ಗಾಂಧೀಜಿ ಅವರ ಆಶಯದಂತೆ ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ನಂಜುಂಡಸ್ವಾಮಿ ತಿಳಿಸಿದರು.
ರಾವಂದೂರು : ಗಾಂಧೀಜಿ ಅವರ ಆಶಯದಂತೆ ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ನಂಜುಂಡಸ್ವಾಮಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಜನ್ಮಶತಮಾನೋತ್ಸವ ವರ್ಷದ ಪ್ರಯುಕ್ತ 1969ರ ಸೆ. 24ರಲ್ಲಿ ಆರ್ಥಿಕ ತಜ್ಞರೂ, ಕೇಂದ್ರದ ಮಾಜಿ ಶಿಕ್ಷಣ ಮಂತ್ರಿಗಳೂ ಆಗಿದ್ದ ಡಾ.ವಿ.ಕೆ.ಆರ್.ವಿ. ರಾವ್ ಅವರಿಂದ ರಾಷ್ಟ್ರೀಯ ಸೇವಾ ಯೋಜನೆಯು ಅಧಿಕೃತವಾಗಿ ಉದ್ಘಾಟನೆ ಆಯಿತು ಎಂದರು.
ಈಗಾಗಲೆ ನಾಲ್ಕೂವರೆ ದಶಕವನ್ನು ದಾಟಿರುವ ಯೋಜನೆಯು ದೇಶದಾದ್ಯಂತ ಸಾವಿರಾರು ಸ್ವಯಂ ಸೇವಕರು ಸಮಾಜೋದ್ಧಾರಕ ಕಾರ್ಯಕ್ರಮ ನಡೆಸಿದ್ದಾರೆ. ಗಾಂಧೀಜಿಯವರ ಜೀವನ ಸಂದೇಶವೆಲ್ಲಾ ಸೇವೆಗೆ ಸಂಬಂಧಿಸಿದ್ದು, ಸೇವೆ ಇಲ್ಲದ ಜೀವನ ಅದು ಜೀವನವೇ ಅಲ್ಲ. ಬೇರೆಯವರಿಗಾಗಿ ಬದುಕಿರುವವರು ಮಾತ್ರ ಬದುಕಿದಂತೆ, ಉಳಿದವರು ಬದುಕಿದ್ದರೂ ಸತ್ತಂತೆ ಎಂದು ಅವರು ಹೇಳಿದರು.
ಗಾಂಧೀಜಿ ಅವರ ಆಶಯದಂತೆ ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ರಾಷ್ಟ್ರ ಪ್ರಗತಿ ಆಗಬೇಕಾದರೆ ನಮ್ಮ ಯುವಜನಾಂಗ ಅದರಲ್ಲಿಯೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿತು ಬದುಕಿನೊಡನೆ ನೇರ ಸಂಪರ್ಕವನ್ನಿಟ್ಟುಕೊಳ್ಳಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಕೆ.ಎನ್. ಶಿವಶಂಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರವೂ ಸೇವೆ, ಅನುಕಂಪದ ಸಾರ್ಥಕ ಜೀವಿಯಾಗಬೇಕು. ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎರಡು ವರ್ಗ ಅಂದರೆ ಬಡ ಮತ್ತು ಶ್ರೀಮಂತ ವಿದ್ಯಾರ್ಥಿಗಳಿರುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಶ್ರಮದ ಬದುಕಿನ ಅನುಭವವಿರುತ್ತದೆ. ಆದರೆ ಶ್ರೀಮಂತ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದಾಗ ಇವರಿಬ್ಬರ ಮಿಶ್ರಣದಿಂದ ಸಮಾನತಾ ಭಾವನೆ ಮೂಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ವೇಳೆ ಎನ್.ಎಸ್.ಎಸ್ ಶಿಬಿರಾಧಿಕಾರಿ ರವಿ, ಉಪನ್ಯಾಸಕ ಲಕ್ಷ್ಮಿಕಾಂತ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಮೇಶ್, ಸುಭಾಷ್‌ಚಂದ್ರ, ಗಣೇಶ್, ಗಂಗಾಧರ್, ಶಶಿಕಿರಣ್, ನಂದಿನಿ, ಪ್ರಮೋದ್ ಮೊದಲಾದವರು ಇದ್ದರು.