
ಶಿವಮೊಗ್ಗ(ನ.24): ಅಡಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಅಡಕೆಯಲ್ಲಿ ನಿಜವಾಗಿಯೂ ಕ್ಯಾನ್ಸರ್ ತಡೆಯವ ಅಂಶವಿದೆ ಎಂಬ ಸಂಶೋಧನಾ ವರದಿಯೊಂದು ಇಂಟರ್ ನ್ಯಾಶನಲ್ ಜರ್ನಲ್ ಆಫ್ ಫಾರ್ಮಸಿ ರಿಸರ್ಚ್ ಅಂಡ್ ಟೆಕ್ನಾಲಜಿ ಎನ್ನುವ ವೈಜ್ಞಾನಿಕ ನಿಯತಕಾಲಿಕದ 2026 ರ ಜನವರಿ-ಜೂನ್ ಸಂಪುಟದಲ್ಲಿ ಪ್ರಕಟಗೊಂಡಿದೆ.
ದಕ್ಷಿಣ ಕನ್ನಡದ ಅಳಿಕೆಯ ಜೆಡ್ಡು ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಗಳನ್ನೊಳಗೊಂಡ ಒಂದು ವಿಜ್ಞಾನಿಗಳ ತಂಡವು ಅಡಕೆ ಮತ್ತು ವೀಳ್ಯದೆಲೆಗಳನ್ನು ಪ್ರಧಾನವಾಗಿ ಬಳಸಿಕೊಂಡು ಮಾಡಿದ ಒಂದು ಸಮ್ಮಿಶ್ರಣವು ಕೂಡ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಪತ್ತೆ ಹಚ್ಚಿತ್ತು. ಈ ತಂಡವು ಚಿಕ್ಕಿಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಸಾಬೀತಾಗಿದ್ದು, ಇದರ ವಿವರವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ರಿಸರ್ಚ್ ಅಂಡ್ ಟೆಕ್ನಾಲಜಿ ಎನ್ನುವ ವೈಜ್ಞಾನಿಕ ನಿಯತಕಾಲಿಕೆಯು ತನ್ನ 2026 ರ ಜನವರಿ - ಜೂನ್ ಸಂಪುಟದಲ್ಲಿ ಪ್ರಕಟಿಸಿದೆ ಎಂದು ಮ್ಯಾಮ್ಕೋಸ್ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ತಿಳಿಸಿದ್ದಾರೆ.
ಈ ತಂಡವು ಮೊದಲಿಗೆ ಚಿಕ್ಕಿಲಿಗಳ ಕೆಳ ತುಟಿಗಳಲ್ಲಿ DMBA ಎನ್ನುವ ಕ್ಯಾನ್ಸರ್ ಕಾರಕ ರಾಸಾಯನಿಕ ಬಳಸಿ ಕ್ಯಾನ್ಸರ್ ಬರಿಸಿತು. ಬಳಿಕ ಅಡಕೆ ಮತ್ತು ವೀಳ್ಯದೆಲೆಗಳನ್ನು ಪ್ರಧಾನವಾಗಿ ಬಳಸಿ ಬೇರೆ 7 - 8 ಗಿಡಮೂಲಿಕೆಗಳನ್ನು ಕೂಡ ಸೇರಿಸಿ ತಯಾರಿಸಿದ ಪೊಗಸಾರಂ ಎನ್ನುವ ಒಂದು ಪಾಲಿಹರ್ಬಲ್ ಜೆಲ್ ಅನ್ನು ಅವುಗಳ ಮೇಲೆ ಪ್ರತಿದಿನದಂತೆ ಎಂಟು ವಾರಗಳ ತನಕ ಹಚ್ಚಿದಾಗ ಈ ಇಲಿಗಳ ಕ್ಯಾನ್ಸರ್ ಗಡ್ಡೆಗಳ ಗಾತ್ರ ಮತ್ತು ಅವುಗಳ ಪಸರಿಸುವಿಕೆ ಗಣನೀಯವಾಗಿ ಕಡಿಮೆಯಾಗಿತ್ತು. ಜೊತೆಗೆ ಈ ಜೆಲ್ ಸಾಮಾನ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಸಿಸ್ಪ್ಲಾಟಿನ್ ಎನ್ನುವ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿತ್ತು ಎಂಬುದು ಗೊತ್ತಾಯಿತು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿಈ ಸಂಬಂಧ ಇನ್ನಷ್ಟು ಹೆಚ್ಚಿನ ಸಂಶೋಧನೆ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕು: ರು. 57009-92100
ಬೆಟ್ಟೆ ರು. 47699-58130
ರಾಶಿಇಡಿ ರು. 40699-47399
ಗೊರಬಲು ರು. 19000-36899