ದಾವಣಗೆರೆ ಆ.26: ಐದು ದಶಕದಿಂದ ಜಿಲ್ಲಾ ಕೇಂದ್ರಕ್ಕೆ ಕಗ್ಗಂಟಾಗಿದ್ದ ಇಲ್ಲಿನ ಅಶೋಕ ಚಿತ್ರ ಮಂದಿರ ಸಮೀಪದ ರೈಲ್ವೇ ಲೆವೆಲ್ ಕ್ರಾಸಿಂಗ್ 199ರ ಬಳಿ ಸುಮಾರು 7.20 ಕೋಟಿ ರು. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಕಾರ್ಯೋನ್ಮುಖವಾಗಿದ್ದು, ಆ.28ರಂದು ಸತತ 10 ತಾಸು ರೈಲ್ವೇ ಸಂಚಾರ ಬಂದ್ ಮಾಡಿ ಸಿಮೆಂಟ್ ಬಾಕ್ಸ್‌ಗಳನ್ನು ಅಳವಡಿಸಿ, ಕೆಳ ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸನ್ನದ್ಧವಾಗುತ್ತಿದೆ. ನಗರದ ಅಶೋಕ ಚಿತ್ರ ಮಂದಿರ ಸಮೀಪದ ರೈಲ್ವೇ ಕ್ರಾಸಿಂಗ್ ಬಳಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ರೈಲ್ವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆಳ ಸೇತುವೆ ನಿರ್ಮಾಣವಾಗುವ ಸ್ಥಳ ಪರಿಶೀಲಿಸಿದರು. ಅಲ್ಲದೇ, ತ್ವರಿತವಾಗಿ ಕಾಮಗಾರಿ ಕೈಗೊಳ್ಳುವ ಮೂಲಕ 5 ದಶಕಗಳ ಈ ರೈಲ್ವೇ ಗೇಟ್ ಸಮಸ್ಯೆಯಿಂದ ಜನರಿಗೆ ಮುಕ್ತಿ ನೀಡಬೇಕು ಎಂದು ಸೂಚಿಸಿದರು. ರೈಲುಗಳ ಸಂಚಾರ ನಿಲುಗಡೆ:
ಕಾಮಗಾರಿ ವಿಳಂಬಕ್ಕೆಂದೇ ಹಣ ಕೊಟ್ಟಿದ್ದಾರಾ?: ಸಂಸದ ಸಿದ್ದೇಶ್ವರ
ಅಶೋಕ ಗೇಟ್ ಬಳಿ ಲಘು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕೆಳ ಸೇತುವೆ ನಿರ್ಮಾಣಕ್ಕೆ ಇದೀಗ ಸಿದ್ಧತೆ ನಡೆದಿದ್ದು, ಆ.28ರಂದು ಸತತ 10 ಗಂಟೆ ಕಾಲ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ನಿಲುಗಡೆ ಮಾಡಿ, ಕೆಳ ಸೇತುವೆ ನಿರ್ಮಾಣ ಕಾರ್ಯವನ್ನು ರೈಲ್ವೇ ಇಲಾಖೆ ಪೂರ್ಣಗೊಳಿಸಲಿದೆ. ಕೆಳ ಸೇತುವೆ ನಿರ್ಮಾಣಕ್ಕೆ ಪೂರಕವಾಗಿ ಸಾಗಿರುವ ಪೂರ್ವ ಸಿದ್ಧತಾ ಕಾಮಗಾರಿಯನ್ನು ಸಂಸದ ಡಾ.ಸಿದ್ದೇಶ್ವರ ವೀಕ್ಷಿಸಿದರು. ರೈಲ್ವೇ ಇಲಾಖೆ ಕಾರ್ಯ ಪಾಲಕ ಅಭಿಯಂತರ ಮಂಜುನಾಥ, ದೊಡ್ಡಬಾತಿ ಗ್ರಾಪಂ ಅಧ್ಯಕ್ಷ ದೊಗ್ಗಳ್ಳಿ ವೀರೇಶ, ಬಿಜೆಪಿ ಯುವ ಮುಖಂಡ ಅತಿಥ್ ಅಂಬರಕರ್ ಇತರರಿದ್ದರು.
