ಮಕ್ಕಳ ಕಳ್ಳರು ಬಂದಾರಂತ್ರೆ ಪಾ. ಏ ಅವ ಮಕ್ಕಳ ಕಳ್ಳ ಇರಬಹುದು ಹಿಡಿರ್ಲೇ ಅವನ್ನ, ಹಾಕ್ರಲೇ ಅವಂಗ.. ಹಾವೇರಿ ಜಿಲ್ಲೆಯ ಯಾವ ಹಳ್ಳಿಗೆ ಹೋದ್ರೂ ಜನರ ಬಾಯಲ್ಲಿ ಇದೇ ಮಾತು. ಅಂಗನವಾಡಿ, ಶಾಲೆಗಳ ಅಕ್ಕ ಪಕ್ಕ ಭಯದ ವಾತಾವರಣ. ಯಾರಾದ್ರೂ ಬಂದು ನಮ್ ಮಗನನ್ನ ಹೊತ್ತೊಯ್ದರೆ ಗತಿ ಏನು?
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಸೆ.16): ಮಕ್ಕಳ ಕಳ್ಳರು ಬಂದಾರಂತ್ರೆ ಪಾ. ಏ ಅವ ಮಕ್ಕಳ ಕಳ್ಳ ಇರಬಹುದು ಹಿಡಿರ್ಲೇ ಅವನ್ನ, ಹಾಕ್ರಲೇ ಅವಂಗ.. ಹಾವೇರಿ ಜಿಲ್ಲೆಯ ಯಾವ ಹಳ್ಳಿಗೆ ಹೋದ್ರೂ ಜನರ ಬಾಯಲ್ಲಿ ಇದೇ ಮಾತು. ಅಂಗನವಾಡಿ, ಶಾಲೆಗಳ ಅಕ್ಕ ಪಕ್ಕ ಭಯದ ವಾತಾವರಣ. ಯಾರಾದ್ರೂ ಬಂದು ನಮ್ ಮಗನನ್ನ ಹೊತ್ತೊಯ್ದರೆ ಗತಿ ಏನು? ನಮ್ಮ ಮಕ್ಕಳನ್ನು ಕದ್ದು ಏನಾದ್ರೂ ಮಾಡಿದರೆ ಗತಿ ಏನು? ಇರೋಕೆ ಒಬ್ಬ ಮಗ. ಇರೋಕೊಬ್ಬ ಮಗಳು. ನಮ್ ಜೀವನದ ಜೋತಿ ನಮ್ ಮಕ್ಕಳು ಏನ್ ಮಾಡೋದು ಅಂತ ಜನ ನಾನಾ ರೀತಿ ಯೋಚನೆ ಮಾಡ್ತಾ ಇದ್ದಾರೆ. ವಾಟ್ಸಾಪ್‌ನಲ್ಲಿ ಎಲ್ಲೋ ನಡೆದ ಮಕ್ಕಳ ಕಳ್ಳತನ, ಶವ, ಪ್ರಾಣಿ ತಿಂದು ಬಿಟ್ಟ ಮಕ್ಕಳ ದೇಹದ ಫೋಟೊ, ವಿಡಿಯೋಗಳು ಎಲ್ಲರ ಮೊಬೈಲ್‌ನಲ್ಲಿ ಹರಿದಾಡ್ತಿದೆ. ಏ ಮಕ್ಕಳ ಕಳ್ಳರಂತಪ್ಪಾ.. ಎಪ್ಪಾ ಕಣ್ಣು, ಕಿಡ್ನಿ ಕದೀತಾರಂತೆ. ನಮ್ ಮಕ್ಕಳನ್ನು ಹೊರಗೆ ಬಿಡಲ್ಲ ಅಂತ ಜನ ತಮ್ಮ ತಮ್ಮಲ್ಲೇ ಮಾತಾಡಿಕೊಳ್ತಿದ್ದಾರೆ.
