ಕ್ಯಾಂಪೇನ್ ಸ್ಟೋರಿ ಭಾಗ-8...
ಚಿಕ್ಕಪ್ಪನಹಳ್ಳಿ ಷಣ್ಮುಖ
undefined
ಚಿತ್ರದುರ್ಗ(ಜ.6) : ಅರೆರೆ! ಚಿತ್ರದುರ್ಗದ ಆಟೋಗಳಲ್ಲಿ ಮೀಟರುಗಳು ಗೋಚರಿಸುತ್ತಿವೆ. ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಆರಂಭಿಸಿರುವ ಕಾನೂನು ಪಾಠ ಹಾಗೂ ಎಚ್ಚರಿಕೆಗೆ ಬೆಚ್ಚಿದ ಆಟೋ ಚಾಲಕರು ಮನೆಯ ಮೂಲೆಗಳಲ್ಲಿ ಅವಿತಿಟ್ಟಿದ್ದ ಮೀಟರುಗಳ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಗುರುವಾರ ಚಿತ್ರದುರ್ಗದಲ್ಲಿ ಓಡಾಡುವ ಅರ್ಧದಷ್ಟುಆಟೋಗಳಲ್ಲಿ ಮೀಟರುಗಳು ಕಂಡು ಬಂದವು.
ರಾತ್ರಿ ವೇಳೆ ಆಟೋ ಚಾಲಕರು(Auto drivers) ಪ್ರಯಾಣಿಕರಲ್ಲಿ ಹೆಚ್ಚುವರಿ ದರ ವಸೂಲು ಮಾಡುತ್ತಿದ್ದು, ಮೀಟರು ಇಲ್ಲದ ಪರಿಣಾಮ ಇಂತಹದ್ದೊಂದು ಕೆಟ್ಟವ್ಯವಸ್ಥೆ ಸೃಷ್ಟಿಯಾಗಿದೆ ಎಂಬ ಸಂಗತಿಯ ಪ್ರಧಾನವಾಗಿರಿಸಿಕೊಂಡು ಕನ್ನಡಪ್ರಭ ಸರಣಿ ವರದಿ ಆರಂಭಿಸಿತ್ತು. ಸರಣಿ ಆರಂಭಿಸಿದ ಮರುದಿನದಿಂದಲೇ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಮೀಟರ್ ಇಲ್ಲದ ಆಟೋಗಳ ವಶಕ್ಕೆ ಪಡೆದಿದ್ದರು.
Chitradurga News: ಆಟೋಗಳಲ್ಲಿ ಒಮ್ಮೆಲೆ ಝೊಂಬಿಯಂತೆ 25 ಜನ ಹತ್ತಿ ಪ್ರಯಾಣಿಸ್ತಾರೆ!
ಅಚ್ಚರಿ ಎಂದರೆ ಆಟೋಗಳ ವಶಕ್ಕೆ ಪಡೆದಾಗ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣಗೊಳ್ಳದ, ವಿಮೆ ಮಾಡಿಸದ ಆಟೋಗಳು ಹೆಚ್ಚಾಗಿ ಕಂಡು ಬಂದಿದ್ದವು. ಮೀಟರು ಇಲ್ಲದೇ ಇರುವುದರ ಜೊತೆಗೆ ಇತರೆ ಲೋಪ ಪರಿಗಣಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ್ದರು. ದುಬಾರಿ ದಂಡ ಹಾಕುತ್ತಿದ್ದಾರೆಂದು ದೂರಿ ಆಟೋ ಚಾಲಕರು ಪ್ರತಿಭಟನೆ ಕೂಡ ದಾಖಲು ಮಾಡಿದ್ದರು.
ಏತನ್ಮಧ್ಯೆ, ಕನ್ನಡಪ್ರಭ ಕಚೇರಿಗೆ ದಾಂಗುಡಿ ಇಟ್ಟಿದ್ದ ಆಟೋ ಚಾಲಕರು ಯಾರೋ ಚಾಲಕರು ಮಾಡಿದ ತಪ್ಪಿಗೆ ಎಲ್ಲರೂ ಕಷ್ಟಅನುಭವಿಸುವಂತಾಗಿದೆ. ಮೀಟರು ಅಳವಡಿಸಿಕೊಳ್ಳಲು ಆಟೋ ಚಾಲಕರ ವಿರೋಧವಿಲ್ಲ. ದರ ನಿಗದಿ ಮಾಡಿಸಿಕೊಡಿ ಎಂದು ವಿನಂತಿಸಿಕೊಂಡಿದ್ದರು. ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಕೊಟ್ಟಲ್ಲಿ ಅವರು ಪರಿಗಣಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂತಿಮಗೊಳಿಸುತ್ತಾರೆ. ಸಭೆಗೆ ನಿಮ್ಮನ್ನೂ ಕರೆಯುತ್ತಾರೆ ಎಂದು ಮನವರಿಕೆ ಮಾಡಿ ಕಳಿಸಲಾಗಿತ್ತು.
ಫಿಟ್‌ನೆಸ್ ತೋರಿಸಿದ ನಂತರ ಆಟೋದ ಮೀಟರ್ ಮಾಯ
ಮೀಟರು ಅಳವಡಿಸಿಕೊಂಡಲ್ಲಿ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಸೀಲ್ ಮಾಡಬೇಕು. ದಿನಕ್ಕೆ ಹತ್ತಿಪ್ಪತ್ತು ಆಟೋಗಳಿಗಷ್ಟೇ ಮಾಡುತ್ತಾರೆ. ವಾರಕ್ಕೆ ಒಂದು ದಿನ ಮಾತ್ರ ಸಮಯ ನಿಗದಿ ಮಾಡಿಕೊಂಡಿದ್ದಾರೆಂದು ಆಟೋ ಚಾಲಕರು ಅಲವತ್ತುಕೊಂಡರು.