ಸರ್ಕಾರಗಳ ಮಟ್ಟದಲ್ಲಿ ಸತತ ಪ್ರಯತ್ನ:ಅಶೋಕ ಚಿತ್ರ ಮಂದಿರ ಬಳಿ ಪ್ರತಿ 30-40 ನಿಮಿಷಕ್ಕೊಮ್ಮೆ ರೈಲ್ವೇ ಗೇಟ್ ಹಾಕುತ್ತಿದ್ದು, ಪ್ಯಾಸೆಂಜರ್, ಎಕ್ಸಪ್ರೆಸ್ ರೈಲು, ಸರಕು ಸಾಗಾಣಿಕೆ ರೈಲು, ಇಂಜಿನ್‌ಗಳ ಸಂಚಾರ ಹೀಗೆ ಸುಮಾರು 30-35ಕ್ಕೂ ಹೆಚ್ಚು ಸಲ ಗೇಟ್ ಹಾಕಲಾಗುತ್ತಿತ್ತು. ಸದ್ಯಕ್ಕೆ ಸಮಸ್ಯೆಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಕೆಳ ಸೇತುವೆ ನಿರ್ಮಿಸಲು 35ಕೋಟಿ ರು. ಅನುದಾನ ನೀಡಲು ಬಜೆಟ್‌ನಲ್ಲಿ ರೈಲ್ವೇ ಇಲಾಖೆ ಅವಕಾಶ ಕಲ್ಪಿಸಿತ್ತು. ಸಮಸ್ಯೆ ಪರಿಹಾರಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪ್ರಯತ್ನಿಸಿದ್ದರು. ಕೊರೋನಾ ಸಂಕಷ್ಟದಲ್ಲೂ ವಿಶೇಷ ರೈಲಿನಲ್ಲಿ ಆಗಿನ ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರ ಕರೆಸಿ, ಪರಿಶೀಲನೆ ಮಾಡಿಸಿದ್ದರು. ಹೀಗೆ ಸತತ ಪ್ರಯತ್ನಕ್ಕೆ ಒಂದಿಷ್ಟುಫಲ ಸಿಕ್ಕಂತಾಗಿದೆ.
ಖಾಸಗಿ ಜಾಗದ ಮಾಲೀಕರ ಮನವೊಲಿಸುವ ಕೆಲಸ: ಈಗಿರುವ ರೈಲ್ವೇ ಗೇಟ್‌ನ್ನು ರೈಲ್ವೆ ಇಲಾಖೆ ತೆರವುಗೊಳಿಸಿ, ಅಲ್ಲಿ ಲಿಮಿಟೆಡ್ ಹೈಟ್ ಸಬ್ ವೇ ಹಾಗೂ ಅಲ್ಲಿಂದ 800 ಮೀಟರ್ ದೂರದಲ್ಲಿ ಪುಷ್ಪಾಂಜಲಿ ಚಿತ್ರ ಮಂದಿರ ಎದುರು ಎರಡು ವೆಂಟ್‌ವುಳ್ಳ ಕೆಳ ಸೇತುವೆ ನಿರ್ಮಿಸಲು ರೈಲ್ವೇ ಇಲಾಖೆ ಅನುದಾನ ನೀಡಲು ಅವಕಾಶ ಕಲ್ಪಿಸಿದೆ. ಕೆಳ ಸೇತುವೆ ನಿರ್ಮಾಣದ ನಂತರ ಸೇತುವೆಗೆ ಸಂಪರ್ಕ ಕಲ್ಪಿಸಲು ರೈಲ್ವೇ ಹಳಿ ಮತ್ತೊಂದು ಮಗ್ಗಲಲ್ಲಿ ಸಮಾನಾಂತರ ರಸ್ತೆ ನಿರ್ಮಿಸಬೇಕು. ಸಮನಾಂತರ ರಸ್ತೆ ನಿರ್ಮಿಸಲು ಅಲ್ಲಿರುವ ಖಾಸಗಿ ಜಮೀನು ಬಳಸಬೇಕು. ಆದರೆ, ಸದ್ಯ ಖಾಸಗಿ ಜಾಗದ ಮಾಲೀಕರಾದ 2-3 ಕುಟುಂಬದವರನ್ನು ಒಪ್ಪಿಸುವ ಕೆಲಸವೂ ಮತ್ತೊಂದು ಕಡೆ ನಡೆದಿದೆ. ಖಾಸಗಿ ಜಮೀನು, ಜಾಗದ ಮಾಲೀಕರು ಸಮ್ಮತಿಸಿದರೆ ಸಮನಾಂತರ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವಂತೆ ಮನವೊಲಿಸುವ ಕೆಲಸವೂ ಸಾಗುತ್ತಿದೆ. ಹಾಗೊಂದು ವೇಳೆ ಜಾಗ ಸಿಕ್ಕಿದ್ದೇ ಆದರೆ, ರೈಲ್ವೇ ಹಳಿಗೆ ಸಮನಾಂತರವಾಗಿ ಅಶೋಕ ಚಿತ್ರ ಮಂದಿರ ರಸ್ತೆಯಿಂದ ಈರುಳ್ಳಿ ಮಾರುಕಟ್ಟೆಸೇತುವೆವರೆಗೆ 60 ಅಡಿ ರಸ್ತೆ ನಿರ್ಮಿಸಬೇಕು. ಆ ಕೆಲಸವನ್ನು ಪಾಲಿಕೆ ಅಥವಾ ದೂಡಾ ಮಾಡಬೇಕಾಗುತ್ತದೆಂಬುದು ಅಷ್ಟೇ ಸ್ಪಷ್ಟ.
ದಾವಣಗೆರೆಯಲ್ಲಿ ಇಳಿದ, ಯಾದಗಿರಿಯಲ್ಲಿ ಏರಿದ ಪೆಟ್ರೋಲ್ ಬೆಲೆ: ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ವಿವರ ಹೀಗಿದೆ
ಗೇಟ್ ಸಮಸ್ಯೆಗೆ ಮುಕ್ತಿ: ಡಾ.ಸಿದ್ದೇಶ್ವರ ಹರ್ಷ: ದಾವಣಗೆರೆ: ನಾಲ್ಕೈದು ದಶಕದಿಂದ ಸಮಸ್ಯೆಯಾಗಿದ್ದ ಅಶೋಕ ಚಿತ್ರ ಮಂದಿರ ಬಳಿಯ ರೈಲ್ವೇ ಗೇಟ್ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ನಡೆಯುತ್ತಿದೆ. ಲಿಮಿಟೆಡ್ ಹೈಟ್ ಸಬ್ ವೇ ತಾತ್ಕಾಲಿಕವಾಗಿ ನಿರ್ಮಾಣವಾಗುತ್ತಿದ್ದು, ಇಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರಲಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಳ ಸೇತುವೆ ನಿರ್ಮಾಣ ಕಾರ್ಯ ಪೂರ್ಣವಾದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಕೆಳ ಸೇತುವೆ ನಿರ್ಮಾಣಕ್ಕೆ ಎಲ್ಲಾ ಪೂರ್ವ ಸಿದ್ಧತೆಯನ್ನು ರೈಲ್ವೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡಿದ್ದಾರೆ. ಇನ್ನು ರೈಲ್ವೇ ಹಳಿಯುದ್ದಕ್ಕೂ ರಸ್ತೆ ನಿರ್ಮಿಸಿ, ನೀರುಳ್ಳಿ ಮಾರುಕಟ್ಟೆಬಳಿ ಸೇತುವೆಗೆ ಬಳಿ ವಾಹನ ಸಾಗುವಂತೆ ವ್ಯವಸ್ಥೆ ಮಾಡುವ ಕೆಲಸವೂ ಶೀಘ್ರವೇ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.