ಉತ್ತರಕನ್ನಡ: ಸೇತುವೆ ಉಳಿಸಲು ಮರಳಿನ ಚೀಲದ ಮೊರೆ ಹೋದ ಗ್ರಾಮಸ್ಥರು..!

By Girish Goudar  |  First Published May 26, 2023, 2:30 AM IST

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ತಮ್ಮೂರಿನ‌ ಸೇತುವೆಯನ್ನು ಉಳಿಸಿಕೊಳ್ಳಲು ರೇತಿ ಚೀಲಗಳ ಮೊರೆ ಹೋಗಿದ್ದಾರೆ. 


ಉತ್ತರಕನ್ನಡ(ಮೇ.26): ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ತಮ್ಮೂರಿನ‌ ಸೇತುವೆಯನ್ನು ಉಳಿಸಿಕೊಳ್ಳಲು ರೇತಿ ಚೀಲಗಳ ಮೊರೆ ಹೋಗಿದ್ದಾರೆ. ಇಲ್ಲಿನ‌ ಗ್ರಾಮಗಳ ಜನರು ಸೇತುವೆಗಾಗಿ ನಡೆಸಿದ್ದ ಸರ್ವ ಪ್ರಯತ್ನಗಳು ಅವರ ಸೇತುವೆ ಕನಸೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಗಿದೆ. 

ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಮನೆ, ಕ್ಯಾತನಮನೆ, ಅಂಬೆಗಾರ ಸೇರಿದಂತೆ ಹಲವು ಹಳ್ಳಿಗಳಿಗೆ ಅಘನಾಶಿನಿ ನದಿ ಅಡ್ಡ ಬಂದಿದ್ದು, ಮಳೆಗಾಲದಲ್ಲಿ ಈ ನದಿ ದಾಟಲು ಸಾಧ್ಯವಾಗದೇ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುತ್ತಾರೆ. ಹೇರೂರು ಗೋಳಿಮಕ್ಕಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಇಲ್ಲಿಯ ನಡಿಮನೆ ಬಳಿ ಓಮಿನಿ ಮತ್ತು ಬೈಕ್ ದಾಟಬಹುದಾದ ಮಾದರಿಯ ಸಣ್ಣ ಸೇತುವೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಅಘನಾಶಿನಿ ನದಿಯ ಪ್ರವಾಹದ ಅಬ್ಬರಕ್ಕೆ ಸೇತುವೆಯ ಇಕ್ಕೆಲಗಳ ಭದ್ರತಾ ಕಂಬಗಳು ಮುರಿದುಹೋಗಿ ಬೈಕ್ ದಾಟಿಸಲೂ ಭಯವಾಗುವ ಸ್ಥಿತಿ ನಿರ್ಮಾಣವಾಗಿದೆ. 

Latest Videos

undefined

WILDLIFE: ನೀರು-ಆಹಾರ ಅರಸಿ ನಾಡಿಗೆ ಬಂದು ಮೃತಪಡುತ್ತಿರುವ ಕಾಡುಪ್ರಾಣಿಗಳು!

ಸೇತುವೆಯ ಮೇಲ್ಭಾಗದಲ್ಲೂ ಸಣ್ಣ ಸಣ್ಣ ಕಂಬಗಳು ಈ ಹಿಂದೆ ಕಂಡಂತಹ ನೆರೆಯ ಏಟಿಗೆ ಪುಡಿಪುಡಿಯಾಗಿದ್ದ ಜನರು ಸೇತುವೆಯ ಮೇಲೆ ಸರ್ಕಸ್ ಮಾಡಿಕೊಂಡು ಸಾಗಬೇಕಾಗಿದೆ. ಇನ್ನು ದ್ವಿಚಕ್ರ ವಾಹನ, ರಿಕ್ಷಾ ಅಥವಾ ಓಮ್ನಿ ಈ ಸೇತುವೆ ಮೇಲೆ ಸಾಗಿದರೆ ಇಡೀ ಸೇತುವೆಯೇ ನಡುಗಲಾರಂಭಿಸುತ್ತದೆ. ಈ ಸಮಸ್ಯೆಯ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ತನ್ನ ಬಿಗ್-3 ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿತ್ತು. ಈ ವೇಳೆ ಆಶ್ವಾಸನೆ ನೀಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ಚುನಾವಣೆ ಮುಗಿದ ಕೂಡಲೇ ಸಾಧ್ಯವಾದಷ್ಟು ಸೇತುವೆಯ ರಿಪೇರಿ ಕಾರ್ಯ ನಡೆಸಿ ನೂತನ ಸೇತುವೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ‌ ತಿಳಿಸಿದ್ದರು. ಇದರಿಂದಾಗಿ ಅತ್ತ ರಿಪೇರಿ ಕಾರ್ಯವೂ ಇಲ್ಲ, ಇತ್ತ ಹೊಸ ಸೇತುವೆ ದೊರೆಯುವ ಭರವಸೆಯೂ ದೊರೆಯದ ಕಾರಣ ಇದೀಗ ಜನರೇ ಸೇತುವೆಯನ್ನು ಆದಷ್ಟು ಉಳಿಸಲು ಕೆಲಸಕ್ಕಿಳಿದಿದ್ದಾರೆ. 

