ಕೊಪ್ಪಳ: ಮಹಾದಾಸೋಹದಲ್ಲಿ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ ಬಳಕೆ

Published : Jan 31, 2025, 11:20 AM IST
ಕೊಪ್ಪಳ: ಮಹಾದಾಸೋಹದಲ್ಲಿ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ ಬಳಕೆ

ಸಾರಾಂಶ

ಮಹಾದಾಸೋಹದಲ್ಲಿ ನಿತ್ಯವೂ ಸಾವಿರಾರು ಜನರು ಕೆಲಸ ಮಾಡಿದ್ದಾರೆ. ಅಡುಗೆ ಮಾಡಲು ಮುತ್ತು ಬಡಿಸಲು ಸೇರಿ ಬರೋಬ್ಬರಿ ಸಾವಿರಕ್ಕೂ ಅಧಿಕ ಭಕ್ತರು ಸೇವೆ ಮಾಡಿದ್ದಾರೆ. ಇವರ್ಯಾರು ಸಹ ಕೂಲಿಗಾಗಿ ಕೆಲಸ ಮಾಡಿಲ್ಲ. ಸೇವೆ ಮಾಡಿದ್ದಾರೆ.  

ಸೋಮರಡ್ಡಿ ಅಳವಂಡಿ 

ಕೊಪ್ಪಳ(ಜ.31):  205 ಕ್ವಿಂಟಲ್‌ ಜಿಲೇಬಿ, 108 ಕ್ವಿಂಟಲ್‌ ಬೂಂದಿ, 375 ಕ್ವಿಂಟಲ್ ಮಾದಲಿ, 12 ಕ್ವಿಂಟಲ್ ಶೇಂಗಾ ಹೋಳಿಗೆ, 8.5 ಕ್ವಿಂಟಲ್‌ ರವೆ ಉಂಡಿ, ಕರದಂಟು 20 ಕ್ವಿಂಟಲ್, 1 ಲಕ್ಷ ಕರ್ಚಿಕಾಯಿ (ಸಿಹಿತಿನಿಸು), 6 ಕ್ವಿಂಟಲ್ ಬೇಸನ್ ಉಂಡೆ ಸೇರಿದಂತೆ ಸಿಹಿ ತಿನಿಸುಗಳು ಬರೋಬ್ಬರಿ 800 ಕ್ವಿಂಟಲ್, 1200 ಕ್ವಿಂಟಲ್‌ ಅಕ್ಕಿಯ ಅನ್ನ, 100 ಕ್ವಿಂಟಲ್ ತರಕಾರಿ ಸೇರಿ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ, ಇದು, ಗವಿಸಿದ್ದೇಶ್ವರ ಜಾತ್ರಾಮಹೋತ್ಸವದ ನಿಮಿತ್ತ 21 ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಬಳಕೆಯಾಗಿರುವ ಆಹಾರದ ಲೆಕ್ಕಾಚಾರ.

ಹೀಗೆ ಹೇಳುತ್ತಾ ಹೋದರೇ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಕೆಜಿ ಲೆಕ್ಕದಲ್ಲಿ, ಎಡೆ ಲೆಕ್ಕದಲ್ಲಿ ಸಾವಿರಾರು ಭಕ್ತರು ಮಹಾದಾಸೋಹಕ್ಕೆ ಬಗೆ ಬಗೆ ತಿನಿಸು ತಂದುಕೊಟ್ಟಿದ್ದಾರೆ. ಅದ್ಯಾವುದನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಅಷ್ಟು ಬಳಕೆಯಾಗಿದ್ದು, ಈ ವರ್ಷದ ಮಹಾದಾಸೋಹದಲ್ಲಿ ಇದರ ಲೆಕ್ಕಾಚಾರದಲ್ಲಿ ಬರೋಬ್ಬರಿ 15-16 ಲಕ್ಷ ಭಕ್ತರು ಪ್ರಸಾದ ಸೇವನೆ ಮಾಡಿದ್ದಾರೆ ಎ೦ದು ಅಂದಾಜಿಸಲಾಗಿದೆ.

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆ ಮಹಾದಾಸೋಹಕ್ಕೆ 20 ಲಕ್ಷ ರೊಟ್ಟಿ!

ವಿವಿಧ ತಿನಿಸು ಸೇರಿ ಬರೋಬ್ಬರಿ 800 ಕ್ವಿಂಟಲ್ ಸಿಹಿ ತಿನಿಸು ಬಳಕೆಯಾಗಿದೆ. ಇನ್ನು 1200 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ. 100 ಕ್ವಿಂಟಲ್ ತರಕಾರಿ ಪಲ್ಯ ಮಾಡಲಾಗಿದೆ, 98 ಕೊಪ್ಪರಿಗೆ ಸಾಂಬಾರ್, 60 ಕ್ವಿಂಟಲ್ ಉಪ್ಪಿನಕಾಯಿ, 25 ಕ್ವಿಂಟಲ್ ಕೆಂಪುಚಟ್ಟಿ, 25 ಕ್ವಿಂಟಲ್ ಪುಡಿ ಚಟ್ಟಿ, 20 ಕೊಪ್ಪರಿಗೆ ಜುಣಕಾ, 10 ಕೊಪ್ಪರಿಗೆ ಬದನೇಕಾಯಿ ಪಲ್ಯ, 26 ಕೊಪ್ಪರಿಗೆ ಹೆಸರು ಬೇಳೆ ಪಲ್ಯ, ಜೊತೆಗೆ 20 ಲಕ್ಷ ರೊಟ್ಟಿ ಬಳಕೆಯಾಗಿವೆ. 8 ಕ್ವಿಂಟಲ್ ತುಪ್ಪ, 5 ಸಾವಿರ ಲೀಟರ್‌ಹಾಲು ಬಳಕೆಯಾಗಿದೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿದಾದ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ ಬಳಕೆಯಾಗಿದೆ. ಇದು ದಾಖಲೆಯ ಲೆಕ್ಕಾಚಾರ ಎಂದೇ ಹೇಳಲಾಗುತ್ತದೆ.

