ಯಕ್ಷರನ್ನು ಉಚ್ಛಾಟನೆ ಮಾಡಿದ್ದೇ ಆದರೆ ಬಿಜೆಪಿ ವಿರುದ್ಧ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಂಡಲಾ ಸಮಾಜದವರನ್ನು ಅಗೌರವವಾಗಿ ನಡೆಸಿಕೊಂಡಿರುವ ಕಲ್ಮರಡಪ್ಪ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು

click me!