ಮಳೆಗಾಲದಲ್ಲಿ ಸಂಪರ್ಕ ಕಡಿತವಾಗದಂತೆ, ಇರುವ ಸೇತುವೆ ಈ ಮಳೆಗಾಲದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಗ್ರಾಮಸ್ಥರೇ ಸಿಮೆಂಟ್ ಚೀಲದಲ್ಲಿ ರೇತಿ ತುಂಬಿ ಕಂಬದ ಬುಡದಲ್ಲಿಟ್ಟಿದ್ದಾರೆ. ನೂತನ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಇಟ್ಟಿದ್ದ ಬೇಡಿಕೆಗೆ ಮಾಮೂಲಿಯಂತೆ ಈ ವರ್ಷ ಕೂಡಾ ಸ್ಪಂದನೆ ದೊರೆಯದ ಕಾರಣ ಮಳೆಗಾಲದ ಅನಿವಾರ್ಯತೆಗಾಗಿ ಗ್ರಾಮಸ್ಥರೇ ಈಗ ಶ್ರಮದಾನದ ಮೂಲಕ ಸೇತುವೆ ಕುಸಿದುಬೀಳದಂತೆ ರೇತಿ ಚೀಲದ ಆಧಾರ ಒದಗಿಸಿದ್ದಾರೆ. ಗ್ರಾಮದ ಗಣೇಶ ಹೆಗಡೆ, ತಿರುಮಲೇಶ್ವರ ಹೆಗಡೆ, ರಘುಪತಿ ಹೆಗಡೆ, ಜನಾರ್ಧನ ಹೆಗಡೆ, ನಾಗರಾಜ ಗೌಡ, ಎಂ. ಎನ್. ಹೆಗಡೆ, ಗಣಪತಿ ಗೌಡ, ನವೀನ್ ಗೌಡ, ಮಹಾಬಲೇಶ್ವರ ನಾಯ್ಕ, ದಿನೇಶ ನಾಯ್ಕ, ಗಜಾನನ ಗೌಡ, ಸುಮಂತ ಹೆಗಡೆ ಇತರರು ಸೇರಿ ಸುಮಾರು 400 ಚೀಲದಲ್ಲಿ ಉಸುಕು ತುಂಬಿ ಶಿಥಿಲಗೊಂಡ ಕಂಬದ ಬುಡದಲ್ಲಿಟ್ಟು ಸೇತುವೆ ಕುಸಿತ ತಪ್ಪಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ‌. 

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ನೆರೆ ಕಾಟ ಕಾಣಿಸುವುದರಿಂದ ಈ ಬಾರಿ ನೀರಿನ ವೇಗಕ್ಕೆ ಈ ಸೇತುವೆ ಮುರಿದು ಜನಸಂಪರ್ಕವೇ ಕಡಿತವಾಗುತ್ತದೆಯೇ..? ಅಥವಾ ಜನರ ಪ್ರಯತ್ನದ ಫಲವಾಗಿ ಸೇತುವೆ ಉಳಿಯಬಹುದೇ..? ಎಂದು ಕಾದು ನೋಡಬೇಕಷ್ಟೇ.

click me!