15 ಸಾವಿರ ಜನರು: 

ಮಹಾದಾಸೋಹದಲ್ಲಿ ನಿತ್ಯವೂ ಸಾವಿರಾರು ಜನರು ಕೆಲಸ ಮಾಡಿದ್ದಾರೆ. ಅಡುಗೆ ಮಾಡಲು ಮುತ್ತು ಬಡಿಸಲು ಸೇರಿ ಬರೋಬ್ಬರಿ ಸಾವಿರಕ್ಕೂ ಅಧಿಕ ಭಕ್ತರು ಸೇವೆ ಮಾಡಿದ್ದಾರೆ. ಇವರ್ಯಾರು ಸಹ ಕೂಲಿಗಾಗಿ ಕೆಲಸ ಮಾಡಿಲ್ಲ. ಸೇವೆ ಮಾಡಿದ್ದಾರೆ.

ಬಂದಿದ್ದೆಲ್ಲವೂ ಬಳಕೆ: 

ಮಹಾದಾಸೋಹಕ್ಕೆ ಬಂದಿದ್ದೆಲ್ಲವೂ ಬಳಕೆಯಾಗಿದೆ. ಅಲ್ಪಸ್ವಲ್ಪ ಸಿಹಿತಿನಿಸು ಉಳಿದಿದ್ದು, ಈಗ ನಿತ್ಯವೂ ನಡೆಯುವ ದಾಸೋಹದಲ್ಲಿ ಬಳಕೆ ಮಾಡಲಾಗುತ್ತಿದೆ. ಮಹಾದಾಸೋಹವನ್ನು ಬಂದ್ ಮಾಡಿ, ದಾಸೋಹ ಪ್ರಾರಂಭಿಸಿದ್ದು. ಈಗಲೂ ಜಾತ್ರೆಯಂತೆಯೇ ಭಕ್ತರು ಆಗಮಿಸುತ್ತಿದ್ದಾರೆ. ಗುರುವಾರ ಬರೋಬ್ಬರಿ 30-40 ಸಾವಿರ ಭಕ್ತರು ಆಗಮಿಸಿದ್ದರು.

Koppal: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ, 10 ಲಕ್ಷಕ್ಕೂ ಅಧಿಕ ಜನ ಭಾಗಿ

25 ಲಕ್ಷ ಭಕ್ತ: 

ಜಾತ್ರಾ ಮಹೋತ್ಸವಕ್ಕೆ ಈ ವರ್ಷ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ ಎಂದು ಹೇಳಲಾಗುತ್ತದೆ. ರಥೋತ್ಸವದ ದಿನ 7-8 ಲಕ್ಷ ಭಕ್ತರು ಆಗಮಿಸಿದ್ದರು. ಮರು ದಿನ 2-3 ಲಕ್ಷ ಭಕ್ತರು ಆಗಮಿಸಿದ್ದರು. ಮೂರನೇ 1.5 ಲಕ್ಷ ಭಕ್ತರು ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಮೇಲೆ ನಿತ್ಯವೂ 70-80 ಸಾವಿರ ಭಕ್ತರು ಆಗಮಿಸುತ್ತಿದ್ದರು. ಇನ್ನು ರಜಾ ದಿನಗಳಲ್ಲಿ 1 -2 ಲಕ್ಷ ಭಕ್ತರು ಆಗಮಿಸುತ್ತಿದ್ದರು. ಹೀಗೆ ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.

2300 ಕ್ವಿಂಟಲ್‌ ಖಾದ್ಯ ಬಳಕೆಯಾಗಿದೆ ಎಂದು ಲೆಕ್ಕಾಚಾರ ಸಿಕ್ಕಿದ್ದು. ಇದು ಇನ್ನೂ ಅಧಿಕವಾಗಿಯೇ ಇದೆ. ಹೇಳದೆ ಕೊಟ್ಟು ಹೋಗುವವರು ಅನೇಕರು ಇದ್ದಾರೆ. ಇದ್ಯಾವುದು ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಮಹಾದಾಸೋಹ ಉಸ್ತುವಾರಿ ಪ್ರಕಾಶ ಚಿನಿವಾಲರ ತಿಳಿಸಿದ್ದಾರೆ.  

PREV
Read more Articles on
click me!

Recommended Stories

Kunigal hotel fire: ಹೆದ್ದಾರಿ ಬದಿಯ ಹೋಟೆಲ್‌ಗೆ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಸುಟ್ಟು ಕರಕಲು!
ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟ ನಿಷೇಧ; ಜಿಲ್ಲಾಧಿಕಾರಿ ಆದೇಶ, ಪೊಲೀಸರಿಂದ ಹೈ-ಅಲರ್ಟ್!