undefined
ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಕಳ್ಳ ಅಂತ ತಿಳಿಯುತ್ತಿರೋ ಜನ: ಜಿಲ್ಲೆಯ ಹಲವೆಡೆ ಕೂದಲು- ಪಿನ್ನು, ಆಟಿಗೆ ಸಾಮಾನು, ಸಣ್ಣ ಪುಟ್ಟ ದಿನ ಬಳಕೆ ವಸ್ತುಗಳು, ಉಪ್ಪಿನ ಕಾಯಿ ಮಾರಾಟ ಮಾಡೋರು, ಬಂಬಾಯಿ ಮಿಠಾಯಿ ಮಾರೋರು ಸ್ವಲ್ಪ ಅನುನಾನ ಬರೋ ರೀತಿ ನಡೆದುಕೊಂಡ್ರೂ ಏಟು ಗ್ಯಾರಂಟಿ. ಯಾವನ್ಲೇ ನೀನು ಮಗನ? ಎಲ್ಲಿಂದ ಬಂದಿ..? ಹಾಕ್ರಲೇ ಅವನಿಗೆ, ಅಂತ ಆಳಿಗೊಂದು ಏಟು ಹಾಕ್ತಿದ್ದಾರೆ ಜನ.
ರಾಣೆಬೆನ್ನೂರಿನ ಇಸ್ಲಾಂಪುರ ಓಣಿ ಅಂಗನವಾಡಿ ಸಮಸ್ಯೆ ಪರಿಹರಿಸಿದ BIG 3
ಸೆಲ್ಫಿ ತಗೊಂಡ ಬಂಬಾಯಿ ಮಿಠಾಯಿ ಹುಡುಗನಿಗೆ ಓಡಾಡಿಸಿ ಹೊಡೆದ ಜನ: ಕಳೆದ ಒಂದೆರಡು ದಿನಗಳ ಹಿಂದೆಯಷ್ಟೆ ಆದ ಘಟನೆ. ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಮೊದಲೇ ಮಕ್ಕಳ ಕಳ್ಳರ ಭಯದಲ್ಲಿದ್ದ ಜನ ಅಮಾಯಕ ಹುಡುಗನೊಬ್ಬನನ್ನು ಥಳಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಈ ಯುವಕ ಹೊಟ್ಟೆ ಪಾಡಿಗಾಗಿ ಬಂಬಾಯಿ ಮಿಠಾಯಿ ಮಾರ್ತಾನೆ. ಹೊಸ ಮೊಬೈಲ್ ಖರೀದಿಸಿದ್ದ ಹುಡುಗ ಬಂಬಾಯಿ ಮಿಠಾಯಿ ಮಾರುವಾಗ ಖುಷಿಯಿಂದ ಒಂದು ಸೆಲ್ಪಿ ತಗೊಂಡಿದ್ದ. ಇದನ್ನು ಗಮನಿಸಿದ ಗ್ರಾಮಸ್ಥರು, ಏ ಮಗನಾ ಸೆಲ್ಫಿ ಯಾಕ ತಗೊಂಡಿ? ಅಂತ ಹಿಡಿದು ಥಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಯುವಕನನ್ನು ಸ್ಟೇಷನ್‌ಗೆ ಕರೆದೊಯ್ದು ವಿಚಾರಿಸಿ ಮಕ್ಕಳ ಕಳ್ಳ ಅಲ್ಲ ಅಂತ ಖಚಿತ ಪಡಿಸಿಕೊಂಡು ಬಿಟ್ಟು ಕಳಿಸಿದ್ದಾರೆ.
ಅಮಾಯಕ ಹೆಣ್ಣು ಮಗಳಿಗೆ ಕಪಾಳ ಮೋಕ್ಷ: ಸವಣೂರು ತಾಲೂಕು ತವರು ಮೆಳ್ಳಿ ಹಳ್ಳಿ ಗ್ರಾಮದಲ್ಲಿ ಅಪರಿಚಿತ ಹೆಣ್ಣುಮಗಳೊಬ್ಬಳನ್ನು ಮಕ್ಕಳ ಕಳ್ಳಿ ಎಂದು ಮನಸೋ ಇಚ್ಛೆ ಥಳಿಸಿದ್ದಾರೆ. ಎಷ್ಟು ಕೇಳಿದರೂ ತನ್ನ ಹೆಸರು ಹೇಳದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ ಗ್ರಾಮಸ್ಥರು.
ವ್ಯಕ್ತಿಗೆ ರಕ್ತ ಬರೋ ಹಾಗೆ ಹೊಡೆದರು: ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿಯೂ ವ್ಯಕ್ತಿಯೊಬ್ಬನನ್ನು ಹಿಡಿದು ಕಳ್ಳ ಎಂದು ಭಾವಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರ ಏಟಿಗೆ ಅಪರೀಚಿತ ವ್ಯಕ್ತಿಗೆ ಮುಖದ ಮೇಲೆ ರಕ್ತ ಬಂದಿದೆ. ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಕೂಡ ಮಕ್ಕಳ ಕಳ್ಳನೆಂದು ವ್ಯಕ್ತಿಯೊಬ್ಬನಿಗೆ ಗ್ರಾಮಸ್ಥರು ಥಳಿಸಿರುವ ವಿಡಿಯೋ ಹರಿದಾಡುತ್ತಿದೆ. ಆತನಲ್ಲಿದ್ದ ಪೌಡರ್‌ಅನ್ನು ಆತನಿಗೇ ಮೂಸಲು ಹೇಳಿದಾಗ ಮೂರ್ಛೆ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲೂ ಮಕ್ಕಳ ಕಳ್ಳರು ಬಂದಿರುವ ವದಂತಿ ಹಬ್ಬಿದೆ. ಇದೇ ರೀತಿಯ ಘಟನೆಗಳಿಂದ ಜಿಲ್ಲಾದ್ಯಂತ ಮಕ್ಕಳ ಕಳ್ಳರ ಭಯ ಹೆಚ್ಚಿದೆ.
ವದಂತಿಗೆ ಕಿವಿಗೊಡದಂತೆ ಎಸ್ಪಿ ಹನುಮಂತರಾಯ ಮನವಿ: ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಯಾವುದೇ ಘಟನೆ ನಡೆದಿಲ್ಲ. ಮಕ್ಕಳ ಕಳ್ಳರ ವದಂತಿ ಬಗ್ಗೆ ಸಾರ್ವಜನಿಕರು ಕಿವಿಗೊಡಬಾರದು. ಆದರೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ತವರಮೆಳ್ಳಿಹಳ್ಳಿ ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, ಮಹಿಳೆಯೊಬ್ಬಳು ಮಕ್ಕಳನ್ನು ಕಳ್ಳತನ ಮಾಡಲು ಬಂದಿದ್ದಾಳೆ ಎಂದು ತಿಳಿದು ಗ್ರಾಮಸ್ಥರು ಕೂಡಿ ಹಾಕಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಗಮನಕ್ಕೆ ಬಂದಿದೆ.
ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘಿಸುವುದರಿಂದ ಹೆಚ್ಚು ಅಪಘಾತ
ಈ ಬಗ್ಗೆ ಗ್ರಾಮದಲ್ಲಿ ವಿಚಾರಿಸಿದಾಗ, ಆ ಮಹಿಳೆಯು ಗ್ರಾಮದಲ್ಲಿ ಒಬ್ಬ ಬಾಲಕನಿಗೆ ತಿನಿಸು ನೀಡಿದ್ದು, ಅದನ್ನು ಬಾಲಕ ತಿನ್ನುತ್ತಿದ್ದಾಗ ಗ್ರಾಮಸ್ಥರು ಆಗಮಿಸಿ ಕೂಡಿ ಹಾಕಿ ಥಳಿಸಿದ್ದಾರೆ. ಮಹಿಳೆಯನ್ನು ವಿಚಾರಣೆ ಮಾಡಿದಾಗ ಆಕೆಯಿಂದ ಸಮರ್ಪಕ ಉತ್ತರ ಬಂದಿಲ್ಲ. ಆಕೆ ಮಾನಸಿಕ ಅಸ್ವಸ್ಥೆಯಂತೆ ಕಂಡುಬಂದಿದೆ. ಬೇರೆ ಬೇರೆ ಹೆಸರನ್ನು ಹೇಳುತ್ತಿದ್ದಾಳೆ. ಆಕೆಯನ್ನು ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದು, ಮಡಿವಾಳದಲ್ಲಿ ಆಕೆಯ ಇರುವಿಕೆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದಂತಹ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂತಹ ಘಟನೆ, ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಿಲ್ಲ. ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.