ಲಾಕ್‌ಡೌನ್ ಬಳಿಕ ಅಡಿಕೆ ರೈತರ ಮನದಲ್ಲಿ ಆವರಿಸಿದ್ದ ಕಾರ್ಮೋಡ ಸರಿದಿದೆ. ಉತ್ತಮ ಧಾರಣೆಯೊಂದಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅಡಿಕೆ ವ್ಯಾಪಾರ ಆರಂಭವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.12): ಲಾಕ್‌ಡೌನ್ ಬಳಿಕ ತೆರೆದುಕೊಂಡ ಅಡಿಕೆ ಮಾರುಕಟ್ಟೆಧಾರಣೆ ಅಡಕೆ ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಇನ್ನೇನು ಅಡಿಕೆ ಕತೆ ಮುಗಿದೇ ಹೋಯಿತು ಎಂಬ ಆತಂಕದಲ್ಲಿ ಇದ್ದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮಿನುಗಿದೆ. ಮಾ. 23 ರಂದು ಮುಚ್ಚಿದ ಅಡಿಕೆ ಮಾರುಕಟ್ಟೆಮೇ 11 ರಂದು ತೆರೆದಿದೆ. ಆದರೆ ಮುಚ್ಚುವ ದಿನ ಇದ್ದ ಧಾರಣೆಯೇ ಬಹುತೇಕ ತೆರೆದ ದಿನವೂ ಇದ್ದಿರುವುದು ಅಡಿಕೆ ಬೆಳೆಗಾರರಲ್ಲಿ ನೆಮ್ಮದಿ ಮೂಡಿಸಿದೆ.
ಮಾ. 23 ರಂದು ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಎಲ್ಲ ವ್ಯವಹಾರಗಳು ಸ್ತಬ್ದವಾದ ರೀತಿಯಲ್ಲಿ ಅಡಿಕೆ ವ್ಯವಹಾರವೂ ಸ್ಥಗಿತಗೊಂಡಿತು. ಇದರ ನಡುವೆ ಲಾಕ್‌ಡೌನ್ ವೇಳೆಯಲ್ಲಿ ಪಾನ್ ನಿಷೇಧ, ಅಡಿಕೆ ನಿಷೇಧ, ಗುಟ್ಕಾ ನಿಷೇದ ಎಂಬಿತ್ಯಾದಿ ಸುದ್ದಿಗಳಿಂದಾಗಿ ಅಡಿಕೆ ಮಾರುಕಟ್ಟೆಯ ಕುರಿತು ರೈತರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಲಾಕ್‌ಡೌನ್ ಬಳಿಕ ಅಡಿಕೆ ಮಾರುಕಟ್ಟೆ ತೆರೆಯುವುದೇ ಇಲ್ಲವೇನೋ ಎಂಬ ಸಂಶಯವೂ ಕೆಲ ರೈತರಲ್ಲಿ ಮನೆ ಮಾಡಿತ್ತು. ಇದರ ನಡುವೆ ಅಡಿಕೆ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕವೂ ಮಾ. 3 ರ ನಂತರ ಯಾವುದೇ ಅಡಿಕೆ ಮಂಡಿ ಮತ್ತು ಸಹಕಾರಿ ಸಂಸ್ಥೆಗಳು ತಮ್ಮ ವ್ಯವಸಾರ ಆರಂಭಿಸದೆ ಇರುವುದರಿಂದ ಸಹಜವಾಗಿಯೇ ಇನ್ನಷ್ಟು ಆತಂಕ ಮನೆ ಮಾಡಿತ್ತು.
ಮೇ 11ರಿಂದ ಅಡಕೆ ವ್ಯಾಪಾರ ಪ್ರಾರಂಭ: ಅಡಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ
ರೈತರಲ್ಲಿ ಇದ್ದ ದಾಸ್ತಾನು, ಮಂಡಿಗಳಲ್ಲಿ ಇದ್ದ ದಾಸ್ತಾನು, ಗುಟ್ಕಾ ಕಂಪನಿಗಳಲ್ಲಿ ಇರಬಹುದಾದ ದಾಸ್ತಾನುಗಳ ಕುರಿತಾಗಿ ವಿವಿಧ ಮಾಹಿತಿಗಳು ರೈತರಲ್ಲಿ ಇನ್ನಷ್ಟು ಆತಂಕ ಮೂಡಿಸಲು ಕಾರಣವಾಗಿತ್ತು. ಆದರೆ ಎಲ್ಲದಕ್ಕೂ ತೆರೆ ಎಳೆಯುವಂತೆ ಮೇ 11 ರಂದು ಆರಂಭಗೊಂಡ ಅಡಿಕೆ ವ್ಯವಹಾರ ಉತ್ತಮ ಧಾರಣೆಯನ್ನು ದಾಖಲಿಸುವ ಮೂಲಕ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಉತ್ತಮ ಧಾರಣೆ ಕಂಡು ರೈತರು ತಮ್ಮಲ್ಲಿರುವ ಅಡಿಕೆಯನ್ನು ಮಾರಾಟ ಮಾಡಲು ಕೂಡ ನಿರ್ಧರಿಸಿದ್ದಾರೆ
ಮೇ 11 ರ ಅಡಿಕೆ ಧಾರಣೆ:
ಸರಕು: 45125-62300
ಬೆಟ್ಟೆ : 35619-39100
ರಾಶಿಇಡಿ: 30169-36000
ಗೊರಬಲು: 15499-21200
ಮಾ. 23 ರ ಧಾರಣೆ:
ಸರಕು: 45009-623000
ಬೆಟ್ಟೆ : 38501-42200
ರಾಶಿಇಡಿ: 34010-38600
ಗೊರಬಲು: 19889-23400