
ಬೆಂಗಳೂರು (ಫೆ.14): ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹಾಗೂ ಹೆಚ್ಚಿನ ಹೂಡಿಕೆ ಆಕರ್ಷಿಸಲು ಕಡಿಮೆ ಬೆಲೆಯಲ್ಲಿ ಭೂಮಿ ಸಿಗುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಅದಕ್ಕಾಗಿ ಕೈಗಾರಿಕಾ ಹಬ್‌ಗಳನ್ನು ಸ್ಥಾಪಿಸಿ ಭೂಮಿಯನ್ನು ಕಡಿಮೆ ಬೆಲೆಗೆ ನೀಡುವ ವ್ಯವಸ್ಥೆ ಜಾರಿ ಮಾಡಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನೂ ಕೇಂದ್ರ ಸರ್ಕಾರ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದಲ್ಲಿ ನಡೆದ ರಾಜ್ಯದ 30ಕ್ಕೂ ಹೆಚ್ಚು ಸಾಧಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಉದ್ಯಮಿಗಳಿಗೆ ‘ಎಸ್‌ಎಂಇ ಕನೆಕ್ಟ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ತಾಣವಾಗಿದೆ. ಆದರೆ, ಹೂಡಿಕೆಯ ಮೊತ್ತಕ್ಕಿಂತ ಭೂಸ್ವಾಧೀನದ ಮೊತ್ತ ಹೆಚ್ಚಾಗುತ್ತಿದೆ. ಹೀಗಾಗಿ, ಭೂಮಿಯ ಸಮಸ್ಯೆಯಿಂದಾಗಿ ಹಲವು ಹೂಡಿಕೆದಾರರು ಹಿಂದೇಟು ಹಾಕುವಂತಾಗಿದೆ. ಅದನ್ನು ನಿವಾರಿಸಲು ರಾಜ್ಯ ಸರ್ಕಾರ ಕೈಗಾರಿಕಾ ಹಬ್‌ಗಳನ್ನು ಸ್ಥಾಪಿಸಿ ಅಲ್ಲಿ ಭೂಮಿಗಳನ್ನು ಶೇಖರಿಸಿ, ಹೂಡಿಕೆದಾರರಿಗೆ ಕಡಿಮೆ ಬೆಲೆಯಲ್ಲಿ ಭೂಮಿ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಿಸಿದರೆ ಕೇಂದ್ರ ಸರ್ಕಾರ ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದು ಹೇಳಿದರು.
ಜಾಗತಿಕ ಹೂಡಿಕೆ ಕೇಂದ್ರ-ನಮ್ಮ ಗುರಿ: ಕರ್ನಾಟಕವು ಅವಕಾಶಗಳನ್ನು ಹೊಂದಿರುವ ರಾಜ್ಯವಾಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಪ್ರಶಸ್ತ ತಾಣವಾಗಿದೆ. ರಾಜ್ಯವನ್ನು ಜಾಗತಿಕ ಬಂಡವಾಳ ಹೂಡಿಕೆಯ ಕೇಂದ್ರವನ್ನಾಗಿಸುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಕರ್ನಾಟಕದಲ್ಲಿಯೇ ಏಕೆ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ಹೂಡಿಕೆದಾರರಿಗೆ ಎದುರಾಗಬಹುದು. ಕರ್ನಾಟಕವು ಆವಿಷ್ಕಾರದ ರಾಜಧಾನಿಯಾಗಿದೆ. ಇಲ್ಲಿ 50 ಸಾವಿರಕ್ಕೂ ಹೆಚ್ಚಿನ ಸ್ಟಾರ್ಟ್‌ಅಪ್‌ಗಳಿವೆ, ಕೃತಕ ಬುದ್ಧಿಮತ್ತೆ, ಆಟೋಮೇಷನ್, ಕೈಗಾರಿಕಾ ಕಾರಿಡಾರ್, ಸ್ಮಾರ್ಟ್‌ಸಿಟಿ, ಆಟೋಮೊಬೈಲ್... ಹೀಗೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇವೆಲ್ಲವೂ ಹೂಡಿಕೆದಾರರ ಪ್ರಶ್ನೆಗೆ ಉತ್ತರವಾಗಿವೆ.
ಸರ್ವೇಯರ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಛೇರಿಯಲ್ಲಿ ಡೆತ್‌ನೋಟ್ ಪತ್ತೆ!
ಅಲ್ಲದೆ, ಕರ್ನಾಟಕವು ಶಾಂತಿಯ ರಾಜ್ಯವಾಗಿದ್ದು, ಇಲ್ಲಿನ ಜನರು ಸುಶಿಕ್ಷಿತ, ಸುಸಂಸ್ಕೃತ, ಶಿಸ್ತು ಬದ್ಧರಾಗಿದ್ದಾರೆ. ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ ಎಂದು ಹೇಳಿದರು. ದೇಶದ ಜಿಡಿಪಿಗೆ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಪಾಲು ಶೇ.30ರಷ್ಟಿದ್ದು, ಈ ಕೈಗಾರಿಕೆಗಳಿಂದ 25 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಕಳೆದ 10 ವರ್ಷಗಳಲ್ಲಿ ಈ ವಲಯದ 7 ಲಕ್ಷ ಉದ್ಯಮಗಳಿಗೆ ಕೇಂದ್ರ ಸರ್ಕಾರದಿಂದ 27.5 ಲಕ್ಷ ಕೋಟಿ ರು. ಸಾಲ ನೀಡಲಾಗಿದೆ. ಅಲ್ಲದೆ, ದೇಶದಲ್ಲಿ ಎಂಎಸ್‌ಎಂಇ ನೀತಿ ಬದಲಿಸಲಾಗಿದ್ದು, ಕೈಗಾರಿಕೆಗಳ ವರ್ಗೀಕರಣ ಬದಲಿಸಲಾಗಿದೆ. ಆ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗಲಾಗಿದೆ ಎಂದರು.