Latest Videos

Chitradurga; ಆಶ್ರಯ ಮನೆ ಯೋಜನೆಯಲ್ಲಿ ಗೋಲ್ ಮಾಲ್, ಕವಾಡಿಗರ ಹಟ್ಟಿಯಲ್ಲಿ ಪ್ರತಿಭಟನೆ

By Gowthami KFirst Published Jul 25, 2022, 7:46 PM IST
Highlights

ಚಿತ್ರದುರ್ಗದ  ಕವಾಡಿಗರಹಟ್ಟಿ ಬಡಾವಣೆಯ ಆಶ್ರಯ ಮನೆ ಯೋಜನೆಯಲ್ಲಿ ಗೋಲ್ ಮಾಲ್ ಆರೋಪ ಕೇಳಿಬಂದಿದ್ದು,  ಅರ್ಹ ಫಲಾನುಭವಿಗಳಿಗೆ ಮನೆ ನೀಡದೇ, ಅನಧಿಕೃತವಾಗಿ ಹಂಚಿಕೆ ಮಾಡಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.25): ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎಂಬ ಮಾತೊಂದಿದೆ. ಕೋಟೆ ನಗರಿಯ ಕವಾಡಿಗರಹಟ್ಟಿ ಬಡಾವಣೆಯ ರಾಜೀವ ಗಾಂಧಿ ಆಶ್ರಯ ಯೋಜನೆಯ ಅರ್ಹ ಫಲಾನುಭವಿಗಳಿಗೆ ಈಗ ಅದೇ ಅನುಭವವಾಗಿದೆ.  ಕೋಟೆನಗರಿ ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿ ನಿವಾಸಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಲ್ಲಿ 124 ಜನ ರಾಜೀವ ಗಾಂಧಿ ಆಶ್ರಯ ಯೋಜನೆಯಡಿ ನಗರಸಭೆಯಿಂದ ಮನೆಯ ಹಕ್ಕು ಪತ್ರಗಳನ್ನು ಪಡೆದುಕೊಂಡಿದ್ದಾರೆ. ಆದರೆ ಹೀಗೆ ಹಕ್ಕುಪತ್ರ ವಿತರಿಸಲಾದ ಆಶ್ರಯ ಯೋಜನೆಯ ನಿಗದಿತ ನಂಬರಿನ ಮನೆಗಳಲ್ಲಿ ಈಗಾಗಲೇ ಬೇರೆಯವರು ವಾಸಿಸುತ್ತಿದ್ದಾರೆ. ಅವರನ್ನು ಖಾಲಿ ಮಾಡಿಸಿ ನಮಗೆ ಮನೆ ನೀಡಬೇಕಾದವರು ಬರೀ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿದ್ದಾರೆ. ಹಣ ನೀಡಿದ ಫಲಾನುಭವಿಗಳು ಇದರಿಂದ ಪರದಾಡುವಂತಾಗಿದೆ. ಅತ್ತ ಹಣವೂ ಇಲ್ಲ, ಇತ್ತ ಮನೆಯೂ ಇಲ್ಲ ಎಂಬ ಅಳಲು ನೈಜ ಫಲಾನುಭವಿಗಳದ್ದು. ಕೆಲವರು ಹಣ ಪಡೆದು ಅವರನ್ನು ಆಶ್ರಯ ಯೋಜನೆ ಮನೆಗಳಲ್ಲಿ ವಾಸಿಸಲು ಬಿಟ್ಟಿದ್ದು, ಕೇವಲ ಕಾಟಾಚಾರಕ್ಕೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ.

ಈ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳ ತಂಡ ಹಿಂದೆಯೇ ಭೇಟಿ ನೀಡಿ ಅಕ್ರಮ ನಡೆದಿರುವುದನ್ನು ಪರಿಶೀಲಿಸಿ, ಮನೆ ಹಂಚಿಕೆ ಮಾಡಬೇಕೆಂದು ತಿಳಿಸಿದರು ಮಾಡಿಲ್ಲ ಎಂಬ ಆಕ್ರೋಶ ಅರ್ಹ ಫಲಾನುಭವಿಗಳದ್ದು. ಇನ್ನು ಆಶ್ರಯ ಯೋಜನೆ ಮನೆಗಾಗಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಅವರ ಅನುಯಾಯಿಗಳು ಹಣ ಸಂಗ್ರಹಿಸಿದ್ದು ಮನೆ ನೀಡದೆ, ಹಕ್ಕುಪತ್ರವನ್ನಷ್ಟೇ ನೀಡಿದ್ದಾರೆ ಎಂಬ ಆರೋಪ ಸಹ ಅರ್ಹ ಫಲಾನುಭವಿಗಳದ್ದು.

ಆಶ್ರಯ ಯೋಜನೆ ಮನೆಗೆ ಸಾಲಸೋಲ ಮಾಡಿ ಹಣ ತುಂಬಿದವರು ಈಗ ಪರಿತಪಿಸುವಂತಾಗಿದೆ. ನಿರ್ಗತಿಕರಿಗೆ ವಾಸಿಸಲು ಮನೆ ನಿರ್ಮಿಸಿ ಕೊಡಬೇಕಾದವರು ಇದೀಗ ಬರೀ ಹಕ್ಕುಪತ್ರ ನೀಡಿ ಭೌತಿಕವಾಗಿ ವಾಸಿಸಲು ಅನುಕೂಲ ಮಾಡಿಕೊಡುತ್ತಿಲ್ಲ. ಇದರ ಹಿಂದೆ ಅಕ್ರಮದ ವಾಸನೆಯಿದ್ದು, ಈ ಬಗೆಗೆ ನಗರಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳು ಜಾಣಮೌನ ವಹಿಸಿದ್ದಾರೆ. 124 ಮನೆಯಲ್ಲಿರುವವರನ್ನು ನಗರಸಭೆ ಅಧಿಕಾರಿಗಳು ಖಾಲಿ ಮಾಡಿಸಿ ಕಾರ್ಯವ್ಯಾಪ್ತಿಗೆ ಪಡೆದು ಮರುಹಂಚಿಕೆ ಮಾಡಬೇಕು. ಆದ್ರೆ ಈ ಕೆಲಸ ಮಾಡದೆ, ಹಕ್ಕುಪತ್ರ ನೀಡಿರುವುದು ನಿಯಮಾವಳಿಯ ಉಲ್ಲಂಘನೆ ಎಂಬುದು ಹೋರಾಟಗಾರರ ಆರೋಪ. ಕೂಡಲೇ ಅರ್ಹ 124 ಫಲಾನುಭವಿಗಳಿಗೆ ಆಶ್ರಯ ಯೋಜನೆಯ ಮನೆಗಳಲ್ಲಿ ವಾಸಿಸಲು ಅನುಕೂಲ ಮಾಡಿಕೊಡಬೇಕು ಆಗ್ರಹ ಅವರದ್ದು.

ಈ ಬಗ್ಗೆ ಇಂದು ಅರ್ಹ ಫಲಾನುಭವಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಹ ನಡೆಸಿದರು. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಇತ್ಯರ್ಥಪಡಿಸಬೇಕಾಗಿದೆ.

click me!