Bengaluru: ಶಾಲೆಯಿಂದ ಬರುವಾಗ ದಾರಿ ತಪ್ಪಿದ ಬಾಲಕ: ಎಎಸ್‌ಐ ರಕ್ಷಣೆ

By Govindaraj SFirst Published Nov 9, 2022, 12:43 PM IST
Highlights

ದಾರಿ ತಪ್ಪಿ ಮನೆಯ ವಿಳಾಸ ಗೊತ್ತಿಲ್ಲದೆ ಅಳುತ್ತಾ ನಿಂತಿದ್ದ ಆರು ವರ್ಷದ ಬಾಲಕನ್ನು ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌(ಎಎಸ್‌ಐ) ಬೆಟ್ಟೇಗೌಡ ಹಾಗೂ ಹೊಯ್ಸಳ ವಾಹನದ ಸಿಬ್ಬಂದಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ್ದಾರೆ.
 

ಬೆಂಗಳೂರು (ನ.09): ದಾರಿ ತಪ್ಪಿ ಮನೆಯ ವಿಳಾಸ ಗೊತ್ತಿಲ್ಲದೆ ಅಳುತ್ತಾ ನಿಂತಿದ್ದ ಆರು ವರ್ಷದ ಬಾಲಕನ್ನು ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಬೆಟ್ಟೇಗೌಡ ಹಾಗೂ ಹೊಯ್ಸಳ ವಾಹನದ ಸಿಬ್ಬಂದಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ್ದಾರೆ.

ಅಂಜನಾಪುರದ ಪ್ರಸಾದ್‌ (6) ತಪ್ಪಿಸಿಕೊಂಡಿದ್ದ ಬಾಲಕ. ಅಂಜನಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಂಗಳವಾರ ಸಂಜೆ ಶಾಲೆ ಬಿಟ್ಟು ಬಳಿಕ ಮನೆಗೆ ಬರಲು ಅಂಜನಾಪುರದಲ್ಲಿ ಬಿಎಂಟಿಸಿ ಬಸ್‌ ಹತ್ತಿದ್ದಾನೆ. ಮುಂದಿನ ನಿಲ್ದಾಣದಲ್ಲಿ ಇಳಿಯುವ ಬದಲು ಬನಶಂಕರಿ ಬಸ್‌ ನಿಲ್ದಾಣದಲ್ಲಿ ಇಳಿದಿದ್ದಾನೆ. ಈ ವೇಳೆ ಹೊಸ ಜಾಗ ಕಂಡು ಹೆದರಿದ ಪ್ರಸಾದ್‌, ಮನೆಗೆ ಹೋಗಲು ದಾರಿ ಗೊತ್ತಾಗದೆ ಅಳುತ್ತಾ ನಿಂತಿದ್ದಾನೆ. ಅಷ್ಟರಲ್ಲಿ ಸಮೀಪದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಬನಶಂಕರಿ ಸಂಚಾರ ಠಾಣೆ ಎಎಸ್‌ಐ ಬೆಟ್ಟೇಗೌಡ ಅವರು ಬಾಲಕನ ಬಳಿ ಬಂದು ಸಮಾಧಾನಪಡಿಸಿ ಪೂರ್ವ ಪರ ವಿಚಾರಿಸಿದ್ದಾರೆ.

ಬಾಯನ್ನೇ ಬಂಡವಾಳವಾಗಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದು: ಸಿ.ಎಂ.ಇಬ್ರಾಹಿಂ

ಈ ವೇಳೆ ಬಾಲಕ ಪ್ರಸಾದ್‌ ನಮ್ಮ ಮನೆ ಅಂಜನಾಪುರದಲ್ಲಿದೆ. ನಮ್ಮ ತಂದೆ ಬಿಎಂಟಿಸಿ ಚಾಲಕ ಎಂದು ಹೇಳಿದ್ದಾನೆ. ಈ ವೇಳೆ ಹೊಯ್ಸಳ ವಾಹನವೂ ಬಂದಿದೆ. ದಾರಿ ತಪ್ಪಿ ಗಾಬರಿಗೊಂಡಿದ್ದ ಬಾಲಕನಿಗೆ ಎಎಸ್‌ಐ ಬೆಟ್ಟೇಗೌಡ ಅವರು ಇಡ್ಲಿ ತಿನ್ನಿಸಿ, ಟೀ ಕುಡಿಸಿ ಧೈರ್ಯ ತುಂಬಿದ್ದಾರೆ. ಪೋಷಕರ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಬಳಿಕ ಹೊಯ್ಸಳ ವಾಹನದಲ್ಲಿ ಬಾಲಕ ಪ್ರಸಾದ್‌ನನ್ನು ಕೂರಿಸಿಕೊಂಡು ಅಜನಾಪುರಕ್ಕೆ ತೆರಳಿದ್ದಾರೆ. ಆದರೆ, ಬಾಲಕನಿಗೆ ಮನೆ ಎಲ್ಲಿ ಎನ್ನುವುದು ಗೊಂದಲವಾಗಿದೆ.

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ಅಷ್ಟರಲ್ಲಿ ಬಾಲಕನ ಮನೆಯ ಪಕ್ಕದ ಮನೆಯ ಫೋಟೋಗ್ರಾಫರ್‌ಗೆ ಬಾಲಕ ತಪ್ಪಿಸಿಕೊಂಡಿರುವ ವಿಚಾರ ಗೊತ್ತಾಗಿದೆ. ಬಳಿಕ ಅಂಜನಾಪುರದ ಬಸ್‌ ನಿಲ್ದಾಣಕ್ಕೆ ಬಂದು ಬಾಲಕನ ಗುರುತು ಪತ್ತೆಹಚ್ಚಿದ್ದಾರೆ. ಬಳಿಕ ಎಎಸ್‌ಐ ಬೆಟ್ಟೇಗೌಡ ಅವರು ಬಾಲಕನ ತಂದೆಯ ಮೊಬೈಲ್‌ ಸಂಖ್ಯೆ ಪಡೆದು ಸಂಪರ್ಕಿಸಿ ಮಗ ತಪ್ಪಿಸಿಕೊಂಡಿರುವ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಕರೆಸಿಕೊಂಡು ಬಾಲಕನ್ನು ಸುರಕ್ಷಿತವಾಗಿ ತಂದೆಗೆ ಒಪ್ಪಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